ಹೊಸ ವರ್ಷಾಚರಣೆ ಮೇಲೆ 'ಓಮಿಕ್ರಾನ್' ಕರಿನೆರಳು: ಇಂದು ಸಂಜೆ 6 ರಿಂದ ನಾಳೆ ಮುಂಜಾನೆ 5 ರವರೆಗೆ ನಗರದಲ್ಲಿ ಕಟ್ಟುನಿಟ್ಟಿನ ನಿರ್ಬಂಧ ಜಾರಿ
ಕೊರೋನಾ ವೈರಸ್ ರೂಪಾಂತರಿ ತಳಿ ಓಮಿಕ್ರಾನ್ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಕಡಿವಾಣ ಹಾಕಲು ಮುಂದಾಗಿದೆ. ಇದರಂತೆ ಡಿಸೆಂಬರ್ 31ರ ಸಂಜೆ 6ರಿಂದ ಮುಂಜಾನೆ 5ರವರೆಗೆ...

ಬೆಂಗಳೂರು: ಕೊರೋನಾ ವೈರಸ್ ರೂಪಾಂತರಿ ತಳಿ ಓಮಿಕ್ರಾನ್ ಆತಂಕ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ನಗರದಲ್ಲಿ ನೈಟ್ ಕರ್ಫ್ಯೂ ಜಾರಿಗೊಳಿಸಿರುವ ರಾಜ್ಯ ಸರ್ಕಾರ ಇದೀಗ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷ ಸಂಭ್ರಮಾಚರಣೆಗೆ ಕಡಿವಾಣ ಹಾಕಲು ಮುಂದಾಗಿದೆ. ಇದರಂತೆ ಡಿಸೆಂಬರ್ 31ರ ಸಂಜೆ 6ರಿಂದ ಮುಂಜಾನೆ 5ರವರೆಗೆ ಸಾರ್ವಜನಿಕ ಸ್ಥಳಗಳಲ್ಲಿ ಐದು ಅಥವಾ 5ಕ್ಕಿಂತ ಹೆಚ್ಚು ಜನ ಸೇರಿ ಹೊಸ ವರ್ಷದ ಯಾವುದೇ ರೀತಿಯ ಸಂಭ್ರಮಾಚರಣೆ ಮಾಡದಂತೆ ನಿಷೇಧ ಹೇರಿದೆ.
ಈ ಸಂಬಂಧ ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಆದೇಶ ಹೊರಡಿಸಿದ್ದು, ಡಿಸೆಂಬರ್ 31ರ ಸಂಜೆ 6 ಗಂಟೆಯಿಂದ ಅನ್ವಯವಾಗುವಂತೆ ನಗರದ ಸಾರ್ವಜನಿಕ ಸ್ಥಳಗಳು, ಪಾರ್ಕ್ ಮೈದಾನ ಸೇರಿದಂತೆ ಇದರೆ ಸಾರ್ವಜನಿಕ ಜಾಗಗಳಲ್ಲಿ ಸಂಭ್ರಮಾಚರಣೆ ಮಾಡುವಂತಿಲ್ಲ ಎಂದು ತಿಳಿಸಲಾಗಿದೆ.
ಮನೆಗಳು, ವಸತಿ ಸಂಕೀರ್ಣಗಳು, ಖಾಸಗಿ ಕ್ಲಬ್ ಗಳಲ್ಲಿ ಸಾರ್ವಜನಿಕರು ಅಥವಾ ಸದಸ್ಯರು ಯಾವುದೇ ವಿಶೇಷ ಕಾರ್ಯಕ್ರಮ ಆಯೋಜಿಸುವಂತಿಲ್ಲ.
ಹೋಟೆಲ್, ಪಬ್, ಕ್ಲಬ್, ಮಾಲ್, ರೆಸ್ಟೋರಂಟ್ ಗಳಲ್ಲಿ ಯಾವುದೇ ಡಿಜೆ ಕಾರ್ಯಕ್ರಮ, ನೃತ್ಯ, ಸಂಗೀತ ಗಾಯನ, ಬ್ಯಾಂಡ್ ಇತ್ಯಾದಿ ಕಾರ್ಯಕ್ರಮಗಳನ್ನು ಆಯೋಜನೆ ನಿಷೇಧಿಸಲಾಗಿದೆ. ಇನ್ನು ರಾತ್ರಿ 10ರವರೆಗೆ ಹೋಟೆಲ್, ಪಬ್, ಕ್ಲಬ್, ರೆಸ್ಟೋರೆಂಟ್, ಮಾಲ್ ಗಳು ಕಡ್ಡಾಯವಾಗಿ ಕೊರೋನಾ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸರ್ಕಾರ ಸೂಚಿಸಿರುವ ಎಲ್ಲಾ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಸೂಚಿಸಲಾಗಿದೆ.
ಇದನ್ನೂ ಓದಿ: ನೈಟ್ ಕರ್ಫ್ಯೂ: ಇಡೀ ಬೆಂಗಳೂರಲ್ಲಿ ಪೊಲೀಸರ ಕಣ್ಗಾವಲು
ಒಂದು ವೇಳೆ ಆದೇಶ ಹಾಗೂ ಕೋವಿಡ್ ಮಾರ್ಗಸೂಚಿ ಉಲ್ಲಂಘಿಸಿದ್ದೇ ಆದರೆ, ವಿಪತ್ತು ನಿರ್ವಹಣೆ ಕಾಯ್ದೆ ಹಾಗೂ ಸಾಂಕ್ರಾಮಿ ರೋಗ ಕಾಯ್ದೆ ಅಡಿಯಲ್ಲಿ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆಯನ್ನು ನೀಡಿದ್ದಾರೆ.
ಡಿಜೆ, ವಿಶೇಷ ಕಾರ್ಯಕ್ರಮಗಳನ್ನು ಹೊರತಾಗಿಸಿ ಮಾಲ್, ಪಬ್, ಬಾರ್ ಹಾಗೂ ರೆಸ್ಟೋರೆಂಟ್ ಗಳು ನೈಟ್ ಕರ್ಫ್ಯೂ ಆರಂಭವಾಗುವ ರಾತ್ರಿ 10 ರವರೆಗೂ ಕಾರ್ಯನಿರ್ವಹಿಸಬುದು. ನೈಟ್ ಕರ್ಫ್ಯೂ ಜಾರಿಯಾದ ಬಳಿಕ ಬಾಗಿಲು ಮುಚ್ಚಬೇಕು. ಸಿಬ್ಬಂದಿಗಳು ಹಾಗೂ ಇತರೆ ಜನರು ಮನೆಗಳಿಗೆ ತಲುಪುವ ಸಲುವಾಗಿ ರಾತ್ರಿ 10 ಗಂಟೆ ಬಳಿಕ ಕೆಲ ಹೊತ್ತಿನವರೆಗೂ ಓಡಾಟಕ್ಕೆ ಅವರಿಗೆ ಅವಕಾಶ ನೀಡಲಾಗುತ್ತದೆ. ನಂತರ ಕಠಿಣ ನಿರ್ಬಂಧಗಳನ್ನು ಹೇರಲಾಗುತ್ತದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


