ರಾಜ್ಯ

ಬೆಂಗಳೂರಿಗೆ ಶರಾವತಿ ನದಿ ನೀರು ತರುವ ಯೋಜನೆ ಕೈಬಿಡಿ: ಕಾರ್ಯಪಡೆ ಶಿಫಾರಸು

ಶರಾವತಿಯಿಂದ ಬೆಂಗಳೂರಿಗೆ ಕುಡಿಯುವ ನೀರು ತರುವ ಯೋಜನೆ ಅವೈಜ್ಞಾನಿಕವಾಗಿದ್ದು, ಇದನ್ನು ಕೈಬಿಡಬೇಕು, ಪಶ್ಚಿಮಘಟ್ಟ ಅರಣ್ಯ ಸಂಪತ್ತಿಗೆ...

ಬೆಂಗಳೂರಿಗೆ ಶರಾವತಿ ನದಿ ನೀರು ತರುವ ಯೋಜನೆ ಕೈಬಿಡಿ: ಕಾರ್ಯಪಡೆ ಶಿಫಾರಸು
ಸಾಂದರ್ಭಿಕ ಚಿತ್ರ
Published On :
ಬೆಂಗಳೂರು: ಶರಾವತಿಯಿಂದ ಬೆಂಗಳೂರಿಗೆ ಕುಡಿಯುವ ನೀರು ತರುವ ಯೋಜನೆ ಅವೈಜ್ಞಾನಿಕವಾಗಿದ್ದು, ಇದನ್ನು  ಕೈಬಿಡಬೇಕು, ಪಶ್ಚಿಮಘಟ್ಟ ಅರಣ್ಯ ಸಂಪತ್ತಿಗೆ ಹಾನಿಯಾಗುವ ಮರಳು, ಟಿಂಬರ್ ಮಾಫಿಯಾಗಳನ್ನು ವ್ಯವಸ್ಥಿತವಾಗಿ ಹತ್ತಿಕ್ಕಬೇಕು, ಅರಣ್ಯ ಒತ್ತುವರಿ ತಡೆದು, ದೇವಿವನಗಳನ್ನು ಸಂರಕ್ಷಿಸಿ, ಜೇನು ನೋಣವನ್ನು ರಾಜ್ಯಕೀಟವೆಂದು ಘೋಷಿಸಬೇಕು, ಘಟ್ಟ ಪ್ರದೇಶದ ನದಿ ಮತ್ತು ಜಲ ಮೂಲಗಳ ಸಂರಕ್ಷಣೆಗೆ ಪ್ರಧಾನ ಆದ್ಯತೆ ನೀಡಬೇಕೆಂದು ಪಶ್ಚಿಮಘಟ್ಟಗಳ ಸಂರಕ್ಷಣೆ ಕಾರ್ಯಪಡೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಪಶ್ಚಿಮಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಅಧ್ಯಕ್ಷ ಡಾ ಎಸ್ ಚಂದ್ರಶೇಖರ್ ಅವರು ಇಂದು ಅರಣ್ಯ ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಅಧ್ಯಯನ ಮತ್ತು ಶಿಫಾರಸ್ಸುಗಳ ಅಂತಿಮ ವರದಿಯನ್ನು ಸಲ್ಲಿಸಿದರು.
ಪಶ್ಚಿಮಘಟ್ಟಗಳ ಸಂರಕ್ಷಣೆಗೆ ಪ್ರಮುಖವಾಗಿ 32 ಶಿಫಾರಸ್ಸುಗಳನ್ನು ಮಾಡಿದ್ದು, ಇವುಗಳನ್ನು ಕಾಲಮಿತಿಯೊಳಗೆ ಅನುಷ್ಠಾನಕ್ಕೆ ತರುವಂತೆ ಸರ್ಕಾರವನ್ನು ಕೋರಿದೆ. 
