ಚಿಕ್ಕಮಗಳೂರು: ವಿಜಯನಗರ ಕಾಲದ ಅಪರೂಪದ ದೇವಾಲಯ ಪತ್ತೆ
ಭದ್ರಾ ನದಿ ದಡದ ಪಂಚತೀರ್ಥಗಳಲ್ಲೊಂದಾದ ವಶಿಷ್ಟತೀರ್ಥದ ಬಳಿ ಮಲೆನಾಡಿನಲ್ಲಿ ವಿಜಯನಗರ ಕಾಲದ ಅಪರೂಪವಾದ ‘ವೀರಮಹಾಸತಿ ಗುಡಿ’ಯನ್ನು ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಸಂಶೋಧನೆ ಮಾಡಿದ್ದಾರೆ.

ಚಿಕ್ಕಮಗಳೂರು: ಭದ್ರಾ ನದಿ ದಡದ ಪಂಚತೀರ್ಥಗಳಲ್ಲೊಂದಾದ ವಶಿಷ್ಟತೀರ್ಥದ ಬಳಿ ಮಲೆನಾಡಿನಲ್ಲಿ ವಿಜಯನಗರ ಕಾಲದ ಅಪರೂಪವಾದ ‘ವೀರಮಹಾಸತಿ ಗುಡಿ’ಯನ್ನು ಇತಿಹಾಸ ಸಂಶೋಧಕ ಎಚ್.ಆರ್.ಪಾಂಡುರಂಗ ಸಂಶೋಧನೆ ಮಾಡಿದ್ದಾರೆ.
‘ಕಳಸದ ಅರಣ್ಯ ಇಲಾಖೆಯ ನರ್ಸರಿ ಪಕ್ಕದಲ್ಲಿ ನಾಲ್ಕು ಅಡಿ ಎತ್ತರದ ಕಣಶಿಲೆಯ ಕಲ್ಲಿನಲ್ಲಿ ವೀರ- ಮಹಾಸತಿ ಶಿಲ್ಪವಿದೆ. ವೀರ ಮಹಾಸತಿಯರ ಕುತ್ತಿಗೆಯವರೆಗೆ ಹುತ್ತವು ಮುಚ್ಚಿಕೊಂಡಿದೆ.
ಈ ಶಿಲಾ ಸ್ಮಾರಕ ಎರಡು ಫಲಕ ಹೊಂದಿದ್ದು, ಕೆಳಗಿನ ಫಲಕದಲ್ಲಿ ವೀರನಶಿಲ್ಪ ಖಡ್ಗಧಾರಿಯಾಗಿದ್ದು ಅವನು ಧರಿಸಿದ ಶಿರೋಭೂಷಣ, ಕಿವಿಯಲ್ಲಿ ಧರಿಸಿದ ಕರ್ಣಕುಂಡಲ ಆಕರ್ಷಕವಾಗಿವೆ.
ಬಲಭಾಗದ ಆತನ ಪತ್ನಿ ವೀರಮಹಾಸತಿ ಆಕರ್ಷಕ ಕೇಶಾಲಂಕಾರ, ಕರ್ಣಕುಂಡಲ ಧರಿಸಿದ್ದು ಮೇಲೆತ್ತಿದ ಎರಡೂ ಕೈಗಳಲ್ಲಿ ಕನ್ನಡಿ ಹಾಗೂ ನಿಂಬೆ ಹಣ್ಣು ಹಿಡಿದಂತಿದೆ’ ಎಂದು ಸಂಶೋಧಕ ಎಚ್.ಆರ್.ಪಾಂಡುರಂಗ ಹೇಳಿದ್ದಾರೆ.
ಈ ವೀರ ಮಹಾಸತಿ ಶಿಲ್ಪ 14ನೇ ಶತಮಾನದ ಭೈರವರಸರ ಆಡಳಿತದ ಶಿಲ್ಪವಾಗಿದ್ದು, ವಿಜಯನಗರ ಸಾಮ್ರಾಜ್ಯದ ಆರಂಭ ಕಾಲಕ್ಕೆ ಸೇರಿರಬಹುದು ಎಂದು ಊಹಿಸಬಹುದಾಗಿದೆ’ ಎಂದು ತಿಳಿಸಿದ್ದಾರೆ.
ಸ್ಮಾರಕದ ಮೇಲಿನ ಫಲಕದಲ್ಲಿ ಎಡಭಾಗದಲ್ಲಿ ಶಿವಲಿಂಗದ ಮುಂದೆ ಮಂಡಿಯೂರಿ ಕುಳಿತ ಶಿವನ ವಾಹನ ಸರ್ವಾಲಂಕೃತ ನಂದಿ, ಶಿವಲಿಂಗ, ಘಂಟಾ ನಾದ ಮಾಡುತ್ತಾ ದೀಪಾರತಿ ಮಾಡುತ್ತಿರುವ ಅರ್ಚಕರು ಹಾಗೂ ಅವರ ಪಕ್ಕದಲ್ಲಿ ದೀಪದ ಕಂಭವಿದ್ದು, ಶಿವಲಿಂಗದ ಮೇಲೆ ಎಡಭಾಗದಲ್ಲಿ ಸೂರ್ಯ, ಬಲಭಾಗದಲ್ಲಿ ಚಂದ್ರನ ಚಿತ್ರಣಗಳಿವೆ.
ವೀರ-ಮಹಾಸತಿ ಇಬ್ಬರೂ ಕೈಲಾಸ ವಾಸಿಗಳಾಗಿದ್ದಾರೆ ಎಂದು ಅರ್ಥೈಸಬಹುದು’ ಎಂದು ಹೇಳಿದ್ದಾರೆ. ‘ಈ ಸ್ಮಾರಕದ ವೀರ- ಮಹಾಸತಿಯರ ಶಿರೋಭೂಷಣ- ಕೇಶಾಲಂಕಾರ ಅವರು ನಿಂತ ನಿಲುವು ಗಮನಿಸಿದರೆ ಈ ಶಿಲ್ಪದಲ್ಲಿನ ವೀರ ಕಳಸ ನಾಡಿನ ಸೈನ್ಯಾಧಿಪತಿಯೋ, ರಾಜಕುಟುಂಬದ ಸದಸ್ಯನೋ ಆಗಿದ್ದು ಯಾವುದೋ ಯುದ್ಧದಲ್ಲಿ ವೀರ ಮರಣಹೊಂದಿದ್ದು, ಅವನೊಂದಿಗೆ ಅವನ ಮಡದಿ ಸಹಗಮನ ಮಾಡಿದ್ದು ಅವರ ಸ್ಮರಣಾರ್ಥ ಅವರಿಬ್ಬರ ಸ್ಮಾರಕಶಿಲ್ಪ ಪ್ರತಿಷ್ಠಾಪಿಸಿ ಶಿಲಾಮಂಟಪ ಕಟ್ಟಿಸಿ ನಿತ್ಯ ಪೂಜೆ
ಮಾಡುತ್ತಿದ್ದರು ಎನ್ನಬಹುದಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


