ನಾಳೆಯಿಂದ ಹೆಚ್ಚುವರಿ 5,000 ಬಸ್ ಗಳ ಸಂಚಾರ: ಡಿಸಿಎಂ ಲಕ್ಷ್ಮಣ ಸವದಿ ವಿಶ್ವಾಸ
ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ಸರ್ಕಾರ 170 ಕೋಟಿ ರೂ. ವರೆಗೆ ನಷ್ಟ ಅನುಭವಿಸುತ್ತಿದೆ ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.

ಬೀದರ್: ರಾಜ್ಯ ರಸ್ತೆ ಸಾರಿಗೆ ಸಂಸ್ಥೆ ನೌಕರರ ಮುಷ್ಕರದಿಂದ ಸರ್ಕಾರ 170 ಕೋಟಿ ರೂ. ವರೆಗೆ ನಷ್ಟ ಅನುಭವಿಸುತ್ತಿದೆ ಎಂದು ಸಾರಿಗೆ ಸಚಿವರೂ ಆದ ಉಪಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.
ಕರ್ತವ್ಯಕ್ಕೆ ಹಾಜರಾಗಲು ಹೆಚ್ಚಿನ ಸಂಖ್ಯೆಯ ನೌಕರರು ಮುಂದೆ ಬರುತ್ತಿದ್ದು, ಶುಕ್ರವಾರ ಬೆಳಗ್ಗೆಯಿಂದ 5,000ಕ್ಕೂ ಹೆಚ್ಚು ಬಸ್ ಗಳು ಸಂಚರಿಸುವ ಸಾಧ್ಯತೆ ಇದೆ ಎಂದು ಅವರು ತಿಳಿಸಿದ್ದಾರೆ.
ಗುರುವಾರ ಇಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಸಚಿವರು, ಕೆಲಸಕ್ಕೆ ಮರಳುವಂತೆ ನೌಕರರಿಗೆ ಸರ್ಕಾರ ಮತ್ತೊಮ್ಮೆ ಮನವಿ ಮಾಡುತ್ತಿದೆ. ಸಾಂಕ್ರಾಮಿಕ ರೋಗದಿಂದಾಗಿ ಸರ್ಕಾರ ಕಠಿಣ ಆರ್ಥಿಕ ಸ್ಥಿತಿಯನ್ನು ಎದುರಿಸುತ್ತಿದೆ. ಗುರುವಾರ ಬೆಳಗ್ಗೆ ಹೆಚ್ಚಿನ ನೌಕರರು ಕೆಲಸಕ್ಕೆ ಮರಳಿದ್ದಾರೆ. ಇಂದು ಬೆಳಗ್ಗೆಯಿಂದ 2,500 ಬಸ್ ಗಳು ಸಂಚರಿಸುತ್ತಿವೆ. ಶುಕ್ರವಾರ ಬೆಳಗ್ಗೆಯಿಂದ 5,000ಕ್ಕೂ ಹೆಚ್ಚು ಬಸ್ ಗಳು ಸಂಚರಿಸುವ ನಿರೀಕ್ಷೆಯಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮುಷ್ಕರದ ವೇಳೆ ಕಲ್ಲು ತೂರಾಟ ಮತ್ತು ಇತರ ಘಟನೆಗಳಿಂದಾಗಿ 59ಕ್ಕೂ ಹೆಚ್ಚು ಬಸ್ ಗಳು ಹಾನಿಗೀಡಾಗಿವೆ. ಇಂತಹ ಘಟನೆಗಳನ್ನು ಸರ್ಕಾರ ಸಹಿಸುವುದಿಲ್ಲ. ಸರ್ಕಾರ ಕಾನೂನಿನಂತೆ ಕ್ರಮ ತೆಗೆದುಕೊಳ್ಳಲಿದೆ ಎಂದು ಲಕ್ಷ್ಮಣ ಸವದಿ ಎಚ್ಚರಿಸಿದ್ದಾರೆ.
ಸರ್ಕಾರ ಒದಗಿಸಿರುವ ಸೌಲಭ್ಯದ ಹೊರತಾಗಿಯೂ ನೌಕರರು ಮುಷ್ಕರ ಮುಂದುವರಿಸಿದರೆ, ಹೆಚ್ಚಿನ ಖಾಸಗಿ ಬಸ್ ಗಳನ್ನು ಪರ್ಯಾಯವಾಗಿ ಬಳಸಿಕೊಳ್ಳಲಾಗುವುದು. ಗುರುವಾರದವರೆಗೆ 24,000 ಖಾಸಗಿ ಬಸ್ ಗಳನ್ನು ಸಾರ್ವಜನಿಕ ಸೇವೆಗಳಿಗೆ ಬಳಸಿಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಕೊರೋನಾದಿಂದಾಗಿ ಈಗಾಗಲೇ ಭಾದಿತವಾಗಿರುವ ರಸ್ತೆ ಸಾರಿಗೆ ನಿಗಮಗಳ ಆರ್ಥಿಕ ಬೆಳವಣಿಗೆಯ ಮೇಲೆ ಇಂತಹ ಮುಷ್ಕರಗಳು ಇನ್ನಷ್ಟು ಪ್ರತಿಕೂಲ ಪರಿಣಾಮ ಬೀರುತ್ತವೆ ಎಂಬುದನ್ನು ನೌಕರರು ಅರಿತುಕೊಳ್ಳಬೇಕು. ಸಾಂಕ್ರಾಮಿಕ ಸಮಯದಲ್ಲಿ ಸಹ ಸಂಬಳ ಮತ್ತು ಇತರ ಸವಲತ್ತುಗಳನ್ನು ಸರ್ಕಾರ ಒದಗಿಸಿದೆ ಎಂಬುದನ್ನು ನೌಕರರು ಮರೆಯಬಾರದು ಎಂದು ಸಚಿವರು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


