ಪರಿಸ್ಥಿತಿ ನೋಡಿಕೊಂಡು ಸೋಯಾಬಿನ್ ಬಿತ್ತನೆ ಮಾಡಿ: ಬಿ.ಸಿ.ಪಾಟೀಲ್ ಮನವಿ
ಕಳೆದ ವರ್ಷ ಸುರಿದ ಹೆಚ್ಚಿನ ಪ್ರವಾಹದಿಂದಾಗಿ ಈ ವರ್ಷ ಸೋಯಾಬಿನ್ ಬೀಜ ಮೊಳಕೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಈ ಬಾರಿ ಪರಿಸ್ಥಿತಿ ನೋಡಿಕೊಂಡು ಬಿತ್ತನೆಗೆ ಮುಂದಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.

ಹಾವೇರಿ: ಕಳೆದ ವರ್ಷ ಸುರಿದ ಹೆಚ್ಚಿನ ಪ್ರವಾಹದಿಂದಾಗಿ ಈ ವರ್ಷ ಸೋಯಾಬಿನ್ ಬೀಜ ಮೊಳಕೆಯಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಈ ಬಾರಿ ಪರಿಸ್ಥಿತಿ ನೋಡಿಕೊಂಡು ಬಿತ್ತನೆಗೆ ಮುಂದಾಗಬೇಕು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಮನವಿ ಮಾಡಿದ್ದಾರೆ.
ನಗರದಲ್ಲಿ ಸೋಮವಾರ ಸೋಯಾಬಿನ್ ಬಿತ್ತನೆ ಸಂಬಂಧ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಕೃಷಿ ತಜ್ಞರು ಹಾಗೂ ಕೃಷಿ ಅಧಿಕಾರಿಗಳ ತುರ್ತು ಸಭೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸೋಯಾಬಿನ್ ಮೊಳಕೆಯಲ್ಲಿ ವ್ಯತ್ಯಾಸ ಕಂಡುಬಂದಿರುವುದು ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ ದೇಶಾದ್ಯಂತ ಕಂಡುಬಂದಿರುವ ಸಮಸ್ಯೆಯಾಗಿದೆ. ಭಾರತ ಸರ್ಕಾರ ಈ ಮೊದಲು ಶೇ.65ರಷ್ಟು ಬಿತ್ತನೆ ಒಪ್ಪಿಗೆ ಕೊಟ್ಟಿತ್ತು. ಪ್ರವಾಹದಿಂದಾಗಿ ಇದನ್ನು ಕೇಂದ್ರ ಸರ್ಕಾರ ಶೇ.60 ಕ್ಕೆ ಇಳಿಸಿದೆ. ಎಲ್ಲಾ ಕಡೆ ಮೊಳಕೆ ಕಡಿಮೆ ಬಂದಿದೆ. ಬೆಳಗಾವಿ, ಧಾರವಾಡ, ಬೀದರ್, ಗುಲ್ಬರ್ಗಾ, ಹಾವೇರಿ, ಬಾಗಲಕೋಟೆಯಲ್ಲಿ ಸೋಯಾಬಿನ್ ಹೆಚ್ಚು ಸೋಯಾಬಿನ್ ಬಿತ್ತನೆಯಾಗುವ ಜಿಲ್ಲೆಗಳಾಗಿವೆ. ಕಳೆದ ವರ್ಷ ಹೆಚ್ಚು ಪ್ರವಾಹದಿಂದಾಗಿ ಸೋಯಾಬಿನ್ ಬೀಜ ಮಧ್ಯಪ್ರದೇಶ ಮತ್ತು ಆಂಧ್ರಪ್ರದೇಶದಿಂದ ಕರ್ನಾಟಕಕ್ಕೆ ಪೂರೈಕೆಯಾಗಿದೆ. ಈ ವರ್ಷ 1,30,214 ಕ್ವಿಂಟಾಲ್ ಬೀಜವನ್ನು ಖರೀದಿಸಲಾಗಿದೆ ಎಂದರು.
