ಪ್ರಧಾನಿ ಮೋದಿ ಹೋದಲ್ಲೆಲ್ಲ ಇವರು ಹೋಗುತ್ತಾರೆ, ಫೋಟೋ ತೆಗೆಯುತ್ತಾರೆ, ಇವರು ತುಮಕೂರಿನವರು!
ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿಗೇ ಹೋಗಲಿ ಅವರ ಹಿಂದೆ ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಧಾನ ಫೋಟೋಗ್ರಾಫರ್ ಮತ್ತು ವಿಡಿಯೊಗ್ರಾಫರ್ ಇರುತ್ತಾರೆ.

ತುಮಕೂರು: ಪ್ರಧಾನಿ ನರೇಂದ್ರ ಮೋದಿಯವರು ಎಲ್ಲಿಗೇ ಹೋಗಲಿ ಅವರ ಹಿಂದೆ ಪ್ರಧಾನ ಮಂತ್ರಿ ಕಾರ್ಯಾಲಯದ ಪ್ರಧಾನ ಫೋಟೋಗ್ರಾಫರ್ ಮತ್ತು ವಿಡಿಯೊಗ್ರಾಫರ್ ಇರುತ್ತಾರೆ.
ಪ್ರಧಾನಿಯವರ ಚಟುವಟಿಕೆಗಳ ಫೋಟೋ ತೆಗೆಯುವುದು, ವಿಡಿಯೊ ಮಾಡುವುದು ಇವರ ಕೆಲಸ. ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿರುವ ಫೋಟೋಗ್ರಾಫರ್ ಪ್ರಸಾರ ಭಾರತಿ ಉದ್ಯೋಗಿ ಯಡಲಮ್ ಕೃಷ್ಣಮೂರ್ತಿ ಲೋಕನಾಥ್ ತುಮಕೂರು ಜಿಲ್ಲೆಯವರು ಎಂಬುದು ಅನೇಕರಿಗೆ ಗೊತ್ತಿಲ್ಲ.
ಈ ಕನ್ನಡಿಗ ತುಮಕೂರು ಜಿಲ್ಲೆಯ ಪಾವಗಡ ತಾಲ್ಲೂಕಿನ ವೈ ಎನ್ ಹೊಸಕೋಟೆಯ ಓಬಳಾಪುರದವರು. ಇಂದು ತುಮಕೂರಿಗೆ, ಬೆಂಗಳೂರಿಗೆ ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಆಗಮಿಸುತ್ತಿರುವ ಪ್ರಧಾನಿಗಳ ಜೊತೆ ಈ ಫೋಟೋಗ್ರಾಫರ್ ಕೃಷ್ಣಮೂರ್ತಿಯವರು ಸಹ ಬರುತ್ತಿದ್ದಾರೆ.
ಕೃಷ್ಣಮೂರ್ತಿಯವರು ಪ್ರಧಾನ ಮಂತ್ರಿ ಕಾರ್ಯಾಲಯದಲ್ಲಿ ಎರಡು ದಶಕಗಳಿಂದ ಕಾರ್ಯನಿರ್ವಹಿಸುತ್ತಿದ್ದು ಹಲವು ಕಾರ್ಯಕ್ರಮಗಳಲ್ಲಿ ಫೋಟೋಗ್ರಫಿ ಮಾಡಿದ ಅನುಭವ ಹೊಂದಿದ್ದಾರೆ. ''ಕಳೆದ 6 ವರ್ಷಗಳಲ್ಲಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಅವರ ಜೊತೆ ಓಡಾಡಿ ತೆಗೆದ ಫೋಟೋಗಳು ನಿಜಕ್ಕೂ ಅವಿಸ್ಮರಣೀಯ, ಹಲವು ಸಂದರ್ಭಗಳಲ್ಲಿ ವಿದೇಶಗಳಿಗೆ ಹೋಗುವ ಅವಕಾಶ ಸಿಕ್ಕಿತು'' ಎನ್ನುತ್ತಾರೆ.
