ಬೆಂಗಳೂರಿನಲ್ಲಿ ಓಮಿಕ್ರಾನ್ ಸೋಂಕು: ಸದ್ಯಕ್ಕೆ ಥಿಯೇಟರ್, ಹೋಟೆಲ್, ಮಾಲ್ ಬಂದ್ ಇಲ್ಲ ಎಂದ ಸಚಿವ ಅಶ್ವತ್ಥನಾರಾಯಣ
ಕೋವಿಡ್ ವೈರಾಣುವಿನ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಆತಂಕ ಸೃಷ್ಟಿಸಿರುವುದು ನಿಜವಾದರೂ ಸದ್ಯಕ್ಕೆ ರಾಜ್ಯದಲ್ಲಿ ಚಿತ್ರ ಮಂದಿರ, ಹೋಟೆಲ್ ಮತ್ತು ಮಾಲ್ ಗಳನ್ನು ಮುಚ್ಚುವುದಿಲ್ಲ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.

ಬೆಂಗಳೂರು: ಕೋವಿಡ್ ವೈರಾಣುವಿನ ಹೊಸ ರೂಪಾಂತರಿ ತಳಿ ಓಮಿಕ್ರಾನ್ ಆತಂಕ ಸೃಷ್ಟಿಸಿರುವುದು ನಿಜವಾದರೂ ಸದ್ಯಕ್ಕೆ ರಾಜ್ಯದಲ್ಲಿ ಚಿತ್ರ ಮಂದಿರ, ಹೋಟೆಲ್ ಮತ್ತು ಮಾಲ್ ಗಳನ್ನು ಮುಚ್ಚುವುದಿಲ್ಲ ಎಂದು ಸಚಿವ ಅಶ್ವತ್ಥನಾರಾಯಣ ತಿಳಿಸಿದರು.
'ಪ್ರೇಮಂ ಪೂಜ್ಯಂ'ಚಿತ್ರದ ನಾಯಕ ನಟ ಪ್ರೇಮ್ ಅವರು ಗುರುವಾರ ಅವರನ್ನು ಇಲ್ಲಿ ಭೇಟಿ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸದ್ಯಕ್ಕೆ ಯಾವುದೇ ವಲಯದ ಚಟುವಟಿಕೆಗಳನ್ನು ನಿರ್ಬಂಧಿಸುವ ಚಿಂತನೆ ಸರ್ಕಾರಕ್ಕಿಲ್ಲ. ವಾಣಿಜ್ಯ, ಸರ್ಕಾರಿ ಕಚೇರಿ ಸ್ಥಳಗಳಿಗೆ ಹೋಗುವವರಿಗೆ ಲಸಿಕೆ ಕಡ್ಡಾಯ ಮಾಡಲಾಗುವುದು ಎಂದರು.
ಓಮಿಕ್ರಾನ್ ವೈರಾಣುವಿನಿಂದ ಜೀವಕ್ಕೇನೂ ಅಪಾಯವಿಲ್ಲ. ಆದರೆ ಮುಂಜಾಗ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಇದುವರೆಗೂ ಒಂದೂ ಲಸಿಕೆಯನ್ನು ಪಡೆದುಕೊಳ್ಳದೆ ಇರುವವರು ಲಸಿಕೆಯನ್ನು ಹಾಕಿಸಿಕೊಳ್ಳಬೇಕು. ಸರಕಾರ ಇದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಿದೆ. ಆದರೆ, ಅನಗತ್ಯ ಭಯ-ಭೀತಿಗಳು ಬೇಡ ಎಂದು ಅವರು ಹೇಳಿದರು.
