ಸ್ಯಾಂಡಲ್ ವುಡ್ 'ಐಟಿ ದಾಳಿ'; ತೆರಿಗೆ ಅಧಿಕಾರಿಗಳ ದಾಳಿಯ ಕುರಿತ ಸಂಪೂರ್ಣ ವಿವರ ಇಲ್ಲಿದೆ
ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಾರೆ.

Published On :
ಬೆಂಗಳೂರು: ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮೊದಲು ಎಂಬಂತೆ ಸ್ಯಾಂಡಲ್ ವುಡ್ ನ ಸ್ಟಾರ್ ನಟರ ಮನೆ, ಕಚೇರಿಗಳ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ದೇಶಾದ್ಯಂತ ಸುದ್ದಿಗೆ ಗ್ರಾಸವಾಗಿದ್ದಾರೆ.
ದಾಳಿಯಾದ 24 ಗಂಟೆಗಳ ಬಳಿಕವೂ ಸ್ಟಾರ್ ನಟರ ಮನೆಗಳಲ್ಲಿ ಶೋಧ ಕಾರ್ಯಾಚರಣೆ ಮುಂದುವರೆದಿದ್ದು, ಇದೀಗ ಅಧಿಕಾರಿಗಳ ತೆರಿಗೆ ದಾಳಿ ಕುರಿತ ರೋಚಕ ಅಂಶಗಳು ಬಯಲಾಗುತ್ತಿವೆ.
ಒಂದು ತಿಂಗಳಿನಿಂದಲೇ ನಡೆದಿತ್ತು ಭರ್ಜರಿ ತಯಾರಿ
ಇನ್ನು ಕಳೆದ ಒಂದು ತಿಂಗಳಿನಿಂದಲೇ ತೆರಿಗೆ ಅಧಿಕಾರಿಗಳು ದಾಳಿಗಾಗಿ ಯೋಜನೆ ರೂಪಿಸಿದ್ದರು ಎಂದು ಹೇಳಲಾಗಿದೆ. ‘ದಿ ವಿಲನ್’, ‘ಕೆಜಿಎಫ್’ ಸೇರಿದಂತೆ ಇತ್ತೀಚಿನ ಹಲವು ಕನ್ನಡ ಚಿತ್ರಗಳಲ್ಲಿ ಹೂಡಿಕೆಯಾಗುತ್ತಿರುವ ಅಪಾರ ಪ್ರಮಾಣದ ಹಣ ಮತ್ತು ಹಣ ಗಳಿಕೆ ಬಗ್ಗೆ ಆಯಾ ಚಿತ್ರಗಳ ನಿರ್ಮಾಪಕರ ಹೇಳಿಕೆಗಳು, ಮಾಧ್ಯಮಗಳಲ್ಲಿನ ವರದಿಗಳನ್ನು ಆಧರಿಸಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಈ ದಾಳಿ ನಡೆಸಿದ್ದಾರೆ ಎನ್ನಲಾಗಿದೆ.
200 ಅಧಿಕಾರಿಗಳು, ಇಲಾಖೆಯ ಕಾರಿದ್ದರೂ ಖಾಸಗಿ ಕ್ಯಾಬ್ ಗಳು ಬುಕ್
ಇನ್ನು ತೆರಿಗೆ ದಾಳಿಗೆ ಯೋಜನೆ ರೂಪಿಸಿದ್ದ ಅಧಿಕಾರಿಗಳು ಈ ಮಾಹಿತಿ ಯಾವುದೇ ಕಾರಣಕ್ಕೂ ಹೊರಹೋಗದಂತೆ ಎಚ್ಚರಿಕೆ ವಹಿಸಿದರು. ಇದಕ್ಕಾಗಿ ಸುಮಾರು 200 ನುರಿತ ಅಧಿಕಾರಿಗಳ ಹಲವು ತಂಡಗಳನ್ನು ರಚಿಸಿದ ತೆರಿಗ ಇಲಾಖೆ ಇಲಾಖೆಯ ಕಚೇರಿಯಲ್ಲಿ ಸಭೆ ನಡೆಸಿ ದಾಳಿ ಕುರಿತು ಚರ್ಚೆ ನಡೆಸಿತ್ತು. ಅಲ್ಲದೆ ಇಲಾಖೆಯ ವಾಹನಗಳನ್ನು ಬಳಸಿದರೆ ಮಾಹಿತಿ ಸೋರಿಕೆಯಾಗುವ ಕಾರಣದಿಂದಾಗಿ ದಾಳಿಗಾಗಿಯೇ 30ಕ್ಕೂಅಧಿಕ ಕ್ಯಾಬ್ ಗಳನ್ನು ಇಲಾಖೆ ಮೊದಲೇ ಬುಕ್ ಮಾಡಿತ್ತು ಎನ್ನಲಾಗಿದೆ.
