ರಾಜ್ಯ

ಸರ್ಕಾರ ಶಾಲೆ ತೆರೆಯಬೇಕು, ಇಲ್ಲದಿದ್ದರೆ ನಾವೇ ಆರಂಭಿಸುತ್ತೇವೆ; ಸಂಘಟನೆಗಳ ಎಚ್ಚರಿಕೆ

ರಾಜ್ಯ ಸರ್ಕಾರ ಶಾಲೆಗಳನ್ನು ತೆರೆಯಬೇಕು... ಇಲ್ಲದಿದ್ದರೆ ನಾವೇ ಆರಂಭಿಸುತ್ತೇವೆ ಎಂದು ಮಕ್ಕಳ ನಡೆ-ಶಾಲೆಯ ಕಡೆ ಅಭಿಯಾನದ ಸಮಿತಿಯು ಎಚ್ಚರಿಕೆ ನೀಡಿದೆ.

ಸರ್ಕಾರ ಶಾಲೆ ತೆರೆಯಬೇಕು, ಇಲ್ಲದಿದ್ದರೆ ನಾವೇ ಆರಂಭಿಸುತ್ತೇವೆ; ಸಂಘಟನೆಗಳ ಎಚ್ಚರಿಕೆ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಜ್ಯ ಸರ್ಕಾರ ಶಾಲೆಗಳನ್ನು ತೆರೆಯಬೇಕು...ಇಲ್ಲದಿದ್ದರೆ ನಾವೇ ಆರಂಭಿಸುತ್ತೇವೆ ಎಂದು ಮಕ್ಕಳ ನಡೆ-ಶಾಲೆಯ ಕಡೆ ಅಭಿಯಾನದ ಸಮಿತಿಯು ಎಚ್ಚರಿಕೆ ನೀಡಿದೆ.

ರಾಜ್ಯದ ಎಲ್ಲಾ ಶಾಲೆಗಳ ಎಲ್ಲಾ ಪುನರಾರಂಭಿಸಬೇಕು. ಅವೈಜ್ಞಾನಿಕ ವರದಿ ನೀಡಿರುವ ತಾಂತ್ರಿಕ ಸಲಹಾ ಸಮಿತಿಯನ್ನು ಬರಖಾಸ್ತು ಮಾಡಬೇಕು ಎಂದು ಆಗ್ರಹಿಸಿರುವ ಮಕ್ಕಳ ನಡೆ-ಶಾಲೆಯ ಕಡೆ ಅಭಿಯಾನದ ಸಮಿತಿಯು, ಒಂದು ವೇಳೆ ಸರ್ಕಾರ ನಮ್ಮ ಸಲಹೆಯನ್ನು  ತಿರಸ್ಕರಿಸಿದರೆ, ನಮ್ಮೂರ ಶಾಲೆಗಳನ್ನು ನಾವೇ ತೆರೆಯುವ ಅಭಿಯಾನವನ್ನು ಇನ್ನಷ್ಟು ವ್ಯಾಪಕವಾಗಿ ನಡೆಸಲಿದ್ದೇವೆ ಎಂದು ಎಚ್ಚರಿಸಿದೆ.

ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಶಿಕ್ಷಣ ತಜ್ಞ ಡಾ.ನಿರಂಜನಾರಾಧ್ಯ ವಿಪಿ ಮತ್ತು ಇತರ ತಜ್ಞರು, ಕರ್ನಾಟಕದಲ್ಲಿ ಮಾರ್ಚ್ ಬಳಿಕ ಕೊರೋನ ಸೋಂಕಿನ ನೆಪದಲ್ಲಿ ಎಲ್ಲಾ ಶಾಲೆಗಳನ್ನು ಮುಚ್ಚಲಾಗಿದ್ದು ಈಗ ಕೊರೋನ ಹರಡುವಿಕೆಯು ಇಳಿಮುಖವಾಗಿ, ಬೇರೆಲ್ಲಾ ಚಟುವಟಿಕೆಗಳಿಗೆ  ಮುಕ್ತ ಅವಕಾಶವನ್ನು ನೀಡಲಾಗಿದ್ದರೂ ಶಾಲೆಗಳನ್ನು ಇನ್ನೂ ತೆರೆದಿಲ್ಲ. ಮಕ್ಕಳಿಗೆ ಕೊರೋನ ಸೋಂಕಿನಿಂದ ಯಾವುದೇ ಅಪಾಯವಿಲ್ಲದಿರುವುದರಿಂದಲೂ, ಕೊರೋನ ಹರಡುವಿಕೆಯು ಈಗಾಗಲೇ ಅತಿ ವಿರಳವಾಗಿರುವುದರಿಂದಲೂ ಬಾಲವಾಡಿಯಿಂದ 12ನೇ ತರಗತಿಯವರೆಗೆ ಎಲ್ಲಾ  ಶಾಲೆಗಳನ್ನು ಡಿಸೆಂಬರ್ 15ರೊಳಗೆ ಪೂರ್ಣವಾಗಿ ತೆರೆಯಬೇಕೆಂದು ನಾವು ಇದೇ ಡಿಸೆಂಬರ್ 7ರಂದು ರಾಜ್ಯದ ಶಿಕ್ಷಣ ಸಚಿವರಿಗೆ ಮನವಿಯನ್ನು ಸಲ್ಲಿಸಿದ್ದೆವು, ಮಾತ್ರವಲ್ಲ, ತೆರೆಯದೇ ಹೋದರೆ ನಾವೇ ಶಾಲೆಗಳನ್ನು ತೆರೆಯುತ್ತೇವೆ ಎಂದೂ ಹೇಳಿದ್ದೆವು. ಸರಕಾರವು ಶಾಲೆಗಳನ್ನು  ತೆರೆಯದೇ ಇರುವುದರಿಂದ ಹಲವು ಶಾಲೆಗಳನ್ನು ತೆರೆಯುವ ಪ್ರಯತ್ನಗಳು ಈಗಾಗಲೇ ಆಗಿವೆ ಎಂದು ಅವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಶಾಲೆಗಳನ್ನು ತೆರೆಯಲು ಇನ್ನಷ್ಟೇ ನಿರ್ಧರಿಸಬೇಕಿರುವ ಸರಕಾರವು ಜನವರಿ 1ರಿಂದ ಸೀಮಿತ ಮಟ್ಟದಲ್ಲಿ ವಿದ್ಯಾಗಮ ಕಾರ್ಯಕ್ರಮವನ್ನು ಶಾಲಾ ಕೊಠಡಿಗಳಲ್ಲೇ ಆರಂಭಿಸುವುದಾಗಿ ಹೇಳಿದೆ. ಈಗ ಲಭ್ಯವಾಗಿರುವ ಮಾಹಿತಿಯಂತೆ ರಾಜ್ಯದ ಕೊರೋನ ಕಾರ್ಯಪಡೆ - ತಾಂತ್ರಿಕ ಸಲಹಾ  ಸಮಿತಿಯು 10 ಮತ್ತು 12ನೆ ತರಗತಿಗಳನ್ನು ಜನವರಿ 1 ರಿಂದ ತೆರೆಯಬಹುದೆಂದೂ, 6-9 ಮತ್ತು 11ನೇ ತರಗತಿಗಳಿಗೆ ಜನವರಿ 14ರಿಂದ ವಿದ್ಯಾಗಮ ಆರಂಭಿಸಬಹುದೆಂದೂ, 6ಕ್ಕಿಂತ ಕೆಳಗಿನ ತರಗತಿಗಳನ್ನು ತೆರೆಯಲೇಬಾರದೆಂದೂ ಸಲಹೆ ನೀಡಿರುವುದಾಗಿ ವರದಿಯಾಗಿದೆ. ಇದು  ಸಂಪೂರ್ಣವಾಗಿ ಅವೈಜ್ಞಾನಿಕವೂ, ಅಪಾಯಕಾರಿಯೂ ಆಗಿದ್ದು, ನಮ್ಮ ಮಕ್ಕಳ ಭವಿಷ್ಯವನ್ನು ಶಾಶ್ವತವಾಗಿ ಕೆಡಿಸಲಿದೆ. 

ಈ ಸಲಹೆಯು ಈ ಶೈಕ್ಷಣಿಕ ವರ್ಷವಿಡೀ ಶಾಲೆಗಳನ್ನು ತೆರೆಯದಿರುವ ಹುನ್ನಾರವೆಂಬುದು ಸ್ಪಷ್ಟವಾಗುತ್ತದೆ. ಹೀಗೆ ಒಂದು ವರ್ಷ ಕಲಿಕೆಯಿಂದ ವಂಚಿತರಾದರೆ 3-15 ವಯಸ್ಸಿನ ಎಲ್ಲ ಮಕ್ಕಳೂ ಹಿಂದಿನದನ್ನು ಮರೆತು, ಮುಂದಿನದನ್ನು ಕಲಿಯಲಾಗದೆ ಎಂದೆಂದಿಗೂ ಕಷ್ಟಕ್ಕೀಡಾಗಲಿದ್ದಾರೆ  ಎಂಬ ಸಾಮಾನ್ಯ ಜ್ಞಾನವೂ ಈ ಸಮಿತಿಯವರಿಗೆ ಇದ್ದಂತಿಲ್ಲ. ಜೊತೆಗೆ, ಈ ಸಂಕಷ್ಟಕ್ಕೆ ಒಳಗಾಗುವ ಬಹುತೇಕ ಮಕ್ಕಳು ಅತ್ಯಂತ ಕೆಳಸ್ತರದ ವರ್ಗಗಳಿಗೆ ಸೇರಿದ ಮಕ್ಕಳಾಗಿದ್ದು ಅವರು ಪೂರ್ಣವಾಗಿ ಶಾಲೆ ತೊರೆದು ಬಾಲ ಕಾರ್ಮಿಕ ಹಾಗು ಜೀತ ಕಾರ್ಮಿಕರಾಗುವ ಸಾಧ್ಯತೆಗಳು  ಹೆಚ್ಚಿವೆ. ಈಗಾಗಲೇ ಬಾಲ್ಯ ವಿವಾಹ ಮತ್ತು ಮಕ್ಕಳ ಸಾಗಾಣಿಕೆ ಹೆಚ್ಚಿರುವ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.