ಬೆಂಗಳೂರು: ಬೈಕ್'ಗೆ ಡಿಕ್ಕಿ ಹೊಡೆದಿದ್ದೂ ಅಲ್ಲದೆ, ಪ್ರಶ್ನಿಸಿದ ಮಹಿಳೆ ಮೇಲೆಯೇ ಹಲ್ಲೆ ನಡೆಸಿದ ಕಿಡಿಗೇಡಿ
ನಿಂತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದೂ ಅಲ್ಲದೆ, ಪ್ರಶ್ನಿಸಿದ ಮಹಿಳೆ ಮೇಲೆ ಪೆಟ್ರೋಲ್ ಬಂಕ್ ನಲ್ಲಿ ಕಿಡಿಗೇಡಿಯೊಬ್ಬ ಹಲ್ಲೆ ನಡೆಸಿರುವ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ...

Published On :
ಬೆಂಗಳೂರು: ನಿಂತಿದ್ದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿದ್ದೂ ಅಲ್ಲದೆ, ಪ್ರಶ್ನಿಸಿದ ಮಹಿಳೆ ಮೇಲೆ ಪೆಟ್ರೋಲ್ ಬಂಕ್ ನಲ್ಲಿ ಕಿಡಿಗೇಡಿಯೊಬ್ಬ ಹಲ್ಲೆ ನಡೆಸಿರುವ ಘಟನೆಯ ವಿಡಿಯೋ ಇದೀಗ ವೈರಲ್ ಆಗಿದೆ.
ಕಮಲಾನಗರ ನಿವಾಸಿ ಶೋಭಾ ಹಲ್ಲೆಗೊಳಗಾದ ಮಹಿಳೆಯಾಗಿದ್ದಾರೆ. ಜನವರಿ 3ರ ರಾತ್ರಿ 8.15ರ ಸುಮಾರಿಗೆ ಘಟನೆ ನಡೆದಿದೆ. ಘಟನೆ ಸಂಬಂಧ ಮಹಿಳೆ ಬಸವೇಶ್ವನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರಕರಣ ಸಂಬಂಧ ಆರೋಪಿಯ ಬೈಕ್ ಪತ್ತೆ ಹಚ್ಚಲಾಗಿದ್ದು, ಶೀಘ್ರದಲ್ಲಿಯೇ ಆರೋಪಿಯನ್ನು ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಪೊಲೀಸರು ಹೇಳಿದ್ದಾರೆ.
ಪೆಟ್ರೋಲ್ ಹಾಕಿಸಿಕೊಳ್ಳುವ ಸಲುವಾಗಿ ಶೋಭಾ ಅವರು ಜ.3ರ ರಾತ್ರಿ 8.15ರ ಸುಮಾರಿಗೆ ಪೆಟ್ರೋಲ್ ಹಾಕಿಸಿಕೊಳ್ಳುವ ಸಲುವಾಗಿ ಬಸವೇಶ್ವರ ನಗರದ ಸಿದ್ದಯ್ಯ ಪುರಾಣಿಕ್ ರಸ್ತೆಯಲ್ಲಿರುವ ಹೆಚ್.ಪಿ.ಪೆಟ್ರೋಲ್ ಬಂಕ್'ಗೆ ಬಂದಿದ್ದರು. ತಮ್ಮ ದ್ವಿಚಕ್ರ ವಾಹನಕ್ಕೆ ಪೆಟ್ರೋಲ್ ಹಾಕಿಸುವ ವೇಳೆ ಹಿಂದಿನಿಂದ ಬಂದ ಡಿಯೋ ದ್ವಿಚಕ್ರ ವಾಹನ ಸವಾರ ಮಹಿಳೆಯ ವಾಹನಕ್ಕೆ ಗುದ್ದಿಸಿ ಡ್ಯಾಮೇಜ್ ಮಾಡಿದ್ದಾನೆ.