ಕೃಷ್ಣಮೂರ್ತಿಯವರಿಗೆ ಅತ್ಯಂತ ಅವಿಸ್ಮರಣೀಯವಾದ ಪ್ರವಾಸವೆಂದರೆ ಸ್ವಿಡ್ಜರ್ಲ್ಯಾಂಡ್ ಗೆ ಹೋಗಿದ್ದಂತೆ. ಅಲ್ಲಿ 15 ಡಿಗ್ರಿ ಸೆಲ್ಸಿಯಸ್ ಗೆ ಉಷ್ಣಾಂಶ ಇಳಿದಿತ್ತು. ಆ ಚಳಿಯಲ್ಲಿ ಮೋದಿಯವರು ವಾತಾವರಣಕ್ಕೆ ಮತ್ತು ನಮ್ಮ ಜೊತೆ ಹೊಂದಿಕೊಂಡಿದ್ದರು ಎಂದು ನಡೆದ ಘಟನೆಯನ್ನು ನೆನಪಿಸಿಕೊಳ್ಳುತ್ತಾರೆ ಲೋಕನಾಥ್.
ಮೋದಿಯವರು ವಿದೇಶಗಳಿಗೆ ಹೋದ ಬಹುಪಾಲು ಪ್ರವಾಸದ ಫೋಟೋಗಳನ್ನು ಕೃಷ್ಣಮೂರ್ತಿ ಲೋಕನಾಥ್ ತೆಗೆದಿದ್ದಾರೆ. ಸುಮಾರು 40 ದೇಶಗಳಿಗೆ ಪ್ರಧಾನಿ ಜೊತೆ ಭೇಟಿ ಕೊಟ್ಟಿದ್ದಾರೆ. ಯುಪಿಎ-2 ಸರ್ಕಾರದ ಅವಧಿಯಲ್ಲಿ ಕೆಲಸದಿಂದ ವಿರಾಮ ತೆಗೆದುಕೊಂಡಿದ್ದರಂತೆ. ಪ್ರಧಾನ ಮಂತ್ರಿ ಕಾರ್ಯಾಲಯದಿಂದ ಮತ್ತೆ ಕರೆಬಂತು ಎಂದು ಹೇಳಿಕೊಳ್ಳುವ ಕೃಷ್ಣಮೂರ್ತಿಯವರು ಅಬ್ದುಲ್ ಕಲಾಂ ಅವರು ರಾಷ್ಟ್ರಪತಿಗಳಾಗಿದ್ದಾಗ ಅವರ ಫೋಟೋಗ್ರಾಫರ್ ಆಗಿದ್ದರು.
ಈ ವೃತ್ತಿಗೆ ಹೇಗೆ ಬಂದಿರಿ ಎಂದು ಕೇಳಿದಾಗ, ತಮ್ಮ ಮಾವ ಎಂ ಸಿ ಗಿರೀಶ್ ಬೆಂಗಳೂರಿನಲ್ಲಿ ಕಲರ್ ಲ್ಯಾಬ್ ಇಟ್ಟುಕೊಂಡಿದ್ದರು. ಅವರಿಂದ ಪ್ರೇರಣೆಗೊಂಡು ಫೋಟೋಗ್ರಫಿ ಕಲಿತೆ. ಪಿಯುಸಿ ಶಿಕ್ಷಣ ಮುಗಿಸಿ ಜಯಚಾಮರಾಜೇಂದ್ರ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಸೇರಿ ಫಿಲ್ಮ್ ಅಂಡ್ ಟೆಲಿವಿಷನ್ ಇನ್ಸ್ ಟಿಟ್ಯೂಟ್ ನಲ್ಲಿ 1989ರಲ್ಲಿ ಡಿಪ್ಲೊಮಾ ತೇರ್ಗಡೆ ಮಾಡಿಕೊಂಡೆ. ಇದೀಗ ನನ್ನ ತವರು ಜಿಲ್ಲೆಯಲ್ಲಿ ಪ್ರಧಾನಿಯವರ ಕಾರ್ಯಕ್ರಮದಲ್ಲಿ ಫೋಟೋ ತೆಗೆಯುವ ಅವಕಾಶ ಬಂದಿರುವುದು ತುಂಬಾ ಸಂತೋಷವಾಗುತ್ತಿದೆ ಎನ್ನುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