ಸೋಯಾಬಿನ್ ಕಂಪನಿಗಳ ವಿರುದ್ಧ ಕ್ರಮ
ಇದೇ ವೇಳೆ ಸೋಯಾಬಿನ್ ಬಿತ್ತನೆ ಬೀಜ ಸರಿಯಾಗಿ ಮೊಳಕೆಯೊಡೆಯದಿರುವ ಬಗ್ಗೆ ಪರಿಶೀಲಿಸಲಾಗಿದೆ. ಬಿತ್ತನೆ ಬೀಜದಲ್ಲಿ ಲೋಪದೋಷಗಳಿದ್ದರೆ ಕಂಪನಿಗಳನ್ನೇ ಹೊಣೆಗಾರರನ್ನಾಗಿ ಮಾಡಿ, ಪ್ರಕರಣ ದಾಖಲಿಸಲಾಗುವುದು. ರೈತರಿಗಾದ ನಷ್ಟವನ್ನು ಕಂಪನಿಗಳೇ ತುಂಬಿಕೊಡಬೇಕು ಬಿ.ಸಿ. ಪಾಟೀಲ್ ತಿಳಿಸಿದರು.
ಬೆಂಗಳೂರಿನಲ್ಲಿ ಜೂನ್ 9ರಂದು ಕಂಪನಿಯ ಮಾಲೀಕರು ಹಾಗೂ ಪೂರೈಕೆದಾರರ ಸಭೆ ಕರೆಯಲಾಗಿದೆ. ಮೊಳಕೆ ಸಮಸ್ಯೆ ಬಗ್ಗೆ ಚರ್ಚಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ವಹಿಸಲಾಗುವುದು. ಬೀಜವನ್ನು ಪ್ರಮಾಣೀಕರಿಸಿದ ಹಾಗೂ ಪೂರೈಕೆದಾರರನ್ನು ಹೊಣೆಗಾರರನ್ನಾಗಿ ಮಾಡಿ ನಷ್ಟ ತುಂಬಿಸಿಕೊಡಲಾಗುವುದು. ಹಿಂದಿನ ವರ್ಷ ಸುರಿದ ಅತಿವೃಷ್ಟಿ ಮತ್ತು ಪ್ರವಾಹದಿಂದ ಈ ವರ್ಷ ಸೋಯಾಬಿನ್ ಮೊಳಕೆಯಲ್ಲಿ ವ್ಯತ್ಯಾಸ ಕಂಡು ಬಂದಿದೆ. ಈ ಸಮಸ್ಯೆ ಕೇವಲ ರಾಜ್ಯದಲ್ಲಿ ಮಾತ್ರವಲ್ಲದೆ ದೇಶದ ಎಲ್ಲೆಡೆ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸೋಯಾಬಿನ್ ಬಿತ್ತನೆ ಕ್ಷೇತ್ರ ಕಡಿಮೆ ಮಾಡಿ ಪರ್ಯಾಯ ಬೆಳೆಗೆ ರೈತರು ಮುಂದಾಗುವಂತೆ ಮನವಿ ಮಾಡಿಕೊಂಡರು.
ಮಧ್ಯಪ್ರದೇಶ ಮತ್ತು ಆಂಧ್ರದಿಂದ 1,30,214 ಕ್ವಿಂಟಲ್ ಸೋಯಾಬಿನ್ ಬಿತ್ತನೆ ಬೀಜವನ್ನು ಸರಬರಾಜು ಮಾಡಲಾಗಿದೆ. ಈ ಪೈಕಿ 1,02,745 ಕ್ವಿಂಟಲ್ ಬೀಜವನ್ನು ವಿತರಣೆ ಮಾಡಲಾಗಿದೆ. ಮೊಳಕೆ ಸಮಸ್ಯೆ ಕಾರಣ 2,498 ರೈತರು ಮರಳಿ ಬೀಜವನ್ನು ನೀಡಿದ್ದಾರೆ. ರಾಜ್ಯದ ಸೋಯಾಬಿನ್ ಬಿತ್ತನೆ ಮಾಡಿದ ನಾಲ್ಕು ಜಿಲ್ಲೆಗಳ 9695 ರೈತರು ಬಿತ್ತನೆ ಮಾಡಿದ 8592 ಹೆಕ್ಟೇರ್ ಪ್ರದೇಶದಲ್ಲಿ ಮೊಳಕೆ ಸಮಸ್ಯೆ ಕಂಡುಬಂದಿದೆ ಎಂದು ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


