ಐದೇ ದಿನಗಳಲ್ಲಿ ಮತ್ತೆ ದುರ್ಬಲವಾಗಲಿದೆ ಮುಂಗಾರು; ರಾಜ್ಯ ವಿಪತ್ತು ನಿರ್ವಹಣಾ ಘಟಕ
ರಾಜ್ಯದಲ್ಲಿ ಶುಕ್ರವಾರ ಮುಂಗಾರು ಬಿರುಸುಗೊಂಡಿದ್ದು, ರಾಜ್ಯಾದ್ಯಂತ ವ್ಯಾಪಿಸಿದ್ದು, ಮುಂದಿನ ಐದು ದಿನಗಳ ಕಾಲ ಎಲ್ಲೆಡೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Published On :
ಬೆಂಗಳೂರು: ರಾಜ್ಯದಲ್ಲಿ ಶುಕ್ರವಾರ ಮುಂಗಾರು ಬಿರುಸುಗೊಂಡಿದ್ದು, ರಾಜ್ಯಾದ್ಯಂತ ವ್ಯಾಪಿಸಿದ್ದು, ಮುಂದಿನ ಐದು ದಿನಗಳ ಕಾಲ ಎಲ್ಲೆಡೆ ಭಾರಿ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯ ಕರಾವಳಿ ಪ್ರದೇಶ, ದಕ್ಷಿಣ ಒಳನಾಡು, ಮಲೆನಾಡು ಹಾಗೂ ಬೆಂಗಳೂರು ನಗರಗಳಲ್ಲಿ ಕೂಡ ಭಾರಿ ಹಾಗೂ ಭಾಗಶಃ ಮಳೆ ನಿರೀಕ್ಷಿಸಬಹುದಾಗಿದೆ. ಆದರೆ, ಇದೇ ಮುಂಗಾರು ಐದು ದಿನಗಳ ನಂತರ, ಮತ್ತೆ ದುರ್ಬಲಗೊಳ್ಳುವ ಸಾಧ್ಯತೆಯಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಘಟಕ ಆತಂಕ ವ್ಯಕ್ತಪಡಿಸಿದೆ.
ಒಂದು ವಾರದ ಹಿಂದೆಯೇ ಪ್ರವೇಶಿಸಿದ್ದ ಮುಂಗಾರು ಶುಕ್ರವಾರ ಬಿರುಸುಗೊಂಡಿದ್ದು ರಾಜ್ಯಾದ್ಯಂತ ವ್ಯಾಪಿಸಿದೆ. ಇದರಿಂದ ಸಂತಸಗೊಂಡಿರುವ ರೈತರು, ಹೊಲಗಳ ಉಳುಮೆ, ಬಿತ್ತನೆ ಕೆಲಸಗಳಿಗೆ ಮುಂದಾಗಿದ್ದಾರೆ. ಆದರೆ, ರೈತರಲ್ಲಿ ಹೊಸ ಹುಮ್ಮಸ್ಸು ಮೂಡಿಸಿರುವ ಮುಂಗಾರು ಐದು ದಿನಗಳಲ್ಲೇ ತನ್ನ ವೇಗ ಕಳೆದುಕೊಂಡು ದುರ್ಬಲಗೊಳ್ಳುವ ಮೂಲಕ ನಿರಾಸೆ ಮೂಡಿಸುವ ಸಾಧ್ಯತೆಯಿದೆ.
