ಬೆಂಗಳೂರು ನಗರದಲ್ಲಿ ಸಂಚಾರ ಪಾಸ್ ವಿತರಣೆ: ಯಾರಿಗೆಲ್ಲಾ ಪಾಸ್ ಲಭ್ಯ ಗೊತ್ತಾ?
ಮಾರಕ ಕೊರೋನಾ ವೈರಸ್ ಸೋಂಕು ಪ್ರಸರಣ ಭೀತಿಯಿಂದಾಗಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದ್ದು, ಈ ಅವಧಿಯಲ್ಲಿ ಅತ್ಯಗತ್ಯ ಸೇವೆಗಳಿಗಾಗಿ ಶ್ರಮಿಸುತ್ತಿರುವ ಸಿಬ್ಬಂದಿಗೆ ಸಂಚಾರ ಪಾಸ್ ನೀಡಲು ಕರ್ನಾಟಕ ಪೊಲೀಸ್ ಇಲಾಖೆ ನಿರ್ಧರಿಸಿದೆ.

ಬೆಂಗಳೂರು: ಮಾರಕ ಕೊರೋನಾ ವೈರಸ್ ಸೋಂಕು ಪ್ರಸರಣ ಭೀತಿಯಿಂದಾಗಿ ದೇಶಾದ್ಯಂತ ಲಾಕ್ ಡೌನ್ ಹೇರಲಾಗಿದ್ದು, ಈ ಅವಧಿಯಲ್ಲಿ ಅತ್ಯಗತ್ಯ ಸೇವೆಗಳಿಗಾಗಿ ಶ್ರಮಿಸುತ್ತಿರುವ ಸಿಬ್ಬಂದಿಗೆ ಸಂಚಾರ ಪಾಸ್ ನೀಡಲು ಕರ್ನಾಟಕ ಪೊಲೀಸ್ ಇಲಾಖೆ ನಿರ್ಧರಿಸಿದೆ.
ಲಾಕ್ ಡೌನ್ ಅವಧಿಯಲ್ಲಿ ಅನಗತ್ಯವಾಗಿ ಸಂಚರಿಸುತ್ತಿರುವವರ ಮೇಲೆ ಪೊಲೀಸರು ನಿರ್ಧಾಕ್ಷೀಣ್ಯ ಕ್ರಮ ಕೈಗೊಳ್ಳುತ್ತಿದ್ದು, ಲಾಠಿಚಾರ್ಜ್ ಮಾಡಿ ಜನರನ್ನು ಚದುರಿಸುತ್ತಿದ್ದಾರೆ. ಈ ವೇಳೆ ತುರ್ತು ಸೇವೆಗಳಾದ ವೈದ್ಯಕೀಯ ಸಿಬ್ಬಂದಿ, ಪತ್ರಕರ್ತರು, ಇ ಕಾಮರ್ಸ್ ಸಿಬ್ಬಂದಿ, ತರಕಾರಿ ಮತ್ತು ದಿನಸಿ ಮಾರಾಟಗಾರರೂ ಕೂಡ ಲಾಕ್ ಡೌನ್ ನಿಯಮದಿಂದಾಗಿ ತಮ್ಮ ತಮ್ಮ ಕರ್ತವ್ಯಗಳಲ್ಲಿ ಭಾಗಿಯಾಗಲು ಸಾಧ್ಯವಾಗುತ್ತಿಲ್ಲ. ಇದೇ ಕಾರಣಕ್ಕೆ ಬೆಂಗಳೂರು ನಗರ ಪೊಲೀಸ್ ಆಯುಕ್ತರು ಇಂದು ಸಭೆ ನಡೆಸಿ ಸಂಚಾರ ಪಾಸ್ ವಿತರಿಸಲು ನಿರ್ಧರಿಸಿದ್ದಾರೆ.
ಬೆಂಗಳೂರು ನಗರದಲ್ಲಿ ಅಗತ್ಯ ಸೇವೆ ಮತ್ತು ಸರಕು ಸಾಗಣೆಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ವಾಹನ ಸಂಚಾರಕ್ಕೆ ಪಾಸ್‌ಗಳನ್ನು ವಿತರಿಸಲಾಗುತ್ತಿದೆ ಎಂದು ನಗರ ಪೊಲೀಸ್ ಆಯುಕ್ತ ಭಾಸ್ಕರ್‌ರಾವ್ ತಿಳಿಸಿದ್ದಾರೆ. ನಗರದ ಡಿಸಿಪಿ ಕಚೇರಿಗಳಲ್ಲಿ ಈ ಪಾಸುಗಳು ಲಭ್ಯವಾಗಲಿದ್ದು,. ದಿನದ 24 ಗಂಟೆಯೂ ಪಾಸ್ ವಿತರಣೆಗೆ ಕ್ರಮಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.
