ಕೊರೋನಾ ಆತಂಕ ನಡುವೆ ಮುನ್ನೆಚ್ಚರಿಕೆಯಿಂದ ಎಸ್ಎಸ್ ಎಲ್ ಸಿ ಪರೀಕ್ಷೆ ಆರಂಭ: ಪರೀಕ್ಷಾ ಕೇಂದ್ರಕ್ಕೆ ಶಿಕ್ಷಣ ಸಚಿವ ಭೇಟಿ
ರಾಜ್ಯಾದ್ಯಂತ ಗುರುವಾರ ಎಸ್ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿದೆ. ಕೊರೋನಾ ಆತಂಕದ ನಡುವೆಯೇ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಆತ್ಮವಿಶ್ವಾಸದಿಂದ ಎಸ್ಎಸ್ ಎಲ್ ಸಿ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು ಕಂಡುಬಂತು.

ಬೆಂಗಳೂರು: ರಾಜ್ಯಾದ್ಯಂತ ಗುರುವಾರ ಎಸ್ಎಸ್ ಎಲ್ ಸಿ ಪರೀಕ್ಷೆ ಆರಂಭವಾಗಿದೆ. ಕೊರೋನಾ ಆತಂಕದ ನಡುವೆಯೇ ತಮ್ಮ ಭವಿಷ್ಯ ರೂಪಿಸಿಕೊಳ್ಳಲು ಆತ್ಮವಿಶ್ವಾಸದಿಂದ ಎಸ್ಎಸ್ ಎಲ್ ಸಿ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಹಾಜರಾಗಿದ್ದು ಕಂಡುಬಂತು.
ಪರೀಕ್ಷಾ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದ ಕೂಡಲೇ ಪೋಷಕರು ಹಿಂತಿರುಗಿ ಮನೆಗೆ ತೆರಳಬೇಕು. ಪರೀಕ್ಷಾ ಕೇಂದ್ರದ ಬಳಿ ಗುಂಪುಗಟ್ಟಿ ಮಾತನಾಡುವಂತಿಲ್ಲ, ಚರ್ಚೆ ಮಾಡುವಂತಿಲ್ಲ, ಪರೀಕ್ಷಾ ಕೇಂದ್ರಗಳಲ್ಲಿ ಪೋಷಕರನ್ನು ಗುಂಪುಗಟ್ಟಿ ನಿಲ್ಲದಂತೆ ಪೊಲೀಸರು ಎಚ್ಚರಿಕೆ ನೀಡಿದ್ದು ಕಂಡುಬಂತು.
ಕಲಬುರಗಿಯಲ್ಲಿ ಪರೀಕ್ಷಾ ಕೇಂದ್ರಕ್ಕೆ ತಮ್ಮ ಮಕ್ಕಳನ್ನು ಕರೆದುಕೊಂಡು ಬಂದ ಪೋಷಕರನ್ನು ಪೊಲೀಸ್ ಸಿಬ್ಬಂದಿ ತಳ್ಳಿರುವುದು ವರದಿಯಾಗಿದೆ.
ಮಕ್ಕಳು ಮಾಸ್ಕ್ ಧರಿಸಿ ಕೈಯಲ್ಲಿ ಪ್ಯಾಡ್, ಪರೀಕ್ಷಾ ಸಾಮಗ್ರಿಗಳು, ನೀರಿನ ಬಾಟಲ್ ಗಳನ್ನು ಹಿಡಿದು ಪರೀಕ್ಷಾ ಕೊಠಡಿಯೊಳಗೆ ಹೋಗುವುದು ಕಂಡುಬಂತು. ಮಕ್ಕಳು ಪರೀಕ್ಷಾ ಕೊಠಡಿಯೊಳಗೆ ಪ್ರವೇಶಿಸುವ ಮುನ್ನ ಆರೋಗ್ಯ ಇಲಾಖೆ ಸಿಬ್ಬಂದಿ ಮಕ್ಕಳನ್ನು ಥರ್ಮಲ್ ತಪಾಸಣೆಗೆ ಒಳಪಡಿಸಿ ಸ್ಯಾನಿಟೈಸರ್ ನಿಂದ ಕೈತೊಳೆದುಕೊಳ್ಳಲು ಹೇಳಿ ಒಳಗೆ ಬಿಟ್ಟರು.