ಈ ವೇಳೆ ಆರೋಪಿಯನ್ನು ಶೋಭಾ ಅವರು ಪ್ರಶ್ನಿಸಿದ್ದಾರೆ. ಇದರಂತೆ ಇಬ್ಬರ ನಡುವೆ ಮಾತಿಕ ಚಕಮಕಿ ನಡೆದಿದ್ದು, ಆರೋಪಿ ಅಲ್ಲಿಯೇ ಇದ್ದ ವಸ್ತು ತೆಗೆದು ಶೋಭಾ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದಾನೆ. ಈ ವೇಳೆ ಪೆಟ್ರೋಲ್ ಹಾಕಿಸಿಕೊಳ್ಳುತ್ತಿದ್ದ ಸಾರ್ವಜನಿಕರು ಬಂದು ಆರೋಪಿಯನ್ನು ತಡೆದಿದ್ದಾರೆ. ನಂತರ ಪೆಟ್ರೋಲ್ ಬಂಕ್ ಸಿಬ್ಬಂದಿ ಸಮಾಧಾನ ಮಾಡಿ ಆತನನ್ನು ಪಕ್ಕಕ್ಕೆ ಕಳುಹಿಸಿದ್ದರು. ಆರೋಪಿ ಜೊತೆಗೆ ಪತ್ನಿ ಕೂಡ ಅಲ್ಲಿಯೇ ಇದ್ದಳು. ದ್ವಿಚಕ್ರ ವಾಹನದಲ್ಲಿ ಸ್ವಲ್ಪ ಮುಂದಕ್ಕೆ ಹೋದ ಆರೋಪಿ ಮಹಿಳೆಯನ್ನು ಪುನಃ ಕೆಟ್ಟ ಶಬ್ದದಿಂದ ನಿಂದಿಸಿದ್ದ. ಇದಕ್ಕೆ ಮಹಿಳೆ ಆ ಪದವನ್ನು ನಿನ್ನ ಪತ್ನಿಗೆ ಹೇಳು ಎಂದು ಜೋರಾಗಿ ಕೂಗಿ ಹೇಳಿದ್ದಾರೆ.
ಈ ವೇಳೆ ಆರೋಪಿಯ ಪತ್ನಿ ದ್ವಿಚಕ್ರ ವಾಹನದಿಂದ ಇಳಿದು ಬಂದು ಮಹಿಳೆ ಮೇಲೆ ಹಲ್ಲೆಗೆ ಯತ್ನಿಸಿದ್ದರು. ಈ ವೇಳೆ ಮಧ್ಯ ಪ್ರವೇಶಿಸಿದ ಆರೋಪಿ ಮಹಿಳೆಯ ಹೊಟ್ಟೆಗೆ ಕಾಲಿನಿಂದ ಒದ್ದು, ಕೈ ನುಣುಚಿ ಗುಂಡಾವರ್ತನೆ ತೋರಿ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ಹಲ್ಲೆಗೊಳಗಾದ ಮಹಿಳೆ ಆರೋಪಿಯ ದ್ವಿಚಕ್ರ ವಾಹನ ಹಿಡಿಯಲು ಮುಂದಾಗಿದ್ದಾರೆ.
ಆರೋಪಿ ದ್ವಿಚಕ್ರ ವಾಹನ ನಿಲ್ಲಿಸದೆ ಸ್ಥಳದಿಂದ ಪರಾರಿಯಾಗಿದ್ದಾನೆ. ಆರೋಪಿಯ ಗುಂಡಾವರ್ತನೆ ತೋರಿರುವ ದೃಶ್ಯಾವಳಿಗಳು ಪೆಟ್ರೋಲ್ ಬಂಕ್'ನ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ಈ ವಿಡಿಯೋ ವೈರಲ್ ಆಗಿದೆ. ಮಹಿಳೆ ಮೇಲೆ ಹಲ್ಲೆ ನಡೆಸಿದ್ದ ವ್ಯಕ್ತಿ ಯಾರು ಎಂದು ಪತ್ತೆ ಹಚ್ಚಲಾಗಿದ್ದು, ಶೀಘ್ರದಲ್ಲಿಯೇ ಬಂಧನಕ್ಕೊಳಪಡಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


