ರಾಜ್ಯ

ವಲಸೆ ಕಾರ್ಮಿಕರಿಗೆ ಶಾಕ್ ಕೊಟ್ಟ ಸರ್ಕಾರ; ವಿಶೇಷ ರೈಲು ರದ್ದು

ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ದರಾಗಿದ್ದ ವಲಸೆ ಕಾರ್ಮಿಕರಿಗೆ ಕರ್ನಾಟಕ ಸರ್ಕಾರ ಶಾಕ್ ನೀಡಿದ್ದು, ಕಾರ್ಮಿಕರ ರವಾನೆಗಾಗಿ ಬೇಡಿಕೆ ಇಟ್ಟಿದ್ದ ರೈಲುಗಳನ್ನು ರದ್ದುಗೊಳಿಸಿದೆ.

ವಲಸೆ ಕಾರ್ಮಿಕರಿಗೆ ಶಾಕ್ ಕೊಟ್ಟ ಸರ್ಕಾರ; ವಿಶೇಷ ರೈಲು ರದ್ದು
ಸಂಗ್ರಹ ಚಿತ್ರ
Published On :

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ತಮ್ಮ ಊರುಗಳಿಗೆ ತೆರಳಲು ಸಿದ್ದರಾಗಿದ್ದ ವಲಸೆ ಕಾರ್ಮಿಕರಿಗೆ ಕರ್ನಾಟಕ ಸರ್ಕಾರ ಶಾಕ್ ನೀಡಿದ್ದು, ಕಾರ್ಮಿಕರ ರವಾನೆಗಾಗಿ ಬೇಡಿಕೆ ಇಟ್ಟಿದ್ದ ರೈಲುಗಳನ್ನು ರದ್ದುಗೊಳಿಸಿದೆ.

ಹೌದು.. ವಲಸೆ ಕಾರ್ಮಿಕರನ್ನು ತವರು ರಾಜ್ಯಗಳಿಗೆ ಕಳಿಸಲು ಕರ್ನಾಟಕ ಸರ್ಕಾರ ರೈಲುಗಳಿಗಾಗಿ ಬೇಡಿಕೆ ಇಟ್ಟಿತ್ತು. ಆದರೆ, ಈಗ ರೈಲುಗಳ ಅವಶ್ಯಕತೆ ಇಲ್ಲ ಎಂದು ಇಲಾಖೆಗೆ ಪತ್ರ ಬರೆದಿದ್ದು ಕುತೂಹಲಕ್ಕೆ ಕಾರಣವಾಗಿದೆ. ಸರ್ಕಾರದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ  ಎನ್. ಮಂಜುನಾಥ್ ಪ್ರಸಾದ್ ನೈಋತ್ಯ ರೈಲ್ವೆಯ ಹುಬ್ಬಳ್ಳಿ ವಲಯದ ಜನರಲ್ ಮ್ಯಾನೇಜರ್‌ಗೆ ಈ ಕುರಿತು ಪತ್ರ ಬರೆದಿದ್ದಾರೆ. 

ಈ ಹಿಂದೆ ಕಾರ್ಮಿಕರ ರವಾನೆಗಾಗಿ ರೈಲ್ವೇ ಇಲಾಖೆಗೆ ಮನವಿ ಮಾಡಿದ್ದ ಸರ್ಕಾರ ರೈಲುಗಳ ನಿಯೋಜಿಸುವಂತೆ ಕೇಳಿತ್ತು. ದಿನಕ್ಕೆ 2 ರೈಲುಗಳಂತೆ 5 ದಿನಗಳ ಕಾಲ ಹತ್ತು ರೈಲುಗಳನ್ನು ಓಡಿಸುತ್ತೇವೆ ಎಂದು ಕರ್ನಾಟಕ ಸರ್ಕಾರ ರೈಲ್ವೆ ಇಲಾಖೆಗೆ ಮನವಿ ಸಲ್ಲಿಸಿತ್ತು. ಆದರೆ  ಬುಧವಾರದಿಂದ ನಮಗೆ ರೈಲುಗಳು ಬೇಡ. ನಮ್ಮ ವಿನಂತಿಯನ್ನು ವಾಪಸ್ ಪಡೆಯುತ್ತೇವೆ ಎಂದು ಮಂಗಳವಾರ ಪತ್ರ ಬರೆಯಲಾಗಿದೆ. 

ಕಾರ್ಮಿಕರ ಮನವೊಲಿಸುವಲ್ಲಿ ಯಶಸ್ವಿಯಾದ ಸರ್ಕಾರ
ಇನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಹ ಕಾರ್ಮಿಕರು ಬೆಂಗಳೂರು ಬಿಟ್ಟು ಹೋಗದಂತೆ ಮನವಿ ಮಾಡಿದ್ದರು. ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಬಿಲ್ಡರ್ ಮತ್ತು ಗುತ್ತಿಗೆದಾರರ ಜೊತೆ ಮಂಗಳವಾರ ಸಂಜೆ ಸಭೆ ನಡೆಸಿದ್ದರು. ಸಭೆಯಲ್ಲಿ ಪಾಲ್ಗೊಂಡಿದ್ದ ಬಿಲ್ಡರ್‌ಗಳು  ನಿರ್ಮಾಣ ಚಟುವಟಿಕೆಗಳನ್ನು ಪುನಃ ಆರಂಭಿಸಲು ನಮಗೆ ಕಾರ್ಮಿಕರು ಬೇಕು ಎಂದು ಬೇಡಿಕೆ ಇಟ್ಟಿದ್ದರು. ಈ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯವನ್ನು ಆಧರಿಸಿ ರೈಲುಗಳನ್ನು ರದ್ದುಪಡಿಸುವ ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ. 

ಈಗಾಗಲೇ ಮೂರು ರೈಲುಗಳಲ್ಲಿ ವಲಸೆ ಕಾರ್ಮಿಕರು ತವರು ರಾಜ್ಯಕ್ಕೆ ವಾಪಸ್ ಆಗಿದ್ದಾರೆ. ಬಿಹಾರಕ್ಕೆ ತೆರಳಲು 53 ಸಾವಿರ ವಲಸೆ ಕಾರ್ಮಿಕರು ಹೆಸರು ನೋಂದಣಿ ಮಾಡಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ನಮ್ಮ ಮೆಟ್ರೋ, ವಿವಿಧ ಅಪಾರ್ಟ್‌ಮೆಂಟ್, ಬಿಬಿಎಂಪಿಯ  ಹಲವು ಕಾಮಗಾರಿಯಲ್ಲಿ ಸಾವಿರಾರು ವಲಸೆ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಒಂದು ವೇಳೆ ರೈಲುಗಳನ್ನು ಬುಕ್ ಮಾಡಿ ಇವರನ್ನು ವಾಪಸ್ ಕಳಿಸಿದರೆ ಬೆಂಗಳೂರು ನಗರದಲ್ಲಿ ನಿರ್ಮಾಣ ಚಟುವಟಿಕೆಗೆ ಕಾರ್ಮಿಕರ ಕೊರತೆ ಎದುರಾಗಲಿದೆ ಎಂದು ಬಿಲ್ಡರ್ ಗಳು ಆತಂಕ  ವ್ಯಕ್ತಪಡಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.