ಬೆಂಗಳೂರು ಟೆಕ್ ಸಮಿಟ್ 2020: ನವೋದ್ಯಮ, ಕೃಷಿ, ತಂತ್ರಜ್ಞಾನ, ಸೈಬರ್ ಸೇರಿ ಮಹತ್ವದ 8 ಒಪ್ಪಂದಗಳಿಗೆ ಅಂಕಿತ
ಮೂರು ದಿನಗಳ ಬೆಂಗಳೂರು ಟೆಕ್ ಸಮಿಟ್-2020ಯಲ್ಲಿ ಎರಡನೇ ದಿನವಾದ ಇಂದು ರಾಜ್ಯವು ಜಾಗತಿಕ ಆವಿಷ್ಕಾರ ಮೈತ್ರಿಕೂಟದ ಎಂಟು ದೇಶಗಳ ಜತೆ ಮಹತ್ವದ ಎಂಟು ಒಪ್ಪಂದಗಳಿಗೆ ಸಹಿ ಹಾಕಿದೆ.

ಬೆಂಗಳೂರು: ಮೂರು ದಿನಗಳ ಬೆಂಗಳೂರು ಟೆಕ್ ಸಮಿಟ್-2020ಯಲ್ಲಿ ಎರಡನೇ ದಿನವಾದ ಇಂದು ರಾಜ್ಯವು ಜಾಗತಿಕ ಆವಿಷ್ಕಾರ ಮೈತ್ರಿಕೂಟದ ಎಂಟು ದೇಶಗಳ ಜತೆ ಮಹತ್ವದ ಎಂಟು ಒಪ್ಪಂದಗಳಿಗೆ ಸಹಿ ಹಾಕಿದೆ.
ನವೋದ್ಯಮಗಳ ಸ್ಥಾಪನೆ,ಕೌಶಲ್ಯಾಭಿವೃದ್ಧಿ,ಸಂಶೋಧನೆ ಮತ್ತು ಅಭಿವೃದ್ಧಿ, ಎಕೋಸಿಸ್ಟಮ್ ಕನೆಕ್ಟ್, ಲೈಫ್ ಸೈನ್ಸ್, ಜೈವಿಕ ತಂತ್ರಜ್ಞಾನ, ಆರೋಗ್ಯ, ರಕ್ಷಣೆ, ಬಾಹ್ಯಾಕಾಶ, ಕ್ರೀಡೆ, ಶಿಕ್ಷಣ, ಪರಸ್ಪರ ಮಾರುಕಟ್ಟೆ ವಿಸ್ತರಣೆ ಸೇರಿದಂತೆ ಹಲವು ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವಿಧ ದೇಶಗಳ ಜತೆ ಕರ್ನಾಟಕವು ಅಂಕಿತ ಹಾಕಿತು.
ಐಟಿ-ಬಿಟಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿ ಡಾ. ಸಿ.ಎನ್.ಅಶ್ವತ್ಥನಾರಾಯಣ ಅವರ ಸಮ್ಮುಖದಲ್ಲಿ ವರ್ಚುಯಲ್ ವೇದಿಕೆಯ ಮೂಲಕ ಒಪ್ಪಂದಗಳಿಗೆ ಅಧಿಕೃತ ಮುದ್ರೆ ಬಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ಅವರು ಅಂಕಿತ ಬಿದ್ದಿರುವ ಎಲ್ಲ ಒಪ್ಪಂದಗಳು ಎರಡೂ ಕಡೆಗಳ ಹಿತಾಸಕ್ತಿಗೆ ಪೂರಕವಾಗಿದ್ದು, ಆರ್ಥಿಕ ಹಾಗೂ ಉದ್ಯೋಗ ಸೃಷ್ಟಿಗೆ ಸಹಕಾರಿಯಾಗಲಿವೆ. ಕರ್ನಾಟಕವು ಜಗತ್ತಿನ ಜತೆ ದೊಡ್ಡ ಪ್ರಮಾಣದಲ್ಲಿ ವ್ಯವಹಾರ ಕುದುರಿಸಿದಂತಾಗಿದೆ ಎಂದರು.