ಇಲಾಖೆ ನೀಡಿರುವ ಮಾಹಿತಿಯಂತೆ G ರಿಜಿಸ್ಟ್ರೇಷನ್ ಪ್ಲೇಟ್ ಇರುವ ಸರ್ಕಾರಿ ವಾಹನಗಳು, ಸರಕು ಸಾಗಣೆ ವಾಹನಗಳು, ಸಚಿವಾಲಯದ ನೌಕರರು, ಹೈಕೋರ್ಟ್ ನೌಕರರಿಗೆ ಸಂಚಾರ ಪಾಸ್ ನ ಅಗತ್ಯವಿಲ್ಲ. ಆದರೆ ಎಲ್ಲಾ ಸರ್ಕಾರಿ ಮತ್ತು ಹೈಕೋರ್ಟ್ ನೌಕರರು ಉದ್ಯೋಗದ ಗುರುತಿನ ಪತ್ರ ಜೊತೆಯಲ್ಲಿರಿಸಿಕೊಳ್ಳುವುದು ಕಡ್ಡಾಯವಾಗಿದೆ.
ಉಳಿದಂತೆ ಖಾಸಗಿ ಭದ್ರತಾ ಸಿಬ್ಬಂದಿಗಳು, ಪೆಟ್ರೊಲ್ ಬಂಕ್, ಗ್ಯಾಸ್ ಏಜೆನ್ಸಿ, ಎಲ್‌ಪಿಜಿ ಚಿಲ್ಲರೆ ವಿತರಕರು ಮತ್ತು ಸಿಬ್ಬಂದಿಗಳು, ಸ್ವಿಗ್ಗಿ, ಜೊಮಾಟೊ ನಂತಹ ಆಹಾರ ಸರಬರಾಜು ಸಂಸ್ಥೆಗಳ ನೌಕರರು, ಆನ್‌ಲೈನ್ ಔಷಧ ವಿತರಕರು, ಇ ಕಾಮರ್ಸ್ ಪ್ಲಾಟ್‌ಫಾರ್ಮ್‌ಗಳ ನೌಕರರು, ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಸಿಬ್ಬಂದಿ, ದಿನಸಿ, ದಿನಬಳಕೆ ವಸ್ತುಗಳು, ಡೇರಿ, ಮಾಂಸ ಮತ್ತು ಮೀನು ಮಾರಾಟಮಳಿಗೆಗಳ ನೌಕರರು, ವೈದ್ಯಕೀಯ ಸಂಸ್ಥೆಗಳ ನೌಕರರು, ಟೆಲಿಕಾಂ ಮತ್ತು ಇಂಟರ್ನೆಟ್ ಸೇವಾದಾತ ಸಂಸ್ಥೆಗಳ ಸಿಬ್ಬಂದಿ, ಅತ್ಯಗತ್ಯ ಸೇವೆ ಒದಗಿಸುವ ಐಟಿ ಸಂಸ್ಥೆಗಳಲ್ಲಿ ಕೆಲಸ ಮಾಡುವ ನೌಕರರಿಗೆ ಸಂಚಾರ ಪಾಸ್ ಗಳನ್ನು ವಿತರಿಸಲಾಗುತ್ತದೆ.
ಇದಲ್ಲದೆ ವಿದ್ಯುತ್ ಉತ್ಪಾದನೆ, ಪ್ರಸರಣ ಮತ್ತು ವಿತರಕ ಘಟಕಗಳಲ್ಲಿ ಕೆಲಸ ಮಾಡುವ ನೌಕರರು, ಷೇರು ಮಾರುಕಟ್ಟೆ ಸೇವಾದಾತ ಸಂಸ್ಥೆಗಳ ಸಿಬ್ಬಂದಿಗಳು, ಶೀತಲೀಕರಣ ಘಟಕ ಮತ್ತು ಗೋದಾಮು ಸೇವೆ ಒದಗಿಸುವ ಸಿಬ್ಬಂದಿ, ಅತ್ಯಗತ್ಯ ವಸ್ತುಗಳ ಉತ್ಪಾದನಾ ಘಟಕಗಳ ಸಿಬ್ಬಂದಿ ಮತ್ತು ಸರ್ಕಾರದ ನಿರ್ಬಂಧ ಆದೇಶದ ಕಾರಣ ಮನೆಗಳಿಗೆ ತೆರಳಲು ಸಾಧ್ಯವಾಗದ ಪ್ರವಾಸಿಗರು ಉಳಿದುಕೊಂಡಿರುವ ಹೊಟೆಲ್ ಮತ್ತು ಲಾಡ್ಜ್ ಸಿಬ್ಬಂದಿಗಳು ಕಡ್ಡಾಯವಾಗಿ ಸಂಚಾರ ಪಾಸ್ ಗಳನ್ನು ಪಡೆಯಬೇಕು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


