ಕೊರೋನಾ ಲಾಕ್ ಡೌನ್ ಗೆ 'ಬಾಡಿ ಹೋದ ಹೂಗಳು': ಕೊಳ್ಳುವವರಿಲ್ಲದೆ 360 ಕೋಟಿ ರೂ. ನಷ್ಟ
ಕೋವಿಡ್-19 ಹೂ ಬೆಳೆಗಾರರನ್ನು ಮತ್ತು ಮಾರಾಟಗಾರರನ್ನು ನಿಜಕ್ಕೂ ಸಂಕಷ್ಟಕ್ಕೆ ತಳ್ಳಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿರುವ ಸುಮಾರು 2 ಸಾವಿರ ಹೂ ಬೆಳೆಗಾರರು ಕಳೆದ ಮೂರು ತಿಂಗಳಿನಿಂದ ಸುಮಾರು 360 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಬೆಂಗಳೂರು: ಕೋವಿಡ್-19 ಹೂ ಬೆಳೆಗಾರರನ್ನು ಮತ್ತು ಮಾರಾಟಗಾರರನ್ನು ನಿಜಕ್ಕೂ ಸಂಕಷ್ಟಕ್ಕೆ ತಳ್ಳಿದೆ. ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿರುವ ಸುಮಾರು 2 ಸಾವಿರ ಹೂ ಬೆಳೆಗಾರರು ಕಳೆದ ಮೂರು ತಿಂಗಳಿನಿಂದ ಸುಮಾರು 360 ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.
ಬೇಸಿಗೆ ಕಾಲದಲ್ಲಿ ಮದುವೆ ಇನ್ನಿತರ ಶುಭ ಸಮಾರಂಭಗಳು ಸೇರಿದಂತೆ ಎಲ್ಲಾ ಕಾರ್ಯಕ್ರಮಗಳು ರದ್ದಾಗಿರುವುದರಿಂದ ಮಾರ್ಚ್ ತಿಂಗಳಿನಿಂದ ಬೆಳೆದ ಹೂವುಗಳನ್ನು ಕೊಳ್ಳುವವರಿಲ್ಲದಾಗಿದೆ. ಇನ್ನು ಸರ್ಕಾರ ಮದುವೆ ಮಾಡಲು ಅನುಮತಿ ಕೊಟ್ಟರೂ ಸಹ 50ಕ್ಕಿಂತ ಹೆಚ್ಚು ಅತಿಥಿಗಳನ್ನು ಸೇರಿಸುವಂತಿಲ್ಲ,ಸರಳವಾಗಿ ಮಾಡಬೇಕು ಎಂದು ಹೇಳಿರುವುದು, ಅನೇಕ ಕಡೆಗಳಲ್ಲಿ ಉತ್ಸವ, ಜಾತ್ರೆ, ಇನ್ನಿತರ ಕಾರ್ಯಕ್ರಮಗಳನ್ನು ರದ್ದುಪಡಿಸಿರುವುದು ಹೂ ಬೆಳೆಗಾರರು, ಕೃಷಿಕರು ತಲೆ ಮೇಲೆ ಕೈ ಹೊತ್ತು ಕೂರುವಂತೆ ಮಾಡಿದೆ.
ಒಂದು ಎಕರೆ ಪ್ರದೇಶದಲ್ಲಿ 2 ಲಕ್ಷ ಹಣ ಹಾಕಿ ಹೂ ಬೆಳೆದರೆ ಬೇರೆ ಸಮಯಗಳಲ್ಲಾದರೆ ಅದನ್ನು ಮಾರಾಟ ಮಾಡಿ ಕೈಗೆ 4ರಿಂದ 5 ಲಕ್ಷ ರೂಪಾಯಿ ಸಿಗುತ್ತಿತ್ತು. ಆದರೆ ಈಗ ಕಳೆದ ಎರಡು-ಮೂರು ತಿಂಗಳಿನಿಂದ ಕೊಳ್ಳುವವರಿಲ್ಲದೆ ಹಲವು ರೈತರು ಬೆಳೆದ ಹೂಗಳನ್ನು ಕಿತ್ತು ಬಿಸಾಕಿದರೆ ಇನ್ನು ಹಲವರು ಅದರ ಮೇಲೆ ಟ್ರ್ಯಾಕ್ಟರ್ ಹರಿಸಿ ನಾಶಪಡಿಸಿದ್ದಾರೆ.ಕಳೆದ ಎರಡು ತಿಂಗಳಲ್ಲಿ ಸಾವಿರಕ್ಕೂ ಹೆಚ್ಚು ಹೂ ಬೆಳೆಗಾರರು ಬಾಗಿಲು ಹಾಕಿದ್ದಾರೆ ಎಂದು ದಕ್ಷಿಣ ಭಾರತ ಹೂ ಬೆಳೆಗಾರರ ಒಕ್ಕೂಟದ ನಿರ್ದೇಶಕ ಶ್ರೀಕಾಂತ್ ಬೊಲಪಳ್ಳಿ ಹೇಳುತ್ತಾರೆ.
ಬೆಂಗಳೂರು ಸುತ್ತಮುತ್ತ 2,500 ಎಕರೆ ಪ್ರದೇಶದಲ್ಲಿ ಬೆಳೆಗಾರರು ಬೆಳೆದ ಗುಲಾಬಿ, ಸೇವಂತಿಗೆ, ಮಲ್ಲಿಗೆ, ಕನಕಾಂಬರ, ಜರ್ಬೆರಾ ಮೊದಲಾದವುಗಳನ್ನು ಖರೀದಿಸುವವರೇ ಇಲ್ಲವಾಗಿದೆ. ಲಾಭ ಸಿಗುವುದು ಬಿಡಿ, ಹಾಕಿದ ಬಂಡವಾಳ ವಾಪಸ್ ಬಂದಿಲ್ಲ ಎನ್ನುತ್ತಾರೆ ದೊಡ್ಡಬಳ್ಳಾಪುರದ ರೈತ ಮಹಿಳೆ ಮಂಜುಶ್ರೀ.
ಬಹುತೇಕ ರೈತರಿಗೆ ನಷ್ಟವಾಗಿದೆ, ರೈತರ ವಿದ್ಯುತ್ ಬಿಲ್ ಪಾವತಿ ಮನ್ನಾ ಮಾಡಿ ಎಂದು ಹೂ ಬೆಳೆಗಾರರ ಒಕ್ಕೂಟ ಡಿಸಿಎಂ ಅಶ್ವಥನಾರಾಯಣ ಮತ್ತು ತೋಟಗಾರಿಕೆ ಇಲಾಖೆ ಸಚಿವ ನಾರಾಯಣ ಗೌಡ ಅವರಿಗೆ ಮನವಿ ಮಾಡಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


