ಅಪರಾಧ ಕೃತ್ಯಗಳು ಹೆಚ್ಚಾದರೆ ಠಾಣಾಧಿಕಾರಿಗಳೇ ಹೊಣೆ: ಪೊಲೀಸ್ ಆಯುಕ್ತ ಕಮಲ್ ಪಂತ್ ಎಚ್ಚರಿಕೆ
ಠಾಣಾ ಮಟ್ಟದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕದೆ ಹೋದರೆ, ಆಯಾ ಠಾಣಾಧಿಕಾರಿಗಳು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರು: ಠಾಣಾ ಮಟ್ಟದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗೆ ಕಡಿವಾಣ ಹಾಕದೆ ಹೋದರೆ, ಆಯಾ ಠಾಣಾಧಿಕಾರಿಗಳು ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರು ಎಚ್ಚರಿಕೆ ನೀಡಿದ್ದಾರೆ.
ನಿಮ್ಹಾನ್ಸ್ ಸಂಸ್ಥೆ ಸಭಾಂಗಣದಲ್ಲಿ ನಗರದ ಇನ್ಸ್ ಪೆಕ್ಟರ್ ಅಧಿಕಾರಿಗಳ ಮೊದಲ ಸಭೆ ನಡೆಸಿದ ಅವರು, ಆಡಳಿತ ಹಾಗೂ ತನಿಖೆ ವ್ಯವಸ್ಥೆಯ ಸುಧಾರಣೆಕ ಕುರಿತು ಎರಡು ತಾಸು ಸುದೀರ್ಘವಾಗಿ ಮಾತನಾಡಿ ಕಾನೂನು ಪಾಲನೆ ಪಾಠ ಹೇಳಿದರು.
ಠಾಣೆಗಳ ವಾತಾವರಣ ಬದಲಾಗಬೇಕು. ಸ್ವಚ್ಛತೆಗೆ ಆದ್ಯತೆ ಇರಲಿ. ಠಾಣೆಗಳಿಗೆ ಸಮಸ್ಯೆ ಹೊತ್ತುಬರುವ ಜನರಿಗೆ ಸೂಕ್ತವಾಗಿ ಪೊಲೀಸರು ಸ್ಪಂದಿಸಬೇಕು. ಹಾಗೆ ಸಿಬ್ಬಂದಿ ವರ್ಗದ ದುಃಖ ದುಮ್ಮನಾಗಳಿಗೂ ಅಧಿಕಾರಿಗಳು ಕಿವಿಗೊಡಬೇಕೆಂದು ಆಯುಕ್ತರು ಸೂಚಿಸಿದರು.
ಕಾನೂನು ಮತತ್ತು ಸುವ್ಯವಸ್ಥೆ, ಅಪರಾಧ ಕೃತ್ಯಗಳ ನಿಯಂತ್ರಣ ಹಾಗೂ ತನಿಖೆ ಪ್ರಕ್ರಿಯೆ ವಿಭಾಗಗಳು ಸುಧಾರಣೆಯಾಗಬೇಕಿದೆ. ಇತ್ತೀಚೆಗೆ ನ್ಯಾಯಾಲಯಗಳಲ್ಲಿ ಆರೋಪಿಗಳು ದೋಷಮುಕ್ತರಾಗುತ್ತಿರುವುದಕ್ಕೆ ತನಿಖಾ ವೈಪಳ್ಯ ಸಹ ಪ್ರಮುಖ ಕಾರಣವಾಗಿದೆ. ಹೀಗಾಗಿ ತನಿಖೆಯಲ್ಲಿ ಲೋಪವಾಗದಂತೆ ಎಚ್ಚರಿಕೆವಹಿಸಬೇಕು. ಈ ನಿಟ್ಟಿನಲ್ಲಿ ಹೆಚ್ಚುವರಿ ಆಯುಕ್ತರು, ಡಿಸಿಪಿ, ಎಸಿಬಿ, ಇನ್ಸ್ ಪೆಕ್ಟರ್ ಹಾಗೂ ಸಬ್ ಇನ್ಸ್ ಪೆಕ್ಟರ್ ಗಳು ಹೀಗೆ ಪ್ರತೀಯೊಬ್ಬರು ತಮ್ಮ ಹೊಣೆಗಾರಿಕೆ ಅರಿತು ಕಾರ್ಯನಿರ್ವಹಿಸುವಂತೆ ತಾಕೀತು ಮಾಡಿದರು.
ಡ್ರಗ್ಸ್ ಮುಕ್ತ ಬೆಂಗಳೂರು ಮಾಡುವ ಧ್ಯೇಯ ಹೊಂದಲಾಗಿದೆ. ಠಾಣಾ ಮಟ್ಟದಲ್ಲಿ ತಂಡ ರಚಿಸಿಕೊಂಡು ಪೆಡ್ಲರ್ ಗಳ ಮೇಲೆ ಹೆಚ್ಚಿನ ನಿಗಾವಹಿಸಬೇಕು. ಡ್ರಗ್ಸ್ ಮಾರಾಟ ಜಾಲ ಹಾಗೂ ರೌಡಿಸಂ ಸೇರಿದಂತೆ ಅಕ್ರಮ ಚಟುವಟಿಕೆಗಳನ್ನು ಸಹಿಸುವುದಿಲ್ಲ. ಈ ದುಷ್ಕೃತ್ಯಗಳಿಗೆ ಕಡಿವಾಣ ಹಾಕಲು ಠಾಣಾಧಿಕಾರಿಗಳು ಒತ್ತುಕೊಡಬೇಕು. ಇಲ್ಲದೆ ಹೋದರೆ ಮುಂದೆ ಅನಾಹುತಗಳು ವರದಿಯಾದರೆ ಆಯಾ ಠಾಣಾಧಿಕಾರಿಗಳನ್ನೇ ಹೊಣೆಗಾರರನ್ನಾಗಿಸಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


