ರಾಜ್ಯ

Girl missing: 2 ತಿಂಗಳ ಹಿಂದೆ ಬೆಂಗಳೂರಿನ ಬಾಲಕಿ ನಾಪತ್ತೆ, ಮಾಟ-ಮಂತ್ರ ಪ್ರಭಾವ ಶಂಕೆ, ಮಗಳ ಪತ್ತೆಗೆ ಪೋಷಕರ ಮೊರೆ!

ರಾಜಧಾನಿ ಬೆಂಗಳೂರಿನ ರಾಜಾಜಿನಗರದಿಂದ ಓರ್ವ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಾಳೆ. ಆಕೆ ನಾಪತ್ತೆಯಾಗಿದ್ದು ಕಳೆದ ಅಕ್ಟೋಬರ್ 31ರಂದು.

Girl missing: 2 ತಿಂಗಳ ಹಿಂದೆ ಬೆಂಗಳೂರಿನ ಬಾಲಕಿ ನಾಪತ್ತೆ, ಮಾಟ-ಮಂತ್ರ ಪ್ರಭಾವ ಶಂಕೆ, ಮಗಳ ಪತ್ತೆಗೆ ಪೋಷಕರ ಮೊರೆ!
ನಾಪತ್ತೆಯಾದ 17 ವರ್ಷದ ಬಾಲಕಿ
Published On :

ಬೆಂಗಳೂರು: ರಾಜಧಾನಿ ಬೆಂಗಳೂರಿನ ರಾಜಾಜಿನಗರದಿಂದ ಓರ್ವ ಅಪ್ರಾಪ್ತ ಬಾಲಕಿ ನಾಪತ್ತೆಯಾಗಿದ್ದಾಳೆ(Girl missing). ಆಕೆ ನಾಪತ್ತೆಯಾಗಿದ್ದು ಕಳೆದ ಅಕ್ಟೋಬರ್ 31ರಂದು. 

17 ವರ್ಷದ ಬಾಲಕಿ ಅನುಷ್ಕ ವರ್ಮ(Anushka Verma) ಕಳೆದ ಅಕ್ಟೋಬರ್ 31ರಂದು ಬೆಳಗ್ಗೆ 8.30ಕ್ಕೆ ಮನೆಬಿಟ್ಟು ಹೋದವಳು ಇದುವರೆಗೆ ಹಿಂತಿರುಗಿಲ್ಲ. ಪೊಲೀಸರು ಇಷ್ಟು ದಿನ ತೀವ್ರ ಹುಡುಕಾಟ ನಡೆಸಿದರೂ ಕೂಡ ಇನ್ನೂ ಆಕೆಯ ಸುಳಿವು ಸಿಕ್ಕಿಲ್ಲ. ಸುಬ್ರಹ್ಮಣ್ಯನಗರ ಪೊಲೀಸ್ ಠಾಣೆಯಲ್ಲಿ ಆಕೆಯ ಪೋಷಕರು ದೂರು ದಾಖಲಿಸಿದ್ದು ಸೋಷಿಯಲ್ ಮೀಡಿಯಾ ಮೂಲಕ ಕೂಡ ತಮ್ಮ ಮಗಳನ್ನು ಯಾರಾದರೂ ಹುಡುಕಿಕೊಡಿ ಎಂದು ಮೊರೆಯಿಟ್ಟಿದ್ದಾರೆ.

ಈ ಕುರಿತು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪ್ರತಿನಿಧಿ ಜೊತೆಗೆ ಮಾತನಾಡಿದ ಅನುಷ್ಕಾಳ ತಂದೆ ಅಭಿಷೇಕ್ ವರ್ಮ, ತಮ್ಮ ಮಗಳು ಮಾಟ-ಮಂತ್ರ ಅಭಿಚಾರದ ಪ್ರಭಾವಕ್ಕೆ ಒಳಗಾಗಿದ್ದಳು. ಆಕೆಗೆ ಕೆಲವು ಸಂಘ-ಸಂಸ್ಥೆಗಳು ಮತ್ತು ವ್ಯಕ್ತಿಗಳ ಪರಿಚಯ, ಬೆಂಬಲವಿತ್ತು. ಮಗಳು ಕಾಣೆಯಾದ ದಿನದಿಂದ ನಮ್ಮ ಜೀವನ ನರಕವಾಗಿಬಿಟ್ಟಿದೆ ಎಂದರು.

ಅಕ್ಟೋಬರ್ 31ರಂದು ಆಗಿದ್ದೇನು?: ಅಂದು ಅಕ್ಟೋಬರ್ 31ರಂದು ಆದ ಘಟನೆಯನ್ನು ಅಭಿಷೇಕ್ ವರ್ಮ ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ''ನಾನು ಮತ್ತು ನನ್ನ ಪತ್ನಿ ಬೆಳಗ್ಗೆ ಸುಮಾರು 7 ಗಂಟೆ ಹೊತ್ತಿಗೆ ವಾಕಿಂಗ್ ಹೋಗಿ 8.15ರ ಹೊತ್ತಿಗೆ ವಾಪಸ್ಸಾಗಿದ್ದೆವು. ಮನೆಗೆ ಹಿಂತಿರುಗಿದಾಗ ಮಗಳು ಇರಲಿಲ್ಲ. ಹುಡುಕಿದಾಗ ಸಿಗದಿದ್ದಾಗ ಗಾಬರಿಯಾಗಿ ಪೊಲೀಸರಿಗೆ ದೂರು ನೀಡಿದೆವು. ಕೊನೆಗೆ ಪೊಲೀಸರ ಮೂಲಕ ಸಿಸಿಟಿವಿ ಪರಿಶೀಲಿಸಿದಾಗ ನಮ್ಮ ಮಗಳು ಆಟೋರಿಕ್ಷಾದಲ್ಲಿ ಹೊರಮಾವು ಕಡೆಗೆ ಹೋಗಿದ್ದಾಳೆ ಎಂದು ಗೊತ್ತಾಯಿತು. ನಂತರ ಆಕೆ ಎಲ್ಲಿ ಹೋದಳು, ಆಕೆಗೆ ಏನಾಯಿತು ಎಂದು ಇದುವರೆಗೆ ನಮಗೆ ಗೊತ್ತಿಲ್ಲ'' ಎಂದರು.