ರಾಜ್ಯದ ಎಲ್ಲಾ ಜಿಲ್ಲೆಗಳಿಂದ ಮಕ್ಕಳು ಯಾವ ರೀತಿ ಪರೀಕ್ಷಾ ಕೇಂದ್ರಕ್ಕೆ ಬಂದರು, ಅಲ್ಲಿ ಸಿಬ್ಬಂದಿ ಮಕ್ಕಳನ್ನು ಯಾವ ರೀತಿ ಒಳಗೆ ತಪಾಸಣೆ ಮಾಡಿ ಕಳುಹಿಸಿದರು ಎಂಬ ಬಗ್ಗೆ ವರದಿಗಳು ಬರುತ್ತಿವೆ.
ಗಂಗಾವತಿಯಲ್ಲಿ ಪರೀಕ್ಷಾ ಕೇಂದ್ರವೊಂದರಲ್ಲಿ ಪರೀಕ್ಷೆ ಬರೆಯಲು ಬಂದ ಮಕ್ಕಳನ್ನು ಸಿಬ್ಬಂದಿ ಮತ್ತು ಶಿಕ್ಷಕರು ವಿಶೇಷವಾಗಿ ಸ್ವಾಗತಿಸಿದರು.
ಶಿಕ್ಷಣ ಸಚಿವರ ಭೇಟಿ:ಬೆಂಗಳೂರಿನ ಕೆಲವು ಪರೀಕ್ಷಾ ಕೇಂದ್ರಗಳಿಗೆ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಇಂದು ಬೆಳಗ್ಗೆ ಭೇಟಿ ನೀಡಿ ಅಲ್ಲಿ ಕೈಗೊಂಡಿರುವ ಮುನ್ನೆಚ್ಚರಿಕೆ ಕ್ರಮಗಳು, ಮಕ್ಕಳು ಯಾವ ರೀತಿ ಪರೀಕ್ಷೆಗೆ ತಯಾರಾಗಿದ್ದಾರೆ ಎಂದು ಪರಿಶೀಲಿಸಿದರು. ಮಕ್ಕಳನ್ನು ಮಾತನಾಡಿಸಿ ಅವರಲ್ಲಿ ಸ್ಥೈರ್ಯ ತುಂಬಿದರು.
ಕರ್ನಾಟಕದಲ್ಲಿ ಓದುತ್ತಿರುವ ಕೇರಳ ರಾಜ್ಯದ ಗಡಿ ಗ್ರಾಮಗಳಿಂದ 367 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಕುಳಿತಿದ್ದಾರೆ. ಎಲ್ಲಾ 367 ಮಕ್ಕಳೂ ಇಂದು ಪರೀಕ್ಷೆಗೆ ಹಾಜರಾಗಿದ್ದಾರೆ. ಅವರನ್ನು ತಲಪಾಡಿ ಚೆಕ್ ಪೋಸ್ಟ್ ನಿಂದ ಬಸ್ ನಲ್ಲಿ ಕರೆತರಲಾಯಿತು ಎಂದು ಶಿಕ್ಷಣ ಸಚಿವರು ತಿಳಿಸಿದ್ದಾರೆ.
ಇಂದಿನ ಪರೀಕ್ಷೆಯ ನೋಟ: ಹೆಚ್ಚುತ್ತಿರುವ ಕೊರೋನಾ ಸೋಂಕಿನ ನಡುವೆ ಇಂದು ಕೇವಲ ಹತ್ತನೇ ತರಗತಿ ಮಕ್ಕಳಿಗೆ ಮಾತ್ರವಲ್ಲದೆ ರಾಜ್ಯ ಸರ್ಕಾರಕ್ಕೆ ಸಹ ಅಗ್ನಿ ಪರೀಕ್ಷೆಯಾಗಿದೆ. ವಿರೋಧ ಪಕ್ಷಗಳು ಮತ್ತು ಹಲವು ಪೋಷಕರ ವಿರೋಧದ ನಡುವೆ ಪರೀಕ್ಷೆ ನಡೆಸುತ್ತಿರುವ ಸರ್ಕಾರಕ್ಕೆ ಈ ಪರೀಕ್ಷೆಯಲ್ಲಿ ಏನಾದರೂ ಎಡವಟ್ಟಾದರೆ ಕಷ್ಟವೇ.
