ರಾಜ್ಯ

ಪ್ರವಾಹ ಕುರಿತು ಪ್ರಧಾನಿ ಮೋದಿ ಮೌನ: ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ ಆರಂಭ

ರಾಜ್ಯ ಪ್ರವಾಹ ಪೀಡಿದ ಪ್ರದೇಶಗಳ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೌನ ಮುಂದುವರೆಸಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರ ಆರಂಭವಾಗಿದೆ.

ಪ್ರವಾಹ ಕುರಿತು ಪ್ರಧಾನಿ ಮೋದಿ ಮೌನ: ಬಿಜೆಪಿ-ಕಾಂಗ್ರೆಸ್ ನಡುವೆ ವಾಕ್ಸಮರ ಆರಂಭ
ಪ್ರಧಾನಿ ಮೋದಿ
Published On :

ಬೆಂಗಳೂರು: ರಾಜ್ಯ ಪ್ರವಾಹ ಪೀಡಿದ ಪ್ರದೇಶಗಳ ಕುರಿತಂತೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮೌನ ಮುಂದುವರೆಸಿರುವ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಯಕರು ಹಾಗೂ ಬಿಜೆಪಿ ನಾಯಕರ ನಡುವೆ ವಾಕ್ಸಮರ ಆರಂಭವಾಗಿದೆ. 

ಚಂದ್ರಯಾನ-2 ಮಿಷನ್ ನೋಡುವ ಸಲುವಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಶನಿವಾರ ನಗರಕ್ಕೆ ಆಗಮಿಸಿದ್ದರು. ಮೋದಿ ಭೇಟಿ ವೇಳೆ ಪ್ರವಾಹ ಪರಿಸ್ಥಿತಿ ಕುರಿತಂತೆ ಮಾತನಾಡಲಿದ್ದಾರೆ, ಕೇಂದ್ರದಿಂದ ಪರಿಹಾರ ಘೋಷಣೆ ಮಾಡಲಿದ್ದಾರೆಂದು ನಿರೀಕ್ಷಿಸಲಾಗಿತ್ತು. ಆದರೆ, ಈ ನಿರೀಕ್ಷೆಗಳು ಹುಸಿಯಾಗಿವೆ. 

ಈ ಹಿನ್ನಲೆಯಲ್ಲಿ ರಾಜ್ಯ ಕಾಂಗ್ರೆಸ್ ನಾಯಕರು ಬಿಜೆಪಿ ವಿರುದ್ಧ ತೀವ್ರವಾಗಿ ಗುಡುಗುತ್ತಿದ್ದಾರೆ. ಪ್ರವಾಹ ಕುರಿತು ಪ್ರಧಾನಮಂತ್ರಿಗಳ ಮೌನ ವಹಿಸಿರುವುದು ರಾಜ್ಯಕ್ಕೆ ಮಾಡಿದ ಅವಮಾನ ಎಂದು ಕಾಂಗ್ರೆಸ್ ಹೇಳುತ್ತಿದ್ದರೆ, ಮತ್ತೊಂದೆಡೆ ಮೋದಿಯವರ ನಡೆಯನ್ನು ಬಿಜೆಪಿ ಸಮರ್ಥಿಸಿಕೊಂಡಿದೆ. ಈಗಾಗಲೇ ಕೇಂದ್ರ ತಂಡ ರಾಜ್ಯಕ್ಕೆ ಭೇಟಿ ನೀಡಿದ್ದು, ಪ್ರವಾಹದಿಂದಾಗಿರುವ ನಷ್ಟವನ್ನು ಪರಿಶೀಲಿಸುತ್ತಿದೆ. ಪರಿಶೀಲನೆ ಪೂರ್ಣಗೊಂಡ ಬಳಿಕ ಕೇಂದ್ರದಿಂದ ಪರಿಹಾರ ಸಿಗುವ ಭರವಸೆಯಿದೆ ಎಂದು ಹೇಳಿದೆ. 

ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಮಾತನಾಡಿ, ರಾಜ್ಯಕ್ಕೆ ಪ್ರಧಾನಿ ಮೋದಿಯವರು ಅವಮಾನ ಮಾಡಿದ್ದಾರೆ. ವಿದೇಶಕ್ಕೆ ತೆರಳುವ ಮೋದಿಯವರು ಅಲ್ಲಿಂದ ರಷ್ಯಾಗೆ 1 ಬಿಲಿಯನ್ ಡಾಲರ್ ಘೋಷಣೆ ಮಾಡಿದ್ದಾರೆ. ಆದರೆ, ರಾಜ್ಯಕ್ಕೆ ಬಂದರೂ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಲು ಅವರ ಬಳಿ ಸಮಯವಿಲ್ಲ ಎಂದು ಹೇಳಿದ್ದಾರೆ. 

ಪ್ರವಾಹ ಪೀಡಿತ ಜನರಿಗೆ ಪರಿಹಾರ ನೀಡುವುದರಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿವೆ. ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಪ್ರಧಾನಮಂತ್ರಿಗಳು ವಾಯು ಸಮೀಕ್ಷೆ ನಡೆಸಬೇಕಿತ್ತು. ಪ್ರಧಾನಮಂತ್ರಿಗಳ ಭೇಟಿಗಾಗಿ ಮುಖ್ಯಮಂತ್ರಿಗಳು ಕಾಯುತ್ತಿದ್ದರು. ಆದರೆ, ರಾಜ್ಯಕ್ಕೆ ಬಂದರೂ ಮೋದಿಯವರು ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡುವುದರಲ್ಲಿ ವಿಫಲರಾಗಿದ್ದಾರೆಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದ್ದಾರೆ. 

ಈ ನಡುವೆ ಪ್ರಧಾನಿ ಮೋದಿಯವರ ನಡೆಯನ್ನು ಸಮರ್ಥಿಸಿಕೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು, ಪರಿಸ್ಥಿತಿ ಕುರಿತಂದೆ ಪ್ರಧಾನಮಂತ್ರಿಗಳಿಗೆ ಅರಿವಿದೆ. ಶೀಘ್ರದಲ್ಲಿಯೇ ಕೇಂದ್ರದಿಂದ ಒಳ್ಳೆಯ ಸುದ್ದಿಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಹೇಳಿದ್ದಾರೆ. 

ಪ್ರಧಾನಿ ಮೋದಿ ನಗರಕ್ಕೆ ಆಗಮಿಸಿದ್ದ ಸಂದರ್ಭದಲ್ಲಿ ಯಡಿಯೂರಪ್ಪ ಹಾಗೂ ಮೋದಿ ನಡುವೆ ಶುಕ್ರವಾರ ರಾತ್ರಿಯಾಗಲೀ ಅಥವಾ ಶನಿವಾರ ಬೆಳಿಗ್ಗೆಯಾಗಲೀ ಯಾವುದೇ ರೀತಿಯ ಮಾತುಕತೆಗಳೂ ನಡೆದಿಲ್ಲ ಎಂದು ಮುಖ್ಯಮಂತ್ರಿಗಳ ಕಾರ್ಯಾಲಯ ತಿಳಿಸಿದೆ. 

ಇದೀಗ ಕಾಂಗ್ರೆಸ್ ನಾಯಕರು ಪ್ರವಾಹ ಪರಿಸ್ಥಿತಿ ಕುರಿತಂತೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯಬೇಕೆಂದು ಸರ್ಕಾರಕ್ಕೆ ಆಗ್ರಹಿಸಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.