ಬಾಲಕಿಯ ಪೋಷಕರು ನೀಡಿದ ದೂರಿನ ಆಧಾರದ ಮೇರೆ ನವೆಂಬರ್ 1ರಂದು ಪೊಲೀಸರು ಸೆಕ್ಷನ್ 363ರಡಿ ಕೇಸು ದಾಖಲಿಸಿಕೊಂಡಿದ್ದಾರೆ. ಮನೆಯಿಂದ ಹೋಗುವಾಗ ಅನುಷ್ಕಾ ತನ್ನ ಮೊಬೈಲ್ ಸೇರಿದಂತೆ ಶಾಲೆಯ ವಸ್ತುಗಳನ್ನು ಬಿಟ್ಟು ಹೋಗಿದ್ದಾಳೆ. ಒಂದು ಜೊತೆ ಬಟ್ಟೆ ಮತ್ತು 2 ಸಾವಿರ ರೂಪಾಯಿಗಳನ್ನು ಮಾತ್ರ ತೆಗೆದುಕೊಂಡು ಹೋಗಿದ್ದಾಳೆ ಎಂದು ಬೆಂಗಳೂರು ಉತ್ತರ ವಿಭಾಗದ ಉಪ ಆಯುಕ್ತ ವಿನಾಯಕ್ ಪಾಟೀಲ್ ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಆದೇಶ ಪ್ರಕಾರ, ಮಕ್ಕಳು ನಾಪತ್ತೆಯಾದರೆ ದೂರು ನೀಡಿದ 24 ಗಂಟೆಗಳೊಳಗೆ ಐಪಿಸಿ ಸೆಕ್ಷನ್ 363ರಡಿಯಲ್ಲಿ ಎಫ್ಐಆರ್ ದಾಖಲಿಸಬೇಕು. ನಾಪತ್ತೆಯಾದ ಮಗು ದೂರು ನೀಡಿದ 4 ತಿಂಗಳೊಳಗೆ ಸಿಗದಿದ್ದರೆ ಕೇಸನ್ನು ಜಿಲ್ಲಾ ಪೊಲೀಸ್ ಮಾನವ ಕಳ್ಳಸಾಗಣೆ ವಿರೋಧಿ ಘಟಕಕ್ಕೆ ವರ್ಗಾಯಿಸಬೇಕು. 

ಪೊಲೀಸರು ಬಾಲಕಿಯ ಮನೆಯ ಹತ್ತಿರದ ಹಾಗೂ ಹೊರಮಾವಿನ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದಾರೆ. ಇನ್ನು ಅನೇಕ ಧಾರ್ಮಿಕ ಕೇಂದ್ರಗಳು, ಅನಾಥಾಶ್ರಮಗಳು, ಪಿಜಿ ವಸತಿ ಕೇಂದ್ರಗಳು, ಬಾಲಕಿಯ ಸ್ನೇಹಿತರು, ಕುಟುಂಬ ಸದಸ್ಯರು, ಬಂಧುಗಳನ್ನು ವಿಚಾರಿಸಿದ್ದಾರೆ, ಆಕೆಯ ಫೋನ್ ಮತ್ತು ಮೇಲ್ ಗಳನ್ನು ಪರಿಶೀಲಿಸಿದ್ದಾರೆ, ಆದರೆ ಇದುವರೆಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪಾಟೀಲ್ ಹೇಳುತ್ತಾರೆ.

ತಮ್ಮ ಮಗಳು ಅನುಷ್ಕಾ ನಾಪತ್ತೆಯಾದ ನಂತರ ಆಕೆ ಅಭಿಚಾರ-ಮಾಟ ಮಂತ್ರಗಳ ಪ್ರಭಾವಕ್ಕೆ ಒಳಗಾಗಿದ್ದಳು ಎಂದು ಗೊತ್ತಾಯಿತು. ಪೊಲೀಸರು ಆಕೆಯ ಮೊಬೈಲ್ ಪರಿಶೀಲಿಸಿದಾಗ ಇದೆಲ್ಲಾ ಗೊತ್ತಾಯಿತು ಎಂದು ಪೋಷಕರು ಹೇಳುತ್ತಾರೆ. ಅನುಷ್ಕಾಳ ಪತ್ತೆಯಾದರೆ ಸಾರ್ವಜನಿಕರು 9663875821ಗೆ ಕರೆ ಮಾಡಿ ಮಾಹಿತಿ ನೀಡಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.