ಕರ್ನಾಟಕ ಮತ್ತು ಫಿನ್‌ಲೆಂಡ್ ಹೊಸ ಸ್ಟಾರ್ಟಪ್‌ಗಳ ಸ್ಥಾಪನೆ, ಪರಸ್ಪರ ಕೌಶಲ್ಯಾಭಿವೃದ್ಧಿ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಂಶೋಧನೆ-ಅಭಿವೃದ್ಧಿ ಕೈಗೊಳ್ಳುವ ನಿಟ್ಟಿನಲ್ಲಿ ಒಡಂಬಡಿಕೆಗೆ ಸಹಿ ಹಾಕಿತು.
ಕರ್ನಾಟಕ ಮತ್ತು ಸ್ವೀಡನ್: ಐಟಿ-ಬಿಟಿ ಇಲಾಖೆ ಅಧೀನದ ಸೆಂಟರ್ ಆಫ್ ಎಕ್ಸಲೆನ್ಸ್ ಇಂಟರ್ನೆಟ್ ಆಫ್ ಥಿಂಗ್ಸ್ ಮತ್ತು ಸ್ವೀಡಿಷ್ ಇನ್ಕ್ಯೂ ಬೇಟರ್ಸ್ ಅಂಡ್ ಸೈನ್ಸ್ ಪಾರ್ಕ್ (SISP) ನಡುವೆ ಮಹತ್ವದ ಒಪ್ಪಂದವಾಗಿದೆ. ಕೈಗಾರಿಕೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರ, ಸ್ಟಾರ್ಟಪ್‌ಗಳ ಸ್ಥಾಪನೆಯಲ್ಲಿ ಒಟ್ಟಾಗಿ ಕೆಲಸ ಮಾಡುವುದು, ಎಕೋಸಿಸ್ಟಮ್ ಕನೆಕ್ಟ್, ತಂತ್ರಜ್ಞಾನ ಮತ್ತು ವೈಜ್ಞಾನಿಕ ಮಾಹಿತಿ ಹಂಚಿಕೆ ವಿಭಾಗದಲ್ಲಿ ಕರ್ನಾಟಕ ಮತ್ತು ಸ್ವೀಡನ್ ದೇಶಗಳು ಸಹಮತಕ್ಕೆ ಬಂದು ಅಂಕಿತ ಹಾಕಿವೆ.
ಕರ್ನಾಟಕ ಮತ್ತು ಅಮೆರಿಕ: ರಾಜ್ಯದ ಐಟಿಬಿಟಿ ಇಲಾಖೆ ಅಧೀನದಲ್ಲಿರುವ ಸೆಮಿಕಂಡಕ್ಟರ್ ಫ್ಯಾಬ್ಲೆಸ್ ಆಕ್ಸಲೇಟರ್ ಲ್ಯಾಬ್ (SFAL) ಮತ್ತು ಅಮೆರಿಕದ ಅಪ್ಲೈಡ್ ಮೆಟೀರಿಯಲ್ಸ್ ಸಂಸ್ಥೆ ಜತೆ ಒಪ್ಪಂದ ಏರ್ಪಟ್ಟಿದೆ.
ಕರ್ನಾಟಕ ಮತ್ತು ಬ್ರಿಟನ್: ರಾಜ್ಯದ ಸೆಂಟರ್ ಆಫ್ ಎಕ್ಸ್‌ಲೆನ್ಸ್ ಫಾರ್ ಡಾಟ ಸೈನ್ಸ್ ಸಂಸ್ಥೆ ಹಾಗೂ ಬೆಂಗಳೂರಿನಲ್ಲಿರುವ ಬ್ರಿಟನ್ ಹೈಕಮೀಷನ್ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಮುಖ್ಯವಾಗಿ ಸ್ಟಾರ್ಟಪ್, ಸಂಶೋಧನೆ-ಅಭಿವೃದ್ಧಿ ಹಾಗೂ ಕೌಶಲ್ಯಾಭಿವೃದ್ಧಿ ಕ್ಷೇತ್ರಗಳಿಗೆ ಸಂಸಬಂಧಿಸಿ ಈ ಒಪ್ಪಂದವಾಗಿದೆ.
