ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಅಪಘಾತ ಮುನ್ಸೂಚನೆ ನೀಡುವ ಆಧುನಿಕ ವ್ಯವಸ್ಥೆ ಜಾರಿ: ಲಕ್ಷ್ಮಣ ಸವದಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅಪಘಾತಗಳನ್ನು ತಪ್ಪಿಸಲು ವಿಶೇಷ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.

ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಬಸ್ಸುಗಳಲ್ಲಿ ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಅಪಘಾತಗಳನ್ನು ತಪ್ಪಿಸಲು ವಿಶೇಷ ವ್ಯವಸ್ಥೆ ಜಾರಿಗೆ ಬರಲಿದೆ ಎಂದು ಸಾರಿಗೆ ಸಚಿವರೂ ಆಗಿರುವ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಅವರು ಹೇಳಿದ್ದಾರೆ.
ಈಗ ಪ್ರಾಯೋಗಿಕ ಹಂತದಲ್ಲಿರುವ ಈ ಕ್ರಮಗಳು ಅನುಷ್ಠಾನಗೊಂಡರೆ ಬಸ್ಸುಗಳ ಎದುರು ಆಕಸ್ಮಿಕವಾಗಿ ಇತರ ವಾಹನಗಳು ಅಥವಾ ವ್ಯಕ್ತಿಗಳು ಅಡ್ಡ ಬಂದಲ್ಲಿ ಚಾಲಕರಿಗೆ ಎಚ್ಚರಿಕೆಯ ಸೂಚನೆ ನೀಡುವ ಮತ್ತು ಸ್ವಯಂಚಾಲಿತವಾಗಿಯೇ ಬ್ರೇಕ್ ಹಾಕಿ ಅಪಘಾತ ತಪ್ಪಿಸುವುದಕ್ಕೆ ಸಹಾಯವಾಗುತ್ತದೆ ಎಂದು ಲಕ್ಷ್ಮಣ ಸವದಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆ, ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ, ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಅವರು ಮಾತನಾಡಿದರು.
ಅಪಘಾತಗಳ ಪರಿಹಾರವಾಗಿ ರಾಜ್ಯದಲ್ಲಿ ಪ್ರತಿವರ್ಷ ಸುಮಾರು 100 ಕೋಟಿ ರೂಪಾಯಿಗಿಂತ ಹೆಚ್ಚು ಹಣ ನಮ್ಮ ಸಾರಿಗೆ ಸಂಸ್ಥೆಗಳಿಂದ ವ್ಯಯವಾಗುತ್ತಿದೆ. ಅಷ್ಟೇ ಅಲ್ಲ, ಅನೇಕ ಸಾವು-ನೋವುಗಳಿಗೂ ಈ ಅಪಘಾತಗಳು ಕಾರಣವಾಗುತ್ತಿವೆ ಎಂದರು.
ಹಲವು ಸಂದರ್ಭಗಳಲ್ಲಿ ಇತರ ವಾಹನ ಚಾಲಕರು ನಡೆಸುವ ನಿರ್ಲಕ್ಷ್ಯದ ಚಾಲನೆಯಿಂದಾಗಿ ಉಂಟಾಗುವ ಅಪಘಾತಗಳಲ್ಲಿ ವಿನಾಕಾರಣ ನಮ್ಮ ಸರ್ಕಾರಿ ಸಾರಿಗೆ ಸಂಸ್ಥೆಗಳು ಪರಿಹಾರ ನೀಡುವಂತಹ ಸಂದರ್ಭಗಳೂ ಎದುರಾಗಿವೆ. ಇವುಗಳನ್ನು ತಪ್ಪಿಸಲು ಅಪಘಾತಗಳ ಮುನ್ಸೂಚನೆ ನೀಡುವಂಥ ಉಪಕರಣಗಳನ್ನು ಬಸ್ಸುಗಳಲ್ಲಿ ಅಳವಡಿಸಲು ಸೂಚಿಸಲಾಗಿತ್ತು. ಅದರಂತೆ ಕೆಲವು ಹೈಟೆಕ್ ಸಂಸ್ಥೆಗಳೊಂದಿಗೆ ನಮ್ಮ ಸಾರಿಗೆ ಅಧಿಕಾರಿಗಳು ಕಾರ್ಯನಿರತರಾಗಿದ್ದಾರೆ. ಈಗಾಗಲೇ ಇಂತಹ ಉಪಕರಣಗಳನ್ನು ಅಭಿವೃದ್ಧಿಪಡಿಸಿದ ಸಂಸ್ಥೆಗಳ ಸಹಯೋಗದೊಂದಿಗೆ ಪ್ರಾಯೋಗಿಕವಾಗಿ ಈ ತಂತ್ರಜ್ಞಾನವನ್ನು ಶೀಘ್ರದಲ್ಲಿಯೇ ಪಡೆದುಕೊಳ್ಳಲು ಚಿಂತಿಸಲಾಗಿದೆ ಎಂದು ಸವದಿ ತಿಳಿಸಿದರು.
ಕೆಲವು ದುಬಾರಿ ಖಾಸಗಿ ಕಾರುಗಳಲ್ಲಿ ಇಂತಹ ತಂತ್ರಜ್ಞಾನ ಅಳವಡಿಸಿರುವುದರಿಂದ ರಾತ್ರಿ ವೇಳೆಯಲ್ಲಿ ಒಂದು ವೇಳೆ ಚಾಲಕರಿಗೆ ನಿದ್ದೆಯ ಮಂಪರು ಕವಿದಂತಾದರೆ ತಕ್ಷಣವೇ ಎಚ್ಚರಿಕೆಯ ಸೂಚನೆ ನೀಡುವಂತಹ ಮತ್ತು ಆಕಸ್ಮಿಕವಾಗಿ ವಾಹನಗಳು ಅಥವಾ ವ್ಯಕ್ತಿಗಳು ಎದುರಿಗೆ ಅಡ್ಡಬಂದರೆ ತಂತಾನಾಗಿಯೇ ಬ್ರೇಕ್ ಹಾಕುವಂತಹ ವ್ಯವಸ್ಥೆ ಜಾರಿಗೆ ಬಂದಿದೆ. ಇಂತಹ ಆಧುನಿಕ ಪ್ರಯೋಗ ನಮ್ಮ ಸರ್ಕಾರಿ ಸಾರಿಗೆ ಬಸ್ಸುಗಳಲ್ಲೂ ಯಶಸ್ವಿಯಾದರೆ ಹಲವು ರೀತಿಯ ಅನುಕೂಲ ಸಾಧ್ಯವೆಂದು ಸವದಿ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