ಈ ಕುರಿತು ಯುಎನ್ಐ ಕನ್ನಡ ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ವಿಪತ್ತು ನಿರ್ವಹಣಾ ಘಟಕದ ನಿರ್ದೇಶಕ ಶ್ರೀನಿವಾಸ ರೆಡ್ಡಿ, ಮುಂದಿನ ಹತ್ತು ದಿನಗಳ ಮಳೆಯ ಮುನ್ಸೂಚನೆಯನ್ನು ಗಮನಿಸಿದಾಗ, ಈಗ ಬಿರುಸುಗೊಂಡಿರುವ ಮುಂಗಾರು ಐದೇ ದಿನಗಳಲ್ಲಿ ಮತ್ತೆ ದುರ್ಬಲಗೊಳ್ಳಲಿದೆ. ಇದರಿಂದ ಬೆಂಗಳೂರು ಸೇರಿದಂತೆ ಹಲವೆಡೆ ಮಳೆ ಕಡಿಮೆಯಾಗಲಿದೆ. ಕರಾವಳಿ, ಮಲೆನಾಡಿನಲ್ಲಿ ಕೂಡ ವಾಡಿಕೆಗಿಂತ ಕಡಿಮೆ ಮಳೆ ಸುರಿಯಲಿದೆ ಎಂದು ತಿಳಿದುಬಂದಿದೆ ಎಂದರು.
ಸಹಜ ಬಿತ್ತನೆಗೆ ಪೆಟ್ಟು;
ಸಾಮಾನ್ಯವಾಗಿ ಜೂನ್ ತಿಂಗಳ ಅಂತ್ಯಕ್ಕೆ ಶೇ.25ರಷ್ಟು ಮಳೆಗಾಲ ಪೂರ್ಣಗೊಳ್ಳಬೇಕಿತ್ತು. ಆದರೆ, ಈ ವರ್ಷ ಇನ್ನೂ
ಅಸಲಿಗೆ ಮಳೆಗಾಲವೇ ಆರಂಭಗೊಂಡಂತಿಲ್ಲ. ಇದರಿಂದ ಜೂನ್ ತಿಂಗಳಲ್ಲಿ ಬಿತ್ತನೆ ನಡೆಸಬೇಕಿರುವ ಬೆಳೆಗಳಿಗೆ ತೊಂದರೆಯಾಗುತ್ತದೆ. ಬಿತ್ತನೆ ಕಾರ್ಯವನ್ನು ಜುಲೈಗೆ ಮುಂದೂಡಬೇಕಾಗುತ್ತದೆ. ಆದರೆ, ಜೂನ್ ನಲ್ಲಿಯೇ ಬಿತ್ತನೆಯಾಗಬೇಕಿರುವ (ಸೋಯಿಂಗ್ ವಿಂಡೋ)ಬೆಳೆಗಳಿಗೆ ಇದರಿಂದ ತೊಂದರೆಯಾಗಲಿದೆ. ಮುಂಗಾರು ತಡವಾಗಿ ಆರಂಭಗೊಂಡ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಶೇ.40ರಷ್ಟು ಕೂಡ ಬಿತ್ತನೆ ಕಾರ್ಯ ಆರಂಭಗೊಂಡಿಲ್ಲ ಎಂದರು.
ಜಲಾಶಯಗಳಲ್ಲಿ ನೀರಿಲ್ಲ;
ಕಳೆದ ವರ್ಷ ಈ ಅವದಿಯಲ್ಲಿ ರಾಜ್ಯದ ಎಲ್ಲಾ ಜಲಾಶಯಗಳಿಂದ ಒಟ್ಟು 120ರಿಂದ 130 ಟಿಎಂಸಿ ನೀರು ಶೇಖರಣೆಯಾಗಿತ್ತು. ಆದರೆ, ಪ್ರಸಕ್ತ ಸಾಲಿನಲ್ಲಿ 4 ಟಿಎಂಸಿ ಕೂಡ ನೀರು ಸಂಗ್ರಹವಾಗಿಲ್ಲ. ಇದರಿಂದ ಕೃಷಿಗೆ ಮಾತ್ರವಲ್ಲ, ಕುಡಿಯುವ ನೀರಿಗೆ ಕೂಡ ತತ್ವಾರ ಎದುರಾಗಲಿದೆ ಎಂದರು.
ಎಲ್ಲೆಲ್ಲಿ ಮಳೆಯಾಗಲಿದೆ?
