ರಾಜ್ಯ

ಕಾರ್ಯಸೂಚಿಯಂತೆ ಸದನದ ಕಲಾಪಕ್ಕೆ ಅವಕಾಶ ಕಲ್ಪಿಸಿ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಸಭಾಧ್ಯಕ್ಷರು

ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದ ಪ್ರತಿಪಕ್ಷದ ಒತ್ತಾಯಕ್ಕೆ ಮಣಿಯದೆ ಕಾರ್ಯಸೂಚಿಯಂತೆ ಸದನದ ಕಲಾಪಕ್ಕೆ ಅವಕಾಶ ಕಲ್ಪಿಸಿದ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿ ಇಂದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದರು.

ಕಾರ್ಯಸೂಚಿಯಂತೆ ಸದನದ ಕಲಾಪಕ್ಕೆ ಅವಕಾಶ ಕಲ್ಪಿಸಿ ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದ ಸಭಾಧ್ಯಕ್ಷರು
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ
Published On :

ಬೆಂಗಳೂರು: ಒಂದೆಡೆ ಬರ ಮತ್ತು ಮತ್ತೊಂದೆಡೆ ನೆರೆಯ ಸಮಸ್ಯೆಗೆ ತುತ್ತಾಗಿ ಅರ್ಧ ರಾಜ್ಯವೇ ಸಂಕಷ್ಟಕ್ಕೆ ಸಿಲುಕಿರುವ ಹಿನ್ನೆಲೆಯಲ್ಲಿ ನಿಲುವಳಿ ಸೂಚನೆಗೆ ಸಂಬಂಧಿಸಿದಂತೆ ಪ್ರಾಥಮಿಕ ಚರ್ಚೆಗೆ ಅವಕಾಶ ಮಾಡಿಕೊಡುವಂತೆ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ನೇತೃತ್ವದ ಪ್ರತಿಪಕ್ಷದ ಒತ್ತಾಯಕ್ಕೆ ಮಣಿಯದೆ ಕಾರ್ಯಸೂಚಿಯಂತೆ ಸದನದ ಕಲಾಪಕ್ಕೆ ಅವಕಾಶ ಕಲ್ಪಿಸಿದ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿ ಇಂದು ಪ್ರತಿಪಕ್ಷಗಳ ಕೆಂಗಣ್ಣಿಗೆ ಗುರಿಯಾದರು.

ಸಂತಾಪ ಸೂಚನಾ ನಿರ್ಣಯ ಪೂರ್ಣಗೊಂಡ ನಂತರ ಕಾರ್ಯದರ್ಶಿಗಳ ವರದಿ ಹಾಗೂ ವಿವಿಧ ಸಮಿತಿಗಳ ವರದಿ ಮಂಡನೆಯ ನಂತರ ಕಾಂಗ್ರೆಸ್ ಹಾಗೂ ಜಾತ್ಯಾತೀತ ಜನತಾ ದಳ ನೀಡಿರುವ ನಿಲುವಳಿ ಸೂಚನೆಯನ್ನು ಕೈಗೆತ್ತಿಕೊಳ್ಳುವುದಾಗಿ ಸಭಾಧ್ಯಕ್ಷರು ಹೇಳಿದರಾದರೂ, ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ನಂತರ ನಿಯಮ 60 ರಂತೆ ಸಾರ್ವಜನಿಕ ಮಹತ್ವದ ವಿಚಾರದ ಚರ್ಚೆಗೆ ನಿಯಮಾವಳಿಗಳಲ್ಲಿ ಅವಕಾಶವಿದೆ ಎಂಬುದನ್ನು ಉಲ್ಲೇಖಿಸಿದ ಸಿದ್ದರಾಮಯ್ಯ ಅವರು ದಿನದ ಕಾರ್ಯಸೂಚಿಯಲ್ಲಿ ಪ್ರಶ್ನೋತ್ತರ ವೇಳೆ ಹಾಗೂ ಶೂನ್ಯ ವೇಳೆಯ ಚರ್ಚೆ ಇಲ್ಲದಿರುವ ಹಿನ್ನೆಲೆಯಲ್ಲಿ ಸಭಾಧ್ಯಕ್ಷ ಪೀಠಕ್ಕೆ ತಾವು ಸಲ್ಲಿಸಿದ ನಿಲುವಳಿ ಸೂಚನೆ ಕುರಿತ ಪ್ರಾಥಮಿಕ ಚರ್ಚೆಗೆ ಪಟ್ಟುಹಿಡಿದರು.