ಚಿತ್ರಮಂದಿರ, ಹೋಟೆಲ್, ಮಾಲ್ ಗಳಂತಹ ಜನಸಂದಣಿ ಸ್ಥಳಗಳು ಸೇರಿದಂತೆ ಎಲ್ಲೆಡೆಗಳಿಗೂ ಜನರು ಕಡ್ಡಾಯವಾಗಿ ಮಾಸ್ಕ್ ಹಾಕಿಕೊಂಡು ಹೋಗಬೇಕು. ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿರುವ 11 ದೇಶಗಳ ಪರಿಸ್ಥಿತಿ ನೋಡಿಕೊಂಡು ಮುಂದಿನ ಹೆಜ್ಜೆ ಇಡಲಾಗುವುದು. ಸದ್ಯಕ್ಕೆ ರಾಜ್ಯದಲ್ಲಿ 2 ಪ್ರಕರಣಗಳು ಪತ್ತೆಯಾಗಿದ್ದು, ಇವರ ಪರೀಕ್ಷಾ ವರದಿಗಳನ್ನು ಜಿನೋಮ್ ಸೀಕ್ವೆನ್ಸ್ ಗೆ ಕಳಿಸಲಾಗಿದ್ದು, ಸಂಬಂಧಿಸಿದ ವ್ಯಕ್ತಿಗಳನ್ನು ಪ್ರತ್ಯೇಕ ವಾಸದಲ್ಲಿಡಲಾಗಿದೆ. ಅಂತಿಮ ಫಲಿತಾಂಶ ನೆಗೆಟೀವ್ ಆಗಿ ಬಂದರೆ ಮಾತ್ರ ಇವರನ್ನು ಮನೆಗೆ ಕಳಿಸಿ ಕೊಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವವರಿಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆಯನ್ನು ಕಡ್ಡಾಯಗೊಳಿಸಲಾಗಿದ್ದು, ನೆಗೆಟಿವ್ ಬಂದವರಿಗೆ ಮಾತ್ರ ರಾಜ್ಯದೊಳಕ್ಕೆ ಪ್ರವೇಶಾನುಮತಿ ನೀಡಲಾಗುವುದು. ಈ ಆತಂಕದ ಸಂದರ್ಭದಲ್ಲಿ ಪ್ರತಿಯೊಬ್ಬರ ಜೀವ ಮತ್ತು ಜೀವನ ಉಳಿಸುವುದು ಸರಕಾರದ ಆದ್ಯತೆಯಾಗಿದೆ ಎಂದು ಸಚಿವರು ನುಡಿದರು.
ಓಮೈಕ್ರಾನ್ ಕಾಣಿಸಿಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿಯಲ್ಲಿ ನಡೆಸಲು ಉದ್ದೇಶಿಸಿರುವ ವಿಧಾನಮಂಡಲದ ಅಧಿವೇಶನವನ್ನು ಕೂಡ ರದ್ದುಪಡಿಸಬೇಕೆಂದು ವಿಧಾನಸೌಧ ಸಚಿವಾಲಯ ಸಲಹೆ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಭಾಪತಿಯೊಂದಿಗೆ ಚರ್ಚಿಸಿ ಈ ಬಗ್ಗೆ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು ಅವರು ತಿಳಿಸಿದರು.
ಪ್ರೇಮ್ ಚಿತ್ರಕ್ಕೆ ಅಭಿನಂದನೆ:
ನಟ ಪ್ರೇಮ್ ವೈದ್ಯರಾಗಿ ಅಭಿನಯಿಸಿರುವ 'ಪ್ರೇಮಂ ಪೂಜ್ಯಂ' ಸಿನಿಮಾ ಜನಪರ ಕಳಕಳಿ ಹೊಂದಿದೆ. ಇವರು ನಮ್ಮೆಲ್ಲರ ಲವ್ಲಿ ಸ್ಟಾರ್ ಆಗಿದ್ದಾರೆ. ಇದರಲ್ಲಿ ಕರೋನಾ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪಾತ್ರದಲ್ಲಿ ಇವರು ಜನರ ಜೀವವನ್ನು ರಕ್ಷಿಸುವ ಕೆಲಸ ಮಾಡುತ್ತಿರುವ ಕತೆ ಇದೆ. ಇದರಲ್ಲಿರುವ ಹಾಡುಗಳು ಕೂಡ ಚೆನ್ನಾಗಿದ್ದು, ಸರಕಾರದ ಪರವಾಗಿ ಮತ್ತು ವೈಯಕ್ತಿಕವಾಗಿ ಅಭಿನಂದನೆ ಸಲ್ಲಿಸುವುದಾಗಿ ಸಚಿವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