ಕರ್ನಾಟಕ ಮತ್ತು ಇಂಡಿಯಾನ: ಐಟಿ-ಬಿಟಿ ಇಲಾಖೆ ಅಧೀನದ ಕರ್ನಾಟಕ ಇನೋವೇಶನ್ ಟೆಕ್ನಾಲಜಿ ಸೊಸೈಟಿ, ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಹಾಗೂ ಅಮೆರಿಕದ ಇಂಡಿಯಾನಾ ರಾಜ್ಯದ ಆರ್ಥಿಕ ಅಭಿವೃದ್ಧಿ ನಿಗಮದ ಜತೆ ಈ ಒಪ್ಪಂದ ಆಗಿದೆ.
ಕರ್ನಾಟಕ ಮತ್ತು ವರ್ಜೀನಿಯಾ: ಐಟಿ-ಬಿಟಿ ಇಲಾಖೆ ಅಧೀನದ ಕರ್ನಾಟಕ ಇನೋವೇಶನ್ ಟೆಕ್ನಾಲಜಿ ಸೊಸೈಟಿ, ರಾಜ್ಯ ಕೈಗಾರಿಕೆ ಮತ್ತು ವಾಣೀಜ್ಯ ಇಲಾಖೆ ಹಾಗೂ ಅಮೆರಿಕದ ವರ್ಜೀನಿಯಾದ ಫೇರ್‌ಫ್ಯಾಕ್ಸ್ ಕೌಂಟಿಯ ಆರ್ಥಿಕ ಅಭಿವೃದ್ಧಿ ಪ್ರಾಧಿಕಾರದ ನಡುವೆ ಈ ಒಪ್ಪಂದವಾಗಿದೆ. ಜೈವಿಕ ತಂತ್ರಜ್ಞಾನ, ಆರೋಗ್ಯ ಮತ್ತು ಏರೋ ಸ್ಪೇಸ್ ಕ್ಷೇತ್ರಗಳಿಗೆ ಸಂಬಂಧಿಸಿ ಒಡಂಬಡಿಕೆಯಾಗಿದೆ. ಈ ಮೂಲಕ ಕೌಶಲ್ಯಾಭಿವೃದ್ಧಿ, ಕೃಷಿ ವಿಜ್ಞಾನ, ನವೋದ್ಯಮಗಳ ಸ್ಥಾಪನೆಗಾಗಿ ಹೂಡಿಕೆ ಹರಿದುಬರಲಿದೆ.
ಕರ್ನಾಟಕ ಮತ್ತು ನೆದರ್‌ಲ್ಯಾಂಡ್ಸ್: ಐಟಿ-ಬಿಟಿ, ಎಲೆಕ್ಟ್ರಾನಿಕ್ಸ್ ಇಲಾಖೆ ವ್ಯಾಪ್ತಿಯ ಸೆಂಟರ್ ಆಫ್ ಎಕ್ಸಲೆನ್ಸ್ ಸೈಬರ್ ಸೆಕ್ಯೂರಿಟಿ ಹಾಗೂ ಹೇಗ್ ಸೆಕ್ಯೂರಿಟಿ ಡೆಲ್ಟಾ ಸಂಸ್ಥೆ ಜತೆ ಈ ಒಪ್ಪಂದವಾಗಿದ್ದು, ಮುಖ್ಯವಾಗಿ ಇದು ಸೈಬರ್ ಸುರಕ್ಷತೆಗೆ ಸಂಬಂಧಿಸಿದ್ದಾಗಿದೆ. ಅದೇ ರೀತಿ ಆವಿಷ್ಕಾರ ಮೈತ್ರಿಕೂಟದ ದೇಶಗಳ ಸ್ಥಳೀಯ ಕಾನ್ಸುಲೇಟ್‌ಗಳ ಹಿರಿಯ ಅಧಿಕಾರಿಗಳು ಅಂಕಿತ ಹಾಕಿ ದಾಖಲೆಗಳನ್ನು ಹಸ್ತಾಂತರ ಮಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