ಬಳಿಕ ಯೋಜನೆಯಂತೆ ನಿನ್ನೆ 200 ಅಧಿಕಾರಿಗಳನ್ನು ಕಚೇರಿಗೆ ಕರೆಸಿಕೊಂಡು ಖಾಸಗಿ ವಾಹನಗಳಲ್ಲಿ ಬಂದು ದಾಳಿ ಮಾಡಿದ್ದಾರೆ. ನಟ ಪುನೀತ್ ರಾಜ್ ಕುಮಾರ್, ಶಿವರಾಜ್ ಕುಮಾರ್, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್, ಕೆಜಿಎಫ್ ನಿರ್ಮಾಪಕ ವಿಜಯ್ ಕಿರಗಂದೂರು ಹಾಗೂ ವಿಲನ್ ಚಿತ್ರದ ನಿರ್ಮಾಪಕ ಸಿ.ಆರ್.ಮನೋಹರ್, ನಿವಾಸದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ಏಕಕಾಲದಲ್ಲಿ ದಾಳಿ ನಡೆಸಿದರು. ಸದಾಶಿವನಗರದ ಪುನೀತ್ ರಾಜ್ ಕುಮಾರ್ ನಿವಾಸ, ನಾಗವಾರದಲ್ಲಿರುವ ಶಿವರಾಜ್ ಕುಮಾರ್ ನಿವಾಸ, ಮಹಾಲಕ್ಷ್ಮಿ ಲೇಔಟ್‌ನ ನಾಗಪುರದ ರಾಕ್ ಲೈನ್ ವೆಂಕಟೇಶ್ ನಿವಾಸ, ನಾಗರಬಾವಿಯ ವಿಜಯ್ ಕಿರಗಂದೂರು ನಿವಾಸ ಹಾಗೂ ಎಚ್ಎಸ್ಆರ್ ಲೇಔಟ್ ನಲ್ಲಿರುವ ಮನೋಹರ್ ನಿವಾಸದ ಮೇಲೆ ದಾಳಿ ನಡೆದಿದೆ. ಸಂಬಂಧಪಟ್ಟ ದಾಖಲೆಗಳನ್ನು ಪರಿಶೀಲನೆ ನಡೆಸಿದ್ದಾರೆ.
ಇಲಾಖೆಯ ಗಮನ ಸೆಳೆದಿದ್ದ ಬಿಗ್ ಬಜೆಟ್ ಚಿತ್ರಗಳು
ಇತ್ತೀಚಿನ ದಿನಗಳಲ್ಲಿ ಏಕಾಏಕಿ ಕನ್ನಡ ಚಿತ್ರರಂಗದಲ್ಲಿ ಬಿಗ್ ಬಜೆಟ್ ಚಿತ್ರಗಳು ನಿರ್ಮಾಣಗೊಳ್ಳುತ್ತಿವೆ. ಕನ್ನಡದಲ್ಲೂ ಇಷ್ಟೊಂದು ದೊಡ್ಡ ಪ್ರಮಾಣದ ಹಣ ಹೂಡಿಕೆ ಮಾಡಿ ಚಿತ್ರ ಮಾಡಬಹುದು ಎಂಬುದರ ಊಹೆಯೂ ಇರಲಿಲ್ಲ. ನೆರೆಯ ತಮಿಳು, ತೆಲುಗು ಭಾಷೆಯ ಚಿತ್ರರಂಗಕ್ಕೆ ಹೋಲಿಸಿದರೆ ಕನ್ನಡ ಚಿತ್ರರಂಗದ ಮಾರುಕಟ್ಟೆಸೀಮಿತವಾದದ್ದು. ಹೀಗಾಗಿ, ಇಲ್ಲಿ ಬಿಗ್ ಬಜೆಟ್ ಚಿತ್ರಗಳನ್ನು ನಿರ್ಮಿಸಿ ಲಾಭ ಗಳಿಸುವುದು ಕಷ್ಟಎಂಬ ಮಾತೇ ಚಾಲ್ತಿಯಲ್ಲಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಕನ್ನಡದಲ್ಲೂ ಬಿಗ್ ಬಜೆಟ್ ಚಿತ್ರಗಳು ಬರುತ್ತಿರುವುದು ಐಟಿ ಅಧಿಕಾರಿಗಳು ಇತ್ತ ತಿರುಗುವಂತೆ ಮಾಡಿತ್ತು.
