ಕರ್ನಾಟಕ ಉಪ ಚುನಾವಣೆ: ಆರ್ ಆರ್ ನಗರ, ಶಿರಾದಲ್ಲಿ ಮತದಾನ ಆರಂಭ!
ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಉಪ ಚುನಾವಣೆ ಅಂತಿಮ ಘಟ್ಟ ತಲುಪಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಶಿರಾದಲ್ಲಿ ಮತದಾನ ಆರಂಭವಾಗಿದೆ.

ಬೆಂಗಳೂರು: ತೀವ್ರ ಕುತೂಹಲ ಕೆರಳಿಸಿದ್ದ ಕರ್ನಾಟಕ ಉಪ ಚುನಾವಣೆ ಅಂತಿಮ ಘಟ್ಟ ತಲುಪಿದ್ದು, ಬೆಂಗಳೂರಿನ ರಾಜರಾಜೇಶ್ವರಿ ನಗರ ಮತ್ತು ಶಿರಾದಲ್ಲಿ ಮತದಾನ ಆರಂಭವಾಗಿದೆ.
ಆರ್.ಆರ್.ನಗರದ 678 ಮತಗಟ್ಟೆಗಳಲ್ಲಿ ಮತದಾನ ಶುರುವಾಗಿದ್ದು, ಶಿರಾದ 330 ಮತಗಟ್ಟೆಗಳಲ್ಲೂ ಮತದಾನ ನಡೆಯುತ್ತಿದೆ. ಕೊರೋನಾ ಸೋಂಕು ಆತಂಕದ ನಡುವೆಯೂ ಮತದಾರರು ತಮ್ಮ ಹಕ್ಕನ್ನು ಚಲಾಯಿಸಲು ಮತಗಟ್ಟೆಗಳತ್ತ ಆಗಮಿಸುತ್ತಿದ್ದಾರೆ. ಬೆಳಗ್ಗೆ 7ರಿಂದ ಸಂಜೆ 6 ಗಂಟೆವರೆಗೆ ಮತದಾನ ನಡೆಯಲಿದೆ. ಹಾಗೂ ಸಂಜೆ 5ರಿಂದ ಸಂಜೆ 6 ಗಂಟೆವರೆಗೆ ಸೋಂಕಿತರಿಗೆ ಮತ ಹಾಕಲು ಅವಕಾಶ ನೀಡಲಾಗಿದೆ.
ಕೊರೊನಾ ಹೊತ್ತಲ್ಲಿ ರಾಜ್ಯದಲ್ಲಿ ನಡೆಯುತ್ತಿರುವ ಮೊದಲ ವಿಧಾನಸಭಾ ಉಪ ಚುನಾವಣೆ ಇದಾಗಿದೆ. ಕೊರೊನಾಗೆ ಆತಂಕಗೊಳ್ಳದೇ ಮತಗಟ್ಟೆಗೆ ಬಂದು ನಿಮ್ಮ ಹಕ್ಕು ಚಲಾಯಿಸಿ ಎಂದು ಚುನಾವಣಾ ಆಯೋಗ ಮನವಿ ಮಾಡಿದೆ. ಆರ್.ಆರ್.ನಗರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ, ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹನುಮಂತರಾಯಪ್ಪ ಮತ್ತು ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ನಡುವೆ ಸ್ಪರ್ಧೆ ಇದೆ. ಇನ್ನು ತುಮಕೂರು ಜಿಲ್ಲೆಯ ಶಿರಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಾಜೇಶ್‍ಗೌಡ, ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಟಿ.ಬಿ.ಜಯಚಂದ್ರ, ಜೆಡಿಎಸ್ ಅಭ್ಯರ್ಥಿ ಅಮ್ಮಾಜಮ್ಮ ನಡುವೆ ನೇರ ಸ್ಪರ್ಧೆ ಇದೆ.
ಶಿರಾ ಕ್ಷೇತ್ರದಲ್ಲಿ 17 ಅಭ್ಯರ್ಥಿಗಳು ಕಣದಲ್ಲಿದ್ದು, 330 ಮತಗಟ್ಟೆಗಳಿವೆ. ಪುರುಷ ಮತದಾರರು 1 ಲಕ್ಷದ 10 ಸಾವಿರದ 281 ಮಂದಿ ಇದ್ದರೆ, ಮಹಿಳಾ ಮತದಾರರು 1 ಲಕ್ಷದ 5 ಸಾವಿರದ 434 ಮಂದಿ ಇದ್ದು, ಒಟ್ಟು ಮತದಾರರು 2 ಲಕ್ಷದ 15 ಸಾವಿರದ 725 ಮಂದಿ ಇದ್ದಾರೆ. ಆರ್ ಆರ್ ನಗರದಲ್ಲಿ 4 ಲಕ್ಷದ 62 ಸಾವಿರ ಮಂದಿ ಮತದಾರರಿದ್ದಾರೆ.
ಕೊರೊನಾ ಕಾರಣದಿಂದ ಪ್ರಜಾಪ್ರಭುತ್ವದ ಅಮೂಲ್ಯ ಹಕ್ಕಾದ ಮತದಾನದ ಹಕ್ಕಿನಿಂದ ಯಾರೂ ವಂಚಿತರಾಗಬಾರದು. ಈ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಸೋಂಕಿತರು, ಐಸೋಲೇಷನ್‍ನಲ್ಲಿರೋರು, ಕ್ವಾರಂಟೈನ್‍ನಲ್ಲಿರೋರಿಗೆ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಿದೆ. ಆರ್ ಆರ್ ನಗರ ಕ್ಷೇತ್ರದಲ್ಲಿ ಬಿಬಿಎಂಪಿ ಮಾಹಿತಿ ಪ್ರಕಾರ 148 ಮಂದಿ ಕೊರೋನಾ ಸೋಂಕಿತರಿಗೆ ಇವತ್ತಿನ ಉಪಚುನಾವಣೆಯಲ್ಲಿ ಮತದಾನದ ಹಕ್ಕಿದೆ. ಕೊರೊನಾ ಸೋಂಕಿತರು ಸಂಜೆ 5 ಗಂಟೆ ನಂತರ ಮತದಾನ ಮಾಡಬಹುದಾಗಿದೆ.
ಜೆಡಿಎಸ್ ಅಭ್ಯರ್ಥಿ ಕೃಷ್ಣಮೂರ್ತಿ ಅವರು ಬೆಳಗ್ಗೆಯೇ ಜ್ಞಾನಭಾರತಿ ವಾರ್ಡ್‌ನಲ್ಲಿರುವ ಹೆಚ್ಎಂಆರ್ ಕಾನ್ವೆಂಟ್ನ ಮತಗಟ್ಟೆಗೆ ಆಗಮಿಸಿ ಮತದಾನ ಮಾಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