ಪರೀಕ್ಷಾ ಕೇಂದ್ರದ ಹೊರಗೆ ಬಾಕ್ಸ್ ಮಾದರಿಯಲ್ಲಿ ಹಾಕಲಾಗಿದ್ದ ಸಾಲಿನಲ್ಲಿ ನಿಂತು ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಒಳಗೆ ಹೋಗಬೇಕಾಯಿತು. ಇಂದು ಬೆಳಗ್ಗೆ 7.30ಕ್ಕೆ ಮಕ್ಕಳು ಪರೀಕ್ಷಾ ಕೇಂದ್ರಕ್ಕೆ ಬಂದರು. ಪರೀಕ್ಷೆ ಬೆಳಗ್ಗೆ 10.30ಕ್ಕೆ ಆರಂಭವಾಯಿತು.
ಪರೀಕ್ಷೆ ಸುಗಮವಾಗಿ ಸಾಗಲು 1 ಲಕ್ಷಕ್ಕೂ ಅಧಿಕ ಅಧಿಕಾರಿಗಳನ್ನು ನಿಯೋಜಿಸಲಾಗಿದೆ. ಪೊಲೀಸ್ ಸಿಬ್ಬಂದಿ, ಆರೋಗ್ಯ ವಲಯ ಕಾರ್ಯಕರ್ತರು, ಸ್ಕೌಟ್ಸ್ ಮತ್ತು ಗೈಡ್ಸ್ ಸಿಬ್ಬಂದಿ ಥರ್ಮಲ್ ಸ್ಕ್ರೀನಿಂಗ್, ಮಕ್ಕಳ ಕೈಗಳನ್ನು ಸ್ಯಾನಿಟೈಸ್ ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.
9 ವಿದ್ಯಾರ್ಥಿಗಳು ಹೋಂ ಕ್ವಾರಂಟೈನ್ ನಲ್ಲಿದ್ದು 10 ಮಂದಿ ವಿದ್ಯಾರ್ಥಿಗಳಿಗೆ ಕೋವಿಡ್-19 ಬಂದ ಹಿನ್ನೆಲೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರಿಗೆ ಇನ್ನೊಂದು ಬಾರಿ ಪರೀಕ್ಷೆ ಬರೆಯಲು ಅವಕಾಶ ನೀಡಲಾಗುತ್ತದೆ. 27 ಪರೀಕ್ಷಾ ಕೇಂದ್ರಗಳನ್ನು ಕಂಟೈನ್ ಮೆಂಟ್ ವಲಯಗಳಿಂದ ವರ್ಗಾಯಿಸಲಾಗಿದೆ. ಪರೀಕ್ಷೆ ನಡೆಯುವ ಮಧ್ಯೆ ಯಾವುದೇ ಕೇಂದ್ರ ಕೊರೋನಾದಿಂದ ಸೀಲ್ ಡೌನ್ ಆದರೆ ಆ ಕೇಂದ್ರಗಳನ್ನು ಬೇರೆಡೆಗೆ ವರ್ಗಾಯಿಸಲು ಪ್ರತಿ ತಾಲ್ಲೂಕುಗಳಲ್ಲಿ ಎರಡು ಕೇಂದ್ರಗಳನ್ನು ಸಿದ್ದಪಡಿಸಲಾಗಿದೆ.
ಈ ಬಾರಿ ಪ್ರತಿ ಪರೀಕ್ಷಾ ಕೇಂದ್ರಗಳಲ್ಲಿ 18 ರಿಂದ 20 ವಿದ್ಯಾರ್ಥಿಗಳನ್ನು ಪರೀಕ್ಷೆ ಬರೆಯಲು ಕೂರಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


