ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಪಿಡಿಓಗಳ ವಿರುದ್ಧ ಕ್ರಮ- ಸಿದ್ದರಾಮಯ್ಯ
ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.

ಬಾದಾಮಿ: ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ರಾಜಕೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಾರದು. ಒಂದು ವೇಳೆ ರಾಜಕೀಯದಲ್ಲಿ ತೊಡಗಿಸಿಕೊಂಡಿರುವುದು ಕಂಡುಬಂದರೆ ಅಂತಹವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಎಚ್ಚರಿಕೆ ನೀಡಿದ್ದಾರೆ.
ಬಾದಾಮಿಯಲ್ಲಿಂದು ಎರಡನೇ ಕೆಡಿಪಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಅಧಿಕಾರಿಗಳು ಸರ್ಕಾರಿ ಕೆಲಸ ಬಿಟ್ಟು ಬೇರೆ ಯಾವುದರಲ್ಲೂ ತೊಡಗಿಸಿಕೊಳ್ಳಬಾರದು, ಸರ್ಕಾರದ ಸೌಲಭ್ಯಗಳನ್ನು ಜನರಿಗೆ ತಲುಪಿಸಿ ಸಮಾಜದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ಹೇಳಿದರು.
ವಿವಿಧ ಇಲಾಖೆಗಳ ಅನುದಾನದ ಬಗ್ಗೆ ಸಮರ್ಪಕ ಮಾಹಿತಿ ಒದಗಿಸದ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಸಿದ್ದರಾಮಯ್ಯ, ಸರಿಯಾಗಿ ಕೆಲಸ ನಿರ್ವಹಿಸದಿದ್ದ ಅಧಿಕಾರಿಗಳು ತಾಲೂಕಿನಲ್ಲಿ ಎಲ್ಲಿಯೂ ಕೆಲಸ ಮಾಡಲು ನಾಲಾಯಕ್ ಆಗಿದ್ದು, ಪ್ರತಿದಿನ ಡೈರಿ ನಿರ್ವಹಣೆ ಮಾಡಬೇಕು. ಆ ಡೈರಿಯಲ್ಲಿ ಪ್ರತಿದಿನದ ಕೆಲಸಗಳನ್ನು ನಮೂದಿಸಬೇಕು. ಮುಂದಿನ ಸಭೆಯಲ್ಲಿ ಅದನ್ನು ಪರಾಮರ್ಶೆ ನಡೆಸುತ್ತೇನೆ. ಒಂದು ವೇಳೆ ಅದರಲ್ಲಿ ತಪ್ಪು ಮಾಹಿತಿ ಕಂಡುಬಂದಲ್ಲಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಸೂಚನೆ ನೀಡಿದರು.
ಇದೇ ವೇಳೆ ನಗರಾಭಿವೃದ್ದಿ ಸಚಿವ ಯುಟಿ ಖಾದರ್, ಕ್ಷೇತ್ರದಲ್ಲಿ ಆಗಬೇಕಾಗಿರುವ ತಮ್ಮ ಇಲಾಖೆಗೆ ಸಂಬಂಧಿಸಿದ ಅಭಿವೃದ್ದಿ ಕೆಲಸಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಬಾದಾಮಿ, ಐಹೊಳೆ, ಪಟ್ಟಣದಕಲ್ಲು ಮತ್ತಿತರ ಐತಿಹಾಸಿಕ ಸ್ಥಳಗಳ ಅಭಿವೃದ್ಧಿ ಸಂಬಂಧ ಪ್ರವಾಸೋದ್ಯಮ ಸಚಿವ ಸಾರಾಮಹೇಶ್ ಸಮ್ಮುಖದಲ್ಲಿ ಇಲಾಖೆಯ ಅಧಿಕಾರಿಗಳೊಂದಿಗೆ ಸಿದ್ದರಾಮಯ್ಯ ಚರ್ಚೆ ನಡೆಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


