ರಾಜ್ಯ

ಕೊರೋನಾ ವೈರಸ್: ಬಸ್ ಆಯ್ತು, ಈಗ ವಲಸೆ ಕಾರ್ಮಿಕರ ರೈಲು ಪ್ರಯಾಣ ದರ ಭರಿಸಲು ಸಿದ್ಧ ಎಂದ ಕಾಂಗ್ರೆಸ್!

ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ಊರುಗಳತ್ತ ಮುಖ ಮಾಡಿರುವ ವಲಸೆ ಕಾರ್ಮಿಕರ ಬಸ್ ಪ್ರಯಾಣದರ ಭರಿಸಲು ಒಂದು ಕೋಟಿ ರೂ ನೀಡಿದ್ದ ಕಾಂಗ್ರೆಸ್ ಪಕ್ಷ ಇದೀಗ ಕಾರ್ಮಿಕರ ರೈಲು ಪ್ರಯಾಣ ದರವನ್ನೂ ಭರಿಸುವುದಾಗಿ ಹೇಳಿದೆ.

ಕೊರೋನಾ ವೈರಸ್: ಬಸ್ ಆಯ್ತು, ಈಗ ವಲಸೆ ಕಾರ್ಮಿಕರ ರೈಲು ಪ್ರಯಾಣ ದರ ಭರಿಸಲು ಸಿದ್ಧ ಎಂದ ಕಾಂಗ್ರೆಸ್!
ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್
Published On :

ಬೆಂಗಳೂರು: ಕೊರೋನಾ ವೈರಸ್ ಲಾಕ್ ಡೌನ್ ಹಿನ್ನಲೆಯಲ್ಲಿ ತಮ್ಮ ಊರುಗಳತ್ತ ಮುಖ ಮಾಡಿರುವ ವಲಸೆ ಕಾರ್ಮಿಕರ ಬಸ್ ಪ್ರಯಾಣದರ ಭರಿಸಲು ಒಂದು ಕೋಟಿ ರೂ ನೀಡಿದ್ದ ಕಾಂಗ್ರೆಸ್ ಪಕ್ಷ ಇದೀಗ ಕಾರ್ಮಿಕರ ರೈಲು ಪ್ರಯಾಣ ದರವನ್ನೂ ಭರಿಸುವುದಾಗಿ ಹೇಳಿದೆ.

ನಿನ್ನೆಯಷ್ಟೇ ವಲಸೆ ಕಾರ್ಮಿಕರಿಗೆ ಉಚಿತ ಪ್ರಯಾಣದ ಅವಕಾಶ ನೀಡದ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ತೀವ್ರ ಕಿಡಿಕಾರಿದ್ದರು. 'ಸಂಕಷ್ಟಕ್ಕೆ ಗುರಿಯಾಗಿರುವ ವಲಸಿಗರನ್ನು ಮನೆ ತಲುಪಿಸುವಲ್ಲಿ ಕೇಂದ್ರ ಸರ್ಕಾರ ಮಾನವೀಯತೆ ಮರೆತಿದೆ.  ಕಾರ್ಮಿಕರು ಈ ದೇಶದ ಪ್ರಗತಿಯ ಮೂಲ ಆಧಾರವಾಗಿದ್ದು, ಸಂಕಷ್ಟದಲ್ಲಿರುವ ಅವರಿಂದಲೇ ಹಣ ವಸೂಲಿ ಮಾಡುತ್ತಿರುವ ಕೇಂದ್ರದ ನಡೆ ಅತ್ಯಂತ ನಿರ್ಲಜ್ಜ. ವಿದೇಶದಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಭಾರತೀಯರನ್ನು ಉಚಿತವಾಗಿ ಕರೆತಂದಿರುವಾಗ, ಒಂದು ರಾಜ್ಯದಿಂದ ಮತ್ತೊಂದು  ರಾಜ್ಯಕ್ಕೆ ಪ್ರಯಾಣ ಮಾಡಲು ಬಯಸಿರುವ ನಮ್ಮ ಕಾರ್ಮಿಕರಿಂದ ಟಿಕೆಟ್ ದರ ವಸೂಲಿ ಮಾಡುತ್ತಿರುವುದೇಕೆ ಎಂದು ಪ್ರಶ್ನಿಸಿದ್ದರು.