ಇದೇ ಕಾರಣಕ್ಕೆ ಕಳೆದ ಒಂದು ತಿಂಗಳಿನಿಂದಲೂ ಅಧಿಕಾರಿಗಳು ಈ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದರು. ನಟರು ಹಾಗೂ ನಿರ್ಮಾಪಕರ ಆದಾಯದ ಬಗ್ಗೆ ಸಮಗ್ರ ಮಾಹಿತಿಯನ್ನು ಕಲೆ ಹಾಕಿ, ಸೂಕ್ತ ದಾಖಲೆಗಳ ಮಾಹಿತಿ ಸಂಗ್ರಹಿಸಿದ್ದರು. ಕೋರ್ಟ್ ನಲ್ಲಿ ದಾಳಿ ಸಂಬಂಧ ಸರ್ಚ್ ವಾರೆಂಟ್ ಪಡೆದು ದಾಳಿ ನಡೆಸಲು ಅನುಮತಿ ಪಡೆದಿದ್ದರು. ಬಳಿಕ ಗುರುವಾರ ಬೆಳ್ಳಂಬೆಳಗ್ಗೆ ಏಕಕಾಲದಲ್ಲಿ ದಾಳಿ ಮಾಡುವ ಯೋಜನೆ ರೂಪಿಸಿದ್ದರು.
ದಾಳಿ ಬಳಿಕ ರಕ್ಷಣೆ ನೀಡುವಂತೆ ಪೊಲೀಸರಿಗೆ ಸೂಚನೆ
ಇನ್ನು ಖಾಸಗಿ ಕ್ಯಾಬ್ ಗಳಲ್ಲಿ ಸ್ಟಾರ್ ನಟರ ಮನೆಗಳ ಮೇಲೆ ಅಧಿಕಾರಿಗಳು ದಾಳಿ ಮಾಡಿದ ಬಳಿಕ ಈ ದಾಳಿ ಕುರಿತು ಪೊಲೀಸ್ ಇಲಾಖೆಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ಮೊದಲೇ ಪೊಲೀರಿಗೆ ಮಾಹಿತಿ ನೀಡಿದ್ದರೆ ಅದು ಸೋರಿಕೆಯಾಗುವ ಶಂಕೆ ಮೇರೆಗೆ ದಾಳಿ ಬಳಿಕ ಅಧಿಕಾರಿಗಳಿಗೆ ರಕ್ಷಣೆ ನೀಡುವಂತೆ ತೆರಿಗೆ ಇಲಾಖೆ ಸ್ಥಳೀಯ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿತ್ತು ಎಂದು ತಿಳಿದುಬಂದಿದೆ.
ಸಿನಿಮಾ ಹೆಸರಿನಲ್ಲಿ ಕಪ್ಪು ಹಣ ಚಲಾವಣೆ
ಇನ್ನು ಚಿತ್ರಗಳ ಹೆಸರಿನಲ್ಲಿ ಕೆಲ ಹೆಸರಾಂತ ನಿರ್ಮಾಪಕರು ತಮ್ಮ ಕಪ್ಪು ಹಣವನ್ನು ಬಿಳಿಯಾಗಿಸಲು ಯತ್ನಿಸಿದ್ದರು ಎಂದು ಹೇಳಲಾಗಿದೆ. ಚಿತ್ರಗಳ ತಯಾರಿ ಮೂಲಕ ಸುಳ್ಳು ಲೆಕ್ಕ ತೋರಿಸಿ ತಮ್ಮ ಕಪ್ಪು ಹಣವನ್ನು ಬಿಳಿಯಾಗಿಸಿಕೊಳ್ಳುತ್ತಿದ್ದರು ಎಂಬ ಆರೋಪ ಕೂಡ ಹಲವು ನಿರ್ಮಾಪಕರ ವಿರುದ್ಧ ಕೇಳಿಬಂದಿದೆ. ಇದೂ ಕೂಡ ನಿನ್ನೆಯ ದಾಳಿಗೆ ಕಾರಣವಾಗಿರಬಹುದು ಎನ್ನಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
yashಬೆಂಗಳೂರುBengaluruSandalwoodಸ್ಯಾಂಡಲ್ ವುಡ್ಯಶ್ಪುನೀತ್ ರಾಜ್ ಕುಮಾರ್Puneet Rajkumarಐಟಿ ದಾಳಿIT raidKGFಕೆಜಿಎಫ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