ಬಳಿಕ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಡಾ. ಎಸ್. ಚಂದ್ರಶೇಖರ್, ಇತ್ತೀಚೆಗೆ ಅತ್ಯಂತ ಹೆಚ್ಚು ವಿವಾದಕ್ಕೆ ಕಾರಣವಾಗಿರುವ ಶರಾವತಿ ನದಿಯಿಂದ ಬೆಂಗಳೂರಿಗೆ ನೀರುವ ತರುವ ಯೋಜನೆಯನ್ನು ಸರ್ಕಾರ ಕೈಗೆತ್ತಿಕೊಳ್ಳಬಾರದು. ಪರಿಸರದ ಸೂಕ್ಷ್ಮತೆಗೆ ಧಕ್ಕೆಯಾಗುವ ಇಂತಹ ಯೋಜನೆಗಳನ್ನು ರೂಪಿಸಬಾರದು. ಎತ್ತಿನ ಹೊಳೆ ಯೋಜನೆ ಈಗಾಗಲೇ ಕಾರ್ಯಗತವಾಗುವ ಹಂತದಲ್ಲಿದ್ದು, ಈ ಬಗ್ಗೆ ಕಾರ್ಯಪಡೆಯ ತಕರಾರಿಲ್ಲ. ಉಳಿದಂತೆ ಬೇರಾವುದೇ ಯೋಜನೆಗಳನ್ನು ಜಾರಿಗೊಳಿಸಬಾರದು ಎಂದರು. 
ಪಶ್ಚಿಮಘಟ್ಟ ವ್ಯಾಪ್ತಿಯ ಅರಣ್ಯ ಪ್ರದೇಶದಲ್ಲಿ ಜಲ ವಿದ್ಯುತ್ ಸ್ಥಾವರಗಳು, ರೈಲ್ವೆ ಹಳಿಗಳು, ವಿದ್ಯುತ್ ಮಾರ್ಗ ಮತ್ತಿತರ ಅರಣ್ಯ ಚಟುವಟಿಕೆಗಳ ಮೇಲೆ ನಿಯಂತ್ರಣ ಹೇರಬೇಕು. ಈಗಾಗಲೇ ಸ್ಥಾಪನೆಯಾಗಿರುವ ಯೋಜನೆಗಳನ್ನು ಪುನರ್ ವಿಮರ್ಶೆ ಮಾಡುವುದು ಸೂಕ್ತ. ಜತೆಗೆ ಇಲ್ಲಿನ ಗ್ರಾಮ, ನಗರ, ಪಟ್ಟಣಗಳನ್ನು ಬಯಲು ಬಹಿರ್ದೆಸೆ ಮುಕ್ತಗೊಳಿಸಿ, ಒಳಚರಂಡಿ ವ್ಯವಸ್ಥೆ ಕಲ್ಪಿಸಬೇಕು ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ. 
ಪಶ್ಚಿಮಘಟ್ಟ ಸಂರಕ್ಷಣೆಗಾಗಿ ಹೈದರಾಬಾದ್ ಕರ್ನಾಟಕ ಪ್ರದೇಶಾಭಿವೃದ್ಧಿ ಮಾದರಿಯಲ್ಲಿ ಸಂವಿಧಾನದ 371 ಜೆ ಅನ್ವಯ " ಪಶ್ಚಿಮ ಘಟ್ಟ ಪ್ರದೇಶಾಭಿವೃದ್ಧಿ ಪ್ರಾಧಿಕಾರ ಸ್ಥಾಪಿಸಬೇಕು". ಸೂಕ್ಷ್ಮ ಅರಣ್ಯ ಪ್ರದೇಶದಲ್ಲಿ ಬೃಹತ್ ಯಂತ್ರಗಳು ಅರಣ್ಯ ಭಾಗದಲ್ಲಿ ಸಂಚರಿಸುವುದರ ಮೇಲೆ ನಿಯಂತ್ರಣ ಹೇರಬೇಕು. ಅರಣ್ಯ ಹನನ ತಪ್ಪಿಸಲು ಸ್ವಯಂ ಚಾಲಿತ ಗರಗಸದ ಬಳಕೆ ಜತೆಗೆ ಉತ್ಪಾದನೆಯನ್ನೇ ಸ್ಥಗಿತಗೊಳಿಸಬೇಕು. ಟಿಂಬರ್ ಮಾಫಿಯಾವನ್ನು ಅತ್ಯಂತ ವ್ಯಯವಸ್ಥಿತವಾಗಿ ಹತ್ತಿಕ್ಕಬೇಕು ಎಂದು ಹೇಳಿದೆ. 