ಸಭಾನಾಯಕ ಬಿ ಎಸ್ ಯಡಿಯೂರಪ್ಪ ಅವರು ಮಧ್ಯ ಪ್ರವೇಶಿಸಿ ಚರ್ಚೆಗೆ ತಾವು ಸಿದ್ಧ ಎಂದು ಭರವಸೆ ನೀಡಿದರೂ ಪ್ರತಿಪಕ್ಷದವರು ಮುಖ್ಯಮಂತ್ರಿಯವರ ಮನವಿಯನ್ನು ಪುರಸ್ಕರಿಸಲಿಲ್ಲ. ತಮ್ಮ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಬೆಂಬಲಕ್ಕೆ ನಿಂತ ಸದಸ್ಯರಾದ ಕೆ ಆರ್ ರಮೇಶ್ ಕುಮಾರ್   ಕೃಷ್ಣ ಬೈರೇಗೌಡ ಹಾಗೂ ಹೆಚ್ ಕೆ ಪಾಟೀಲ್ ಅವರು ಕಲಾಪದ ಕಾರ್ಯವಿಧಾನದಲ್ಲಿನ ನಿಯಮಾವಳಿಗಳನ್ನು ಉಲ್ಲೇಖಿಸಿದರೂ ಸಭಾಧ್ಯಕ್ಷರ ಮನವೊಲಿಸಲು ಸಾಧ್ಯವಾಗಲಿಲ್ಲ. 
ಒಂದು ಹಂತದಲ್ಲಿ ಸಿದ್ದರಾಮಯ್ಯ ಅವರು ಪ್ರಜಾಪ್ರಭುತ್ವದ ಧ್ವನಿ ಅಡಗಿಸಲು ಸಾಧ್ಯವಿಲ್ಲ ಎಂದು ಏರಿದ ಧ್ವನಿಯಲ್ಲಿ ಕೂಗಿ ಸಭಾಧ್ಯಕ್ಷರ ನಡೆಯನ್ನು ಪ್ರತಿಭಟಿಸಿದರಲ್ಲದೆ, ಸಭಾಧ್ಯಕ್ಷರು ಸರ್ಕಾರದ ಜೊತೆಗೆ ಶಾಮೀಲಾಗಿದ್ದಾರೆ ಎಂದು ಆರೋಪಿಸಿದರು. ಇದಾವುದಕ್ಕೂ ಜಗ್ಗದ ಸಭಾಧ್ಯಕ್ಷರು ಕಾರ್ಯಸೂಚಿಯಂತೆ ಕಲಾಪವನ್ನು ಮುಂದುವರೆಸಿದರು.

ರಾಜ್ಯ ವಿಧಾನ ಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರು ಕಳೆದ ಅಧಿವೇಶನದಲ್ಲಿ ವರದಿಯನ್ನು ಒಪ್ಪಿಸಿದ ನಂತರ ರಾಷ್ಟ್ರಪತಿಯವರಿಂದ - ರಾಜ್ಯಪಾಲರಿಂದ ಒಪ್ಪಿಗೆ ಪಡೆದ ವಿಧೇಯಕಗಳ ಪಟ್ಟಿಯನ್ನು ಸಭೆಯ ಮುಂದೆ ಮಂಡಿಸಿದರು. ಸ್ಥಳೀಯ ಸಂಸ್ಥೆಗಳ ಮತ್ತು ಪಂಚಾಯತ್ ರಾಜ್ ಸಂಸ್ಥೆಗಳ ಸಮಿತಿಯ ಅಧ್ಯಕ್ಷ ಅರಗ ಜ್ಞಾನೇಂದ್ರ ಅವರು 2018-19 ನೇ ಸಾಲಿನ ಸಮಿತಿಯ 28 ನೇ ವರದಿಯನ್ನು ಒಪ್ಪಿಸಿದರು.ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿಯ ಅಧ್ಯಕ್ಷ ಎಸ್ ಅಂಗಾರ ಅವರು ಸಮಿತಿಯ ಎರಡನೇ ವರದಿಯನ್ನು ಸದನಕ್ಕೆ ಒಪ್ಪಿಸಿದರು.

