ರಾಜ್ಯ

ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ 6500 ಕುಟುಂಬಗಳಿಗೆ ಅಕ್ಕಿ ವಿತರಣೆ: ಸಚಿವ ಸುರೇಶ್‍ಕುಮಾರ್

ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಹಾಗೂ ಕಾಡಂಚಿನ ಪ್ರದೇಶಗಳ 6500 ಕುಟುಂಬಗಳಿಗೆ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಲಾ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದೆ.

ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ 6500 ಕುಟುಂಬಗಳಿಗೆ ಅಕ್ಕಿ ವಿತರಣೆ: ಸಚಿವ ಸುರೇಶ್‍ಕುಮಾರ್
ಸುರೇಶ್ ಕುಮಾರ್
Published On :

ಚಾಮರಾಜನಗರ: ಮಲೆ ಮಹದೇಶ್ವರ ಬೆಟ್ಟ ವ್ಯಾಪ್ತಿಯ ಹಾಗೂ ಕಾಡಂಚಿನ ಪ್ರದೇಶಗಳ 6500 ಕುಟುಂಬಗಳಿಗೆ ಶ್ರೀ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ತಲಾ 5 ಕೆ.ಜಿ. ಅಕ್ಕಿಯನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು, ಇದಕ್ಕಾಗಿ ಒಟ್ಟು 32 ಟನ್ ಅಕ್ಕಿ ಬಳಕೆಯಾಗಲಿದೆ ಎಂದು ಪ್ರಾಥಮಿಕ, ಪ್ರೌಢಶಿಕ್ಷಣ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್. ಸುರೇಶ್‍ಕುಮಾರ್ ಅವರು ತಿಳಿಸಿದರು.

ತಾಲೂಕಿನ ಪ್ರಸಿದ್ಧ ಯಾತ್ರಾಸ್ಥಳ ಮಲೆ ಮಹದೇಶ್ವರ ಬೆಟ್ಟದ ರಾಷ್ಟ್ರಪತಿ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸುರೇಶ್‍ಕುಮಾರ್ ಅವರು ಮಲೆ ಮಹದೇಶ್ವರ ಬೆಟ್ಟದಲ್ಲಿ ಭಕ್ತಾದಿಗಳಿಂದ ಕಾಣಿಕೆಯ ರೂಪದಲ್ಲಿ ಬಂದಿದ್ದ 89 ಟನ್ ಅಕ್ಕಿ ದಾಸ್ತಾನಿತ್ತು. ಇಂದು ಕೊರೋನಾ ಪಿಡಿಗಿನಿಂದ ಇಡೀ ವಿಶ್ವವೇ ನಲುಗುತ್ತಿದ್ದು ಸ್ಥಳೀಯ ಜನರ ನೆರವಿಗೆ ಅಕ್ಕಿ ನೀಡಲು ಶಾಸಕ ನರೇಂದ್ರ ಅವರ ಮನವಿಯ ಮೇರೆಗೆ ಮುಖ್ಯಮಂತ್ರಿಯವರೊಂದಿಗೆ ಚರ್ಚಿಸಿದಾಗ ಅವರೂ ಕೂಡ ಅಕ್ಕಿಯನ್ನು ಬಡವರಿಗೆ ಉಚಿತವಾಗಿ ನೀಡಲು ಸಮ್ಮತಿ ಸೂಚಿಸಿದರು. ಅಲ್ಲದೆ ಪ್ರಾಧಿಕಾರದವತಿಯಿಂದ 10 ಸಾವಿರ ಮಾಸ್ಕ್‍ಗಳನ್ನು ಉಚಿತವಾಗಿ
ವಿತರಿಸಲಾಗುತ್ತಿದೆ. ಈ ದಿನ ಮನಸ್ಸಿಗೆ ತುಂಬಾ ಸಮಾಧಾನ ನೀಡಿದ್ದು, ಮಾದಪ್ಪನ ಪ್ರಸಾದವನ್ನು ಬಡಜನರಿಗೆ ತಲುಪಿಸಿದ ಸಂತೋಷವಿದೆ ಎಂದು ತಿಳಿಸಿದರು.