ಅಲ್ಲದೆ ವಲಸೆ ಕಾರ್ಮಿಕರಿಂದ ರೈಲು ಟಿಕೆಟ್ ದರ ವಸೂಲಿ ಮಾಡುತ್ತಿರುವ ಕೇಂದ್ರ ಸರ್ಕಾರಕ್ಕೆ ನಾಚಿಕೆಯಾಗಬೇಕು. ಗುಜರಾತ್‌ನ ಒಂದು ಕಾರ್ಯಕ್ರಮ(ನಮಸ್ತೆ ಟ್ರಂಪ್) ಕೇಂದ್ರ ಸರ್ಕಾರ 100 ಕೋಟಿ ರೂ. ನೀಡಿದೆ. ಪಿಎಂ ನಿಧಿಗೆ ಖುದ್ದು ರೈಲ್ವೇ ಇಲಾಖೆ 151 ಕೋಟಿ ರೂ. ನೀಡಿದೆ.  ಆದರೆ ವಲಸೆ ಕಾರ್ಮಿಕರನ್ನು ಉಚಿತವಾಗಿ ಮನೆ ತಲುಪಿಸಲು ಇವುಗಳಿಗೆ ಆಗುವುದಿಲ್ಲ ಎಂದರೆ ನಾಚಿಕೆಯಾಗಬೇಕು ಎಂದಿರುವ ಸೋನಿಯಾ ಗಾಂಧಿ, ವಲಸೆ ಕಾರ್ಮಿಕರ ರೈಲು ಟಿಕೆಟ್ ದರವನ್ನು ಕಾಂಗ್ರೆಸ್ ಪಕ್ಷ ಭರಿಸಲಿದೆ ಎಂದು ಘೋಷಿಸಿದ್ದರು. ಅಲ್ಲದೆ ವಲಸೆ ಕಾರ್ಮಿಕರ ರೈಲು  ಟಿಕೆಟ್ ದರವನ್ನು ಕಾಂಗ್ರೆಸ್ ಭರಿಸಲಿದ್ದು, ದಯವಿಟ್ಟು ಅವರಿಂದ ಹಣ ವಸೂಲಿ ಮಾಡಬೇಡಿ ಎಂದು ಸೋನಿಯಾ ಗಾಂಧಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದಾರೆ. 

ಅಂತೆಯೇ ವಲಸೆ ಕಾರ್ಮಿಕರ ರೈಲು ಟಿಕೆಟ್ ದರ ಭರಿಸುವಂತೆ ಎಲ್ಲ ರಾಜ್ಯ ಕಾಂಗ್ರೆಸ್ ಘಟಕಗಳಿಗೆ ಪತ್ರದ ಮೂಲಕ ಸೋನಿಯಾ ನಿರ್ದೇಶನ ನೀಡಿದ್ದು, ಅದರಂತೆ ಕರ್ನಾಟಕ ಸೇರಿದಂತೆ ದೇಶದ ಎಲ್ಲ ರಾಜ್ಯಗಳ ಕಾಂಗ್ರೆಸ್ ಘಟಕಗಳು ವಲಸೆ ಕಾರ್ಮಿಕರ ರೈಲು ಟಿಕೆಟ್ ದರ ಭರಿಸಲು  ಮುಂದಾಗಿವೆ. 

ಹೊರ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ಕೆಪಿಸಿಸಿ ಆಸರೆ
ಇನ್ನು ಹೊರ ರಾಜ್ಯಗಳಲ್ಲಿರುವ ಕನ್ನಡಿಗರು ಕರ್ನಾಟಕಕ್ಕೆ ವಾಪಸ್ ಕರೆ ತರಲು ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಮುಂದಾಗಿದ್ದು, ಇದಕ್ಕಾಗಿ ರಾಜ್ಯ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ ಭಾಸ್ಕರ್ ಅವರಿಗೆ ಪತ್ರ ಬರೆದಿರುವ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್  ಹಿರಿಯ ನಾಯಕ ಸಿದ್ದರಾಮಯ್ಯ ಅವರು, ಹೊರ ರಾಜ್ಯದಲ್ಲಿರುವ ಕನ್ನಡಿಗರನ್ನು ರಾಜ್ಯಕ್ಕೆ ಕರೆತರಲು ವಿಶೇಷ ರೈಲುಗಳ ಆಯೋಜನೆ ಮಾಡುವಂತೆ ಮನವಿ ಮಾಡಿದ್ದಾರೆ.

ಈ ಬಗ್ಗೆ ಮಾತನಾಡಿರುವ ಡಿಕೆ ಶಿವಕುಮಾರ್ ಅವರು,ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ರಾಜ್ಯಕ್ಕೆ ವಾಪಸ್ ಕರೆತರಲು ಸರ್ಕಾರಕ್ಕೆ ಎಲ್ಲ ರೀತಿಯ ನೆರವು ನೀಡಲು ಕಾಂಗ್ರೆಸ್ ಪಕ್ಷ ಸಿದ್ಧವಾಗಿದೆ. ನಮಗೆ ಯಾವುದೇ ರೀತಿಯ ಕ್ರೆಡಿಟ್ ಬೇಕಿಲ್ಲ. ಕನ್ನಡಿಗರನ್ನು ಸುರಕ್ಷಿತವಾಗಿ ರಾಜ್ಯಕ್ಕೆ  ಕರೆತರುವ ಮೂಲಕ ಸರ್ಕಾರವೇ ಆ ಕ್ರೆಡಿಟ್ ಪಡೆಯಲಿ. ಹೊರ ರಾಜ್ಯಗಳಲ್ಲಿರುವ ಕನ್ನಡಿಗರ ರೈಲ್ವೇ ಪ್ರಯಾಣದರ ಭರಿಸಲು ನಾವು ಸಿದ್ಧರಿದ್ದೇವೆ ಎಂದು ಪತ್ರದಲ್ಲಿ ಡಿಕೆಶಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.