ನಂತರ, ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೆಕ್ಕಪರಿಶೋಧಕರ 2017-18 ನೇ ಸಾಲಿನ ಧನ ವಿನಿಯೋಗ ಲೆಕ್ಕಗಳು ಮತ್ತು ಹಣಕಾಸು ಲೆಕ್ಕಗಳನ್ನು ಸಭೆಯ ಮುಂದಿಟ್ಟರು.  ಅಲ್ಲದೆ, ಮಾರ್ಚ್ 2018 ಕ್ಕೆ ಅಂತ್ಯಗೊಂಡ ರಾಜಸ್ವ ವಲಯದ ಮೇಲಿನ ವರದಿ ಹಾಗೂ ಆರ್ಥಿಗ ವಲಯದ ಮೇಲಿನ ವರದಿಗಳನ್ನು ಸಭೆಯ ಮುಂದಿಟ್ಟರು. ತದನಂತರ, ಉಪ ಮುಖ್ಯಮಂತ್ರಿಗಳಾದ ಗೋವಿಂದ ಎಂ ಕಾರಜೋಳ, ಡಾ ಸಿ ಎನ್ ಅಶ್ವಥನಾರಾಯಣ ಹಾಗೂ ಲಕ್ಷ್ಮಣ ಸವದಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ ಸಿ ಮಾಧುಸ್ವಾಮಿ ಅವರನ್ನು ಒಳಗೊಂಡಂತೆ ಬಿ ಎಸ್ ಯಡಿಯೂರಪ್ಪ ಅವರ ಸಚಿವ ಸಂಪುಟ ಸಹೋದ್ಯೋಗಿಗಳು ತಮ್ಮ ಇಲಾಖೆಗೆ ಸಂಬಂಧಿಸಿದಂತೆ ವಿತ್ತೀಯ ಕಾರ್ಯಕಲಾಪಗಳಲ್ಲಿನ ಪ್ರಸಕ್ತ ಸಾಲಿನ ಅನುದಾನದ ಬೇಡಿಕೆಗಳನ್ನು ಮಂಡಿಸಿದರು.

ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರನ್ನು ಪ್ರತಿಪಕ್ಷ ನಾಯಕರಾಗಿ ಹಾಗೂ ಸರ್ಕಾರದ ಸಚೇತಕರಾಗಿ ವಿ ಸುನೀಲ್ ಕುಮಾರ್ ಅವರನ್ನು ಮಾನ್ಯ ಮಾಡಿರುವುದಾಗಿ ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅಧಿಕೃತವಾಗಿ ಪ್ರಕಟಿಸಿದರು. ಅಂತೆಯೇ,ಸದನದ ಕಾರ್ಯಕಲಾಪಗಳನ್ನು ಸುಗಮವಾಗಿ ನಡೆಸಲು ಆಡಳಿತಾರೂಢಾ ಹಾಗೂ ಪ್ರತಿಪಕ್ಷಗಳ ಸದನ ನಾಯಕರನ್ನು ಕಲಾಪ ಸಲಹಾ ಸಮಿತಿಯ ಸಭೆಗೆ ಆಮಂತ್ರಿಸಿದ ಸಭಾಧ್ಯಕ್ಷರು ಪ್ರತಿಪಕ್ಷ ಹಾಗೂ ಆಡಳಿತ ಪಕ್ಷಗಳ ಘೋಷಣೆ ಮತ್ತು ಪ್ರತಿ-ಘೋಘಣೆಗಳ ನಡುವೆಯೇ ಸದನವನ್ನು ಭೋಜನ ವಿರಾಮಕ್ಕೆ ಮುಂದೂಡಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.