ಕುದುರೆ ಮುಖ ಅರಣ್ಯ ಪ್ರದೇಶದಲ್ಲಿ " ಅರಣ್ಯ ಮತ್ತು ಪರಿಸರ ಸಂಶೋಧನಾ ವಿಶ್ವವಿದ್ಯಾಲಯ " ಸ್ಥಾಪಿಸಬೇಕು. ಇದರಿಂದ ಅರಣ್ಯ ಪ್ರದೇಶದ ಬೆಳವಣಿಗೆ, ಪೋಷಣೆ ಮತ್ತು ಅಧ್ಯಯನಕ್ಕೆ ಸಹಕಾರಿಯಾಗಲಿದೆ. ವನ್ಯ ಜೀವಿ - ಮಾನವನ ಸಂಘರ್ಷ ತಪ್ಪಿಸಬೇಕು. ಆನೆಗಳು ನಾಡಿಗೆ ಬರುವುದನ್ನು ತಡೆಯಲು ಆನೆ ಕಾರಿಡಾರ್ ಯೋಜನೆಯನ್ನು ವ್ಯವಸ್ಥಿತವಾಗಿ ಜಾರಿಗೆ ತರಬೇಕು. ಅರಣ್ಯಕ್ಕೆ ಬೆಂಕಿ ಬೀಳುವುದನ್ನು ನಿಯಂತ್ರಿಸುವುದಲ್ಲದೇ, ಈ ಭಾಗಕ್ಕೆ ಅನ್ವಯವಾಗುವಂತೆ ಮರಳು ನೀತಿ ರೂಪಿಸಿ, ಇಲ್ಲಿ ಸಂಗ್ರಹವಾಗುವ ಮರಳನ್ನು ಬೇರೆಡೆ ಸಾಗಿಸಲು ಅನುಮತಿ ನೀಡಬಾರದು ಎಂದು ಹೇಳಿದೆ. 
ಪಶ್ಚಿಮಘಟ್ಟ ಭಾಗದಲ್ಲಿ ಅಪಾರ ಪ್ರಮಾಣದಲ್ಲಿ ದೇವಿವನಗಳಿದ್ದು, ಇವುಗಳನ್ನು ಸಂರಕ್ಷಿಸಬೇಕು. ದೇವಿ ವನಗಳಲ್ಲಿರುವ ದೇವಾಲಯಗಳ ಸುತ್ತಮುತ್ತ ಪ್ಲಾಸ್ಟಿಕ್ ಬಳಕೆಯನ್ನು ನಿಷೇಧಿಸಬೇಕು. ಪರಿಸರ ಪ್ರವಾಸೋದ್ಯಮಕ್ಕೆ ವಿಶೇಷ ನೀತಿ ರೂಪಿಸುವುದಲ್ಲದೇ ಗಾಂಜಾ ಮತ್ತಿತರ ಬೆಳೆಗಳನ್ನು ನಿಯಂತ್ರಿಸಬೇಕು. ಜತೆಗೆ ಪರಿಸರಕ್ಕೆ ಪೂರಕವಾಗಿರುವ ಮತ್ಯ್ಸಧಾಮಗಳನ್ನು ಸ್ಥಾಪಿಸಬೇಕು. ಘಟ್ಟ ಪ್ರದೇಶದಲ್ಲಿ ಮುಖ್ಯವಾಗಿ  22 ನದಿಗಳು, 180 ಉಪ ನದಿಗಳಿದ್ದು, ಅವುಗಳು ಸದಾ ಜೀವನದಿಯಾಗಿರುವಂತೆ ನೋಡಿಕೊಳ್ಳಲು ಕಾಯಕಲ್ಪ ಕಲ್ಪಿಸಬೇಕು ಎಂದು ಸಲಹೆ ಮಾಡಿದೆ. 
