ಮಳವಳ್ಳಿ ನಿಷೇಧಿತ ವಲಯ; ಜಿಲ್ಲಾಧಿಕಾರಿ ವೆಂಕಟೇಶ್ ಘೋಷಣೆ
* 7 ಕಿ.ಮೀ ವ್ಯಾಪ್ತಿ ಬಫರ್ ಜೋನ್; 28 ದಿನಗಳ ಕಾಲ ತೀವ್ರ ನಿಗಾ

ಮಂಡ್ಯ: ಕೊರೊನಾ ಸೋಂಕು ಇರುವ ದೆಹಲಿ ಮೂಲದ ಮೌಲ್ವಿಗಳು ಸಂಚರಿಸಿರುವ ಹಿನ್ನೆಲೆಯಲ್ಲಿ ಮಳವಳ್ಳಿಯಲ್ಲಿಯೂ ಸೋಂಕು ಹರಡಿರುವ ಸಾಧ್ಯತೆ ಇರುವುದರಿಂದ ಇಂದಿನಿಂದ 3 ಕೀಲೋ ಮೀಟರ್ ವ್ಯಾಪ್ತಿಯನ್ನು ನಿಷೇಧಿತ ವಲಯ (ಕಂಟೈನ್ಮೆಂಟ್ ವಲಯ) ಎಂದು ಜಿಲ್ಲಾಧಿಕಾರಿ ಡಾ. ಎಂ.ವಿ ವೆಂಕಟೇಶ್ ಘೋಷಿಸಿದರು.
ಅವರಿಂದು ಮಳವಳ್ಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಮಳವಳ್ಳಿ ಪಟ್ಟಣದ 7 ಕೀ.ಮೀ. ವ್ಯಾಪ್ತಿಯನ್ನು ಬಫರ್ ಜೋನ್ ಎಂದು ಪರಿಗಣಿಸಿ ಕಟ್ಟೆಚ್ಚರ ವಹಿಸಲಾಗುವುದು ಎಂದು ಅವರು ತಿಳಿಸಿದರು.
ದೆಹಲಿ ನಿಜಾಮುದ್ದೀನ್ ಪ್ರದೇಶದಲ್ಲಿರುವ ತಬ್ಲೀಗ್ ಜಮಾತ್ ಧರ್ಮಸಭೆಯಲ್ಲಿ ಪಾಲ್ಗೊಂಡಿದ್ದ 10 ಮಂದಿ ಧರ್ಮಗುರುಗಳು ಮಾರ್ಚ್ ೨೩ರಿಂದ ಮಾರ್ಚ್ ೩೦ರವರೆಗೂ ಮಳವಳ್ಳಿಯಲ್ಲಿ ವಾಸ್ತವ್ಯ ಹೂಡಿದ್ದಾರೆ. ಮತ್ತೆ ಮೈಸೂರಿಗೆ ತೆರಳುವಾಗ ಜಿಲ್ಲಾಡಳಿತ ಬನ್ನೂರಿನ ಬಳಿ ವಶಕ್ಕೆ ಪಡೆದು ಪ್ರತ್ಯೇಕ ವಾಸದಲ್ಲಿ ಇರಿಸಿತ್ತು.
10 ಮಂದಿಯಲ್ಲಿ ಐವರಿಗೆ ಕೋವಿಡ್-19 ದೃಢಪಟ್ಟಿದ್ದು ಅವರು ಓಡಾಡಿರುವ ಜಾಗಗಳಲ್ಲಿ ಆತಂಕ ಎದುರಾಗಿದೆ. ಮಾರ್ಚ್ 24ರಂದು ಪ್ರಧಾನ ಮಂತ್ರಿ ಲಾಕ್ ಡೌನ್ ಘೋಷಣೆ ಮಾಡಿದ ವೇಳೆ ಈ ಧರ್ಮಗುರುಗಳು ಮಳವಳ್ಳಿ, ವಾರ್ಡ್ ನಂಬರ್ 7 ರಲ್ಲಿರುವ ಈದ್ಗಾ ಮೊಹಲ್ಲಾದಲ್ಲಿರುವ ಮಸೀದಿಯಲ್ಲಿ ತಂಗಿದ್ದರು. ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ರದ್ದುಗೊಳಿಸಿದ ನಂತರ ಅವರು ಮಸೀದಿ ಪಕ್ಕದ ಕೊಠಡಿಗೆ ಸ್ಥಳಾಂತರಗೊಂಡರು. ನಂತರವೂ ಅವರು ಧಾರ್ಮಿಕ ಚಟುವಟಿಕೆ ಮುಂದುವರಿಸಿದ್ದರು. ಹೀಗಾಗಿ ಅವರ ಜೊತೆ ಸಂಪರ್ಕದಲ್ಲಿದ್ದ 36 ಮಂದಿಯನ್ನು ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಪ್ರತ್ಯೇಕವಾಗಿ ಇರಿಸಲಾಗಿದೆ. ಸದ್ಯಕ್ಕೆ ಅವರಿಗೆ ಕೊರೊನಾ ಸೋಂಕಿನ ಲಕ್ಷಣ ಕಂಡುಬಂದಿಲ್ಲ. ಆದರೂ ಅವರ ಮೇಲೆ ನಿಗಾ ವಹಿಸಲಾಗಿದೆ. ಅವರಲ್ಲಿ 7 ಮಂದಿಯ ಗಂಟಲು ದ್ರವ, ರಕ್ತ ಮಾದರಿಯನ್ನು ಪ್ರಯೋಗಶಾಲೆಗೆ ಕಳುಹಿಸಲಾಗಿದ್ದು ವರದಿಗಾಗಿ ಕಾಯುತ್ತಿದೇವೆ ಎಂದು ಹೇಳಿದರು.
