ಆರ್ ಟಿಇ ತಿದ್ದುಪಡಿ ಅಧಿಸೂಚನೆಗೆ ಇನ್ನೂ ಸಹಿ ಹಾಕದ ಸಿಎಂ, ಪ್ರವೇಶಾತಿಯಲ್ಲಿ ವಿಳಂಬ
ಶಿಕ್ಷಣ ಹಕ್ಕು ಕಾಯ್ದೆಯಡಿ ಹೊರಡಿಸುವ ಅಧಿಸೂಚನೆಗೆ ಪ್ರಾಥಮಿಕ ಶಿಕ್ಷಣ ಸಚಿವರು ಕೂಡ ಆಗಿರುವ ...

ಬೆಂಗಳೂರು; ಶಿಕ್ಷಣ ಹಕ್ಕು ಕಾಯ್ದೆಯಡಿ ತಿದ್ದುಪಡಿ ಅಧಿಸೂಚನೆಗೆ ಪ್ರಾಥಮಿಕ ಶಿಕ್ಷಣ ಸಚಿವರು ಕೂಡ ಆಗಿರುವ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಇನ್ನೂ ಅನುಮೋದನೆ ನೀಡದಿರುವುದರಿಂದ 2019-20ನೇ ಶೈಕ್ಷಣಿಕ ಸಾಲಿನಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಪ್ರಕ್ರಿಯೆಗೆ ವಿಳಂಬವಾಗುತ್ತಿದೆ.
ಇತ್ತೀಚಿನ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿರುವ ಆರ್ ಟಿಇ ಕಾಯ್ದೆಗೆ ಮಾಡಿರುವ ತಿದ್ದುಪಡಿ ಪ್ರಕಾರ, ಮುಂಬರುವ ಶೈಕ್ಷಣಿಕ ವರ್ಷದಿಂದ ರಾಜ್ಯ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಮಕ್ಕಳಿಗೆ ಪ್ರವೇಶಾತಿ ನೀಡಿದ ನಂತರವಷ್ಟೇ ಸುತ್ತಮುತ್ತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಇಲ್ಲದಿದ್ದರೆ ಖಾಸಗಿ ಅನುದಾನರಹಿತ ಶಾಲೆಗಳಲ್ಲಿ ಆರ್ ಟಿಇಯಡಿ ಪ್ರವೇಶಾತಿ ನೀಡಲಾಗುತ್ತದೆ.
ತಮ್ಮ ಮನೆಯ ಸುತ್ತಮುತ್ತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳು ಇಲ್ಲದಿದ್ದರೆ ಪೋಷಕರು ಆರ್ ಟಿಇಯಡಿ ಅರ್ಜಿ ಸಲ್ಲಿಸಲು ಅನುಕೂಲವಾಗಲು ಖಾಸಗಿ ಶಾಲೆಗಳ ಪಟ್ಟಿಯನ್ನು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ ಮಾಡಿದೆ. ನಾವು ಸದ್ಯದಲ್ಲಿಯೇ ಅಂತಹ ಖಾಸಗಿ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದು ಅವುಗಳು ಆರ್ ಟಿಇ ಕೋಟಾದಡಿ ಶೇಕಡಾ 25ರಷ್ಟು ಸೀಟುಗಳನ್ನು ಖಾಲಿಯಿಡಬೇಕು ಎಂದು ನಿಯಮ ಹೊರಡಿಸಲಾಗಿದೆ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರತಿವರ್ಷ ಡಿಸೆಂಬರ್ ಅಂತ್ಯಕ್ಕೆ ಆರ್ ಟಿಇ ಕೋಟಾದಡಿ ಪ್ರವೇಶಾತಿ ಆರಂಭವಾಗುತ್ತದೆ. ಈ ವರ್ಷ ಅದು ಸರ್ಕಾರದ ತಿದ್ದುಪಡಿ ನಿಯಮದಿಂದಾಗಿ ವಿಳಂಬವಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಳಿಯೇ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಖಾತೆಯಿರುವುದರಿಂದ ಅದಕ್ಕೆ ಅವರು ಅನುಮೋದನೆ ನೀಡಬೇಕು. ಅವರಿಂದ ಅನುಮೋದನೆ ಸಿಕ್ಕಿದ ಕೂಡಲೇ ನಾವು ಅಧಿಸೂಚನೆ ಹೊರಡಿಸುತ್ತೇವೆ ಎನ್ನುತ್ತಾರೆ ಅಧಿಕಾರಿ.
ಕರ್ನಾಟಕದಲ್ಲಿ 48 ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳಿದ್ದು, ಆರ್ ಟಿಇಯಡಿ ಸೂಚಿಸಿದಂತೆ ನೆರೆಹೊರೆಯಲ್ಲಿ ಒಂದು ಸರ್ಕಾರಿ ಶಾಲೆಯಿರಬೇಕು. ನಮ್ಮ ರಾಜ್ಯದಲ್ಲಿ ಸಾಕಷ್ಟು ಸರ್ಕಾರಿ ಶಾಲೆಗಳಿರುವುದರಿಂದ ಖಾಸಗಿ ಶಾಲೆಗಳಲ್ಲಿ ಆರ್ ಟಿಇಯಡಿ ಸೀಟು ಹಂಚಿಕೆ ಮಾಡುವ ಅಗತ್ಯವಿಲ್ಲ ಎಂದು ಸರ್ಕಾರ ತಂದ ತಿದ್ದುಪಡಿಯಲ್ಲಿ ಸೂಚಿಸಲಾಗಿದೆ ಎನ್ನುತ್ತಾರೆ ಅಧಿಕಾರಿಗಳು.
ತಮ್ಮ ಮಗುವನ್ನು ಆಂಗ್ಲಮಾಧ್ಯಮ ಶಾಲೆಗೆ ಸೇರಿಸಬೇಕು ಎಂಬ ಪೋಷಕರ ಆಸೆಗೆ ಸರ್ಕಾರದ ತಿದ್ದುಪಡಿಯಿಂದ ಬೇಸರವಾಗಿದೆ. ಸರ್ಕಾರಿ ಶಾಲೆಗಳಲ್ಲಿ ಪ್ರವೇಶಾತಿ ನೀಡುವುದಾದರೆ ಆರ್ ಟಿಇಯ ಉಪಯೋಗವೇನು? ಎಂದು ಪೋಷಕರೊಬ್ಬರು ಕೇಳುತ್ತಾರೆ. ಕಡಿಮೆ ಆದಾಯವಿರುವ ನಮ್ಮಂತ ಪೋಷಕರಿಗೆ ಕೂಡ ಮಕ್ಕಳನ್ನು ಖಾಸಗಿ ಆಂಗ್ಲ ಮಾಧ್ಯಮ ಶಾಲೆಗೆ ಸೇರಿಸಬೇಕೆಂದು ಆಸೆಯಿರುತ್ತದೆ. ಆದರೆ ಅಲ್ಲಿನ ಅಧಿಕ ಶುಲ್ಕದಿಂದಾಗಿ ಸಾಧ್ಯವಾಗದ ನಮಗೆ ಆರ್ ಟಿಇ ವರದಾನವಾಗಿತ್ತು. ಆದರೆ ಇದೀಗ ಸರ್ಕಾರ ನಮ್ಮ ಮಕ್ಕಳ ಕಲಿಕೆಯ ಹಕ್ಕನ್ನು ಕಸಿದುಕೊಂಡಿದೆ ಎಂದು ಮತ್ತೊಬ್ಬ ಪೋಷಕರು ಆರೋಪಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