ಪ್ರಾಧಿಕಾರದಲ್ಲಿ ಒಟ್ಟು 89 ಟನ್ ಅಕ್ಕಿ ದಾಸ್ತಾನು ಇದೆ. ಇದನ್ನು ಹೊರತುಪಡಿಸಿ ಇನ್ನೂ 52 ಟನ್ ಅಕ್ಕಿ ದಾಸ್ತಾನಿದ್ದು ದೇವಾಲಯ ತೆರೆದ ಮೇಲೆ ದಾಸೋಹಕ್ಕೆ ಕೊರತೆಯಾಗದ ರೀತಿಯಲ್ಲಿ ಕ್ರಮವಹಿಸಲಾಗಿದೆ ಎಂದರು. 

ಚಾಮರಾಜನಗರ ಜಿಲ್ಲೆಯಲ್ಲಿ ಯಾವುದೇ ಕೊರೋನಾ ಸೋಂಕು ಪ್ರಕರಣ ಕಂಡುಬಂದಿಲ್ಲ. ಈ ನಿಟ್ಟಿನಲ್ಲಿ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡ ಜಿಲ್ಲೆಯ ಎಲ್ಲಾ ಜನಪ್ರತಿನಿಧಿಗಳು ಮತ್ತು ಅಧಿಕಾರಿ ವರ್ಗದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಮುಂದಿನ ದಿನಗಳಲ್ಲಿಯೂ ಇದೇ ರೀತಿ ಕಾರ್ಯನಿರ್ವಹಿಸಿ ಎಲ್ಲರೂ ಸಹಕಾರ ನೀಡೋಣ ಎಂದರು. 

ಕಳೆದ ಬಾರಿ ಜಿಲ್ಲೆಗೆ ಭೇಟಿ ನೀಡಿದ್ದಾಗ ತಮಗೆ ಉದ್ಯೋಗ ನೀಡುವಂತೆ ಬಿಳಿಗಿರಿಗಂನಬೆಟ್ಟ ಸುತ್ತಮುತ್ತಲ ಗ್ರಾಮವಾಸಿಗಳು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಉದ್ಯೋಗಾಕಾಂಕ್ಷಿಗಳಿಗೆ ಜಾಬ್‍ಕಾರ್ಡ್ ಮತ್ತು ಬ್ಯಾಂಕ್ ಖಾತೆಗಳನ್ನು ತೆರೆದುಕೊಟ್ಟು ಆನೆಕಂದಕ ನಿರ್ಮಾಣ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಅಲ್ಲದೆ ಗುಂಡ್ಲುಪೇಟೆ ತಾಲೂಕಿನ ಹಂಗಳ ವ್ಯಾಪ್ತಿಯಲ್ಲಿ ಕೆರೆ ಅಭಿವೃದ್ಧಿ ಮತ್ತು ಜಂಗಲ್ ಕಟಿಂಗ್ ಕಾಮಗಾರಿಗಳನ್ನು ಕೈಗೆತ್ತಿಕೊಂಡು ಉದ್ಯೋಗ ದೊರಕಿಸಿಕೊಡಲಾಗಿದೆ. ಈ ನಿಟ್ಟಿನಲ್ಲಿ ಉದ್ಯೋಗದ ಆಕಾಂಕ್ಷಿಗಳು ಆಯಾ ಪಂಚಾಯಿತಿ ವ್ಯಾಪ್ತಿಯ ಅಭಿವೃದ್ಧಿ ಅಧಿಕಾರಿಗಳನ್ನು ಸಂಪರ್ಕಿಸುವಂತೆ ತಿಳಿಸಿದರು.

ಈ ಸಂದರ್ಭದಲ್ಲಿ ಶಾಸಕರಾದ ನರೇಂದ್ರ, ಎನ್.ಮಹೇಶ್, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಬೋಯರ್ ನಾರಾಯಣರಾವ್, ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ, ಇನ್ನಿತರರು ಹಾಜರಿದ್ದರು.

ವರದಿ: ಗುಳಿಪುರ ನಂದೀಶ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.