ಕೊರೊನಾ ಸೋಂಕು ಹರಡುವ ಸಾಧ್ಯತೆಯಿಂದಾಗಿ ಮೂರು ಕೀಲೋ ಮೀಟರ್ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಜೋನ್ ಆಗಿ ಘೋಷಿಸಿದ್ದು, ಈ ವ್ಯಾಪ್ತಿಯಲ್ಲಿ ಅನುಮತಿಯಿಲ್ಲದೆ ಯಾವುದೇ ವ್ಯಕ್ತಿಯ ಓಡಾಟ ಮಾಡುವಂತಿಲ್ಲ, ಮುಂದಿನ 28 ದಿನಗಳ ಕಾಲ ಈ ಪ್ರದೇಶವನ್ನು ತೀವ್ರ ನಿಗಾ ಘಟಕವಾಗಿ ಪರಿಗಣಿಸುತ್ತದೆ. ಅಲ್ಲಿನ ವಾಸಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸಿ ಹಣ್ಣು-ಹಂಪಲು, ತರಕಾರಿ ವಿತರಣೆ ಸೇರಿದಂತೆ ಜೀವನಾವಶ್ಯಕವಾದ ವಸ್ತುಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸಲಾಗುವುದು ಎಂದರು.
ತಾಲ್ಲೂಕಿನ 2.84000 ಜನಸಂಖ್ಯೆ ಇದೆ, 170 ಆರೋಗ್ಯ ತಂಡ ರಚಿಸಿದ್ದು, ಪ್ರತಿ 50 ಮನೆಗಳಿಗೆ ಇಬ್ಬರು ನೋಡೆಲ್ ಅಧಿಕಾರಿ ನೇಮಕ ಮಾಡಲಾಗಿದೆ,ಆರೋಗ್ಯಾಧಿಕಾರಿಗಳು ಅಲ್ಲಿನ ನಿವಾಸಿಗಳ ಆರೋಗ್ಯ ತಪಾಸಣೆ ನಡೆಸಿ ಮುನ್ನೆಚ್ಚರಿಕೆ ವಹಿಸುವುದರ ಜೊತೆಗೆ ಜನರಲ್ಲಿ ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಶ್ರಮಿಸಲಿದ್ದಾರೆ ಎಂದು ಜಿಲ್ಲಾಧಿಕಾರಿ ಹೇಳಿದರು. ಸಭೆಯಲ್ಲಿ ಉಪವಿಭಾಗಾಧಿಕಾರಿ ಸೂರಜ್, ಅಪಾರ ಪೊಲೀಸ್ ವರಿಷ್ಠಾಧಿಕಾರಿ ಡಾ.ಶೋಭರಾಣಿ, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಚ್.ಪಿ.ಮಂಚೇಗೌಡ, ತಹಶೀಲ್ದಾರ್ ಕೆ.ಚಂದ್ರಮೌಳಿ, ಡಿವೈಎಸ್ ಪಿ ಎಂ.ಜೆ.ಪೃಥ್ವಿ, ತಾ.ಪಂ.ಇಒ ಬಿ.ಎಸ್.ಸತೀಶ್, ತಾಲ್ಲೂಕು ವೈದ್ಯಾಧಿಕಾರಿ ಡಾ.ವೀರಭದ್ರಪ್ಪ, ಪುರಸಭೆ ಮುಖ್ಯಾಧಿಕಾರಿ ಗಂಗಾಧರ್, ಸಿಪಿಐ ಧಮೇಂದ್ರ, ಪಿಐ ರಮೇಶ್ ಸೇರಿದಂತೆ ಹಲವು ಅಧಿಕಾರಿಗಳು ಇದ್ದರು.
ವರದಿ: ನಾಗಯ್ಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