ಮೈಸೂರು ಕಾಗದ ಕಾರ್ಖಾನೆ ಮುಚ್ಚಿರುವುದರಿಂದ ಪಲ್ಪವುಡ್ ಬೆಳೆಯಲು ಕಾರ್ಖಾನೆಗೆ ನೀಡಿದ್ದ ಭೂಮಿಯನ್ನು ವಾಪಸ್ ಪಡೆಯಬೇಕು. ಕೃಷಿ ಚಟುವಟಿಕೆಗೆ ಪೂರಕವಾಗಿರುವ ಜೇನುನೋಣ ರೈತರಿಗೆ ಸಹಕಾರಿಯಾಗಿದ್ದು, ಜೇನು ನೋಣವನ್ನು ರಾಜ್ಯ ಕೀಟವೆಂದು ಘೋಷಿಸಬೇಕು. ಕಡಲ ತೀರದ ಅಭಿವೃದ್ಧಿಗೆ ಆದ್ಯತೆ ನೀಡಬೇಕು ಎಂದು ಕಾರ್ಯಪಡೆ ಅಧ್ಯಕ್ಷ ಡಾ. ಎಸ್. ಚಂದ್ರಶೇಖರ್ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ. 
ವರದಿ ಸ್ವೀಕರಿಸಿ ಮತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಕಾರ್ಯಪಡೆಯ ಅನುಷ್ಠಾನಯೋಗ್ಯ ಶಿಫಾರಸುಗಳನ್ನು ಜಾರಿಗೆ ತರಲಾಗುವುದು. ಆನೆ ಕಾರಿಡಾರ್ ಯೋಜನೆ ಪ್ರಗತಿಯಲ್ಲಿದ್ದು, ಈ ವರೆಗೆ 100 ಕೋಟಿ ರೂ. ವೆಚ್ಚದಲ್ಲಿ 100 ಕಿಲೋಮೀಟರ್ ಕಾರಿಡಾರ್ ನಿರ್ಮಾಣ ಮಾಡಲಾಗಿದೆ. ಇನ್ನೂ 500 ಕಿಲೋಮೀಟರ್ ಕಾರಿಡಾರ್ ಮುಂದಿನ ಮೂರು-ನಾಲ್ಕು ವರ್ಷಗಳಲ್ಲಿ ನಿರ್ಮಿಸಲಾಗುವುದು ಎಂದರು. 
ಪಶ್ಚಿಮಘಟ್ಟಗಳ ಸಂರಕ್ಷಣೆ ಕುರಿತು ಡಾ. ಕಸ್ತೂರಿರಂಗನ್ ನೀಡಿದ್ದ ವರದಿಯ ಶಿಫಾರಸುಗಳನ್ನು ಸರ್ಕಾರ ಸಂಪೂರ್ಣವಾಗಿ ತಿರಸ್ಕರಿಸಿದೆ. ಬಹಳಷ್ಟು ನಿಯಂತ್ರಣ ಹೇರಿದ ಪರಿಣಾಮ ಈ ಭಾಗದ ಜನರಿಗೆ ತೊಂದರೆಯಾಗುವುದನ್ನು ಮನಗಂಡು ರಾಜ್ಯ ಸರ್ಕಾರ ತನ್ನ ಅಭಿಪ್ರಾಯವನ್ನು ಕೇಂದ್ರಕ್ಕೆ ತಿಳಿಸಿದೆ. ಈಗ ಕೇಂದ್ರ ಸರ್ಕಾರ ಸೂಕ್ತ ನಿರ್ಧಾರ ತೆಗೆದುಕೊಳ್ಳಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಸಚಿವರು ಉತ್ತರಿಸಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.