ಮುಂಗಾರು ಬಿರುಸುಗೊಂಡಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಕರಾವಳಿ ಪ್ರದೇಶ, ದಕ್ಷಿಣ ಒಳನಾಡು ಹಾಗೂ ಮಲೆನಾಡಿನಲ್ಲಿ ಭಾರಿ ವರ್ಷಧಾರೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮುಂದಿನ ಎರಡು ದಿನಗಳಲ್ಲಿ ಅಂದರೆ, ಶನಿವಾರದವರೆಗೆ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದೆ. ಉಳಿದಂತೆ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ 65 ಮಿಮೀ ಗೂ ಮೀರಿದ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಜೂನ್ 23ರಿಂದ 24ರವರೆಗೆ ಕರಾವಳಿ ಜಿಲ್ಲೆಗಳಲ್ಲಿ ಚದುರಿದಂತೆ ಭಾರಿ ಮಳೆಯಾಗಲಿದೆ. ಮಲೆನಾಡು ಹಾಗೂ ದಕ್ಷಿಣ ಒಳನಾಡಿನ ಚಾಮರಾಜನಗರ, ಚಿಕ್ಕಮಗಳೂರು, ಹಾಸನ, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ 115 ಮಿಮೀಗೂ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ.
ಜೂನ್ 24ರಂದು ದಕ್ಷಿಣ ಒಳನಾಡಿನ ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ , ಮಂಡ್ಯ ಹಾಗೂ ಮೈಸೂರು ಜಿಲ್ಲೆಗಳಲ್ಲಿ ಕೂಡ 65ಮಿಮೀ ವರ್ಷಧಾರೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ. ಜೂನ್ 25ರಂದು ಕರಾವಳಿ ಕರ್ನಾಟಕದಾದ್ಯಂತ ಭಾರಿ ಮಳೆ ನಿರೀಕ್ಷಿಸಬಹುದಾಗಿದೆ ಎಂದರು.
ಉತ್ತರಕರ್ನಾಟಕ ಭಾಗದಲ್ಲೂ ಮುಂಗಾರು ಬಿರುಸುಗೊಳ್ಳಲಿದ್ದು, ಜೂನ್ 22ರಿಂದ ಮೂರು ದಿನಗಳ ಕಾಲ ಉತ್ತರ ಒಳನಾಡಿನ ಬಾಗಲಕೋಟೆ, ಬೀದರ್, ಕಲಬುರಗಿ, ರಾಯಚೂರು ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ 65 ಮಿಮೀಗೂ ಹೆಚ್ಚು ಮಳೆಯಾಗಲಿದೆ. ಜೂನ್ 24ರಿಂದ ಬೆಳಗಾವಿ ಜಿಲ್ಲೆಯಲ್ಲಿ ಕೂಡ ವರ್ಷಧಾರೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯಕ್ಕೆ ಜೂನ್ 14ರಂದೇ ಮುಂಗಾರು ಪ್ರವೇಶಿಸಿದ್ದರೂ, ಅದು ದುರ್ಬಲವಾಗಿದ್ದ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ವ್ಯಾಪಿಸಿರಲಿಲ್ಲ. ಪರಿಣಾಮವಾಗಿ ದಕ್ಷಿಣ ಒಳನಾಡು ಹಾಗೂ ಮಲೆನಾಡಿನಲ್ಲಿ ವಾಡಿಕೆಯ ಮಳೆಯಾಗಿರಲಿಲ್ಲ.
ಮೂರು ದಿನ ಬೆಂಗಳೂರಿನ ಹಲವೆಡೆ ವರ್ಷಧಾರೆಯನ್ನು ನಿರೀಕ್ಷಿಸಬಹುದಾಗಿದೆ. ಅತಿ ಹೆಚ್ಚು ಪ್ರಮಾಣದಲ್ಲಿ ಮಳೆಯಾಗದಿದ್ದರೂ, ನಗರದಲ್ಲಿ ಕೂಡ ಅಲ್ಲಲ್ಲಿ ಉತ್ತಮ ಮಳೆಯನ್ನು ನಿರೀಕ್ಷಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


