ರಾಜ್ಯ

ಏರೋ ಇಂಡಿಯಾ 2019: ಲೋಹದ ಹಕ್ಕಿಗಳ ಮೈನವಿರೇಳಿಸುವ ಪ್ರದರ್ಶನ; ಮೃತ ಪೈಲಟ್‍ಗೆ ಶ್ರದ್ಧಾಂಜಲಿ

ವೈಮಾನಿಕ ಮತ್ತು ಮಿಲಿಟರಿ ಕ್ಷೇತ್ರಗಳ ತಂತ್ರಜ್ಞಾನ, ಉತ್ಪನ್ನಗಳ ಅನಾವರಣಗೊಳಿಸುವ ಏಷಿಯಾದ ಅತಿದೊಡ್ಡ, ಪ್ರತಿಷ್ಠಿತ 'ಏರೋ ಇಂಡಿಯಾ 2019' ಹನ್ನೆರಡನೇ ಆವೃತ್ತಿಗೆ ಬುಧವಾರ ಬೆಳಗ್ಗೆ 9 ಗಂಟೆಗೆ ಯಲಹಂಕ ...

ಏರೋ ಇಂಡಿಯಾ 2019: ಲೋಹದ ಹಕ್ಕಿಗಳ ಮೈನವಿರೇಳಿಸುವ ಪ್ರದರ್ಶನ; ಮೃತ ಪೈಲಟ್‍ಗೆ  ಶ್ರದ್ಧಾಂಜಲಿ
ಏರೋ ಇಂಡಿಯಾ ವೈಮಾನಿಕ ಪ್ರದರ್ಶನ
Published On :
ಬೆಂಗಳೂರು: ಏರೋ ಇಂಡಿಯಾ 2019 ವೈಮಾನಿಕ ಪ್ರದರ್ಶನಕ್ಕೆ ಅಧಿಕೃತ ಚಾಲನೆ ದೊರೆಯುತ್ತಿದ್ದಂತೆ, ದೇಶ ವಿದೇಶಗಳ ಅತ್ಯುನ್ನತ ಯುದ್ಧ ಹಾಗೂ ನಾಗರಿಕಯಾನ ವಿಮಾನಗಳು ಮೈನವಿರೇಳಿಸುವ ಪ್ರದರ್ಶನ ನೀಡಿದವು.

ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ನಾಗರಿಕ ವಿಮಾನಯಾನ ಸಚಿವ ಸುರೇಶ್ ಪ್ರಭು , ಕೇಂದ್ರ ಸಾಂಖ್ಯಿಕ ಮತ್ತು ದತ್ತಾಂಶ ಇಲಾಖೆ ಸಚಿವ ಡಿ.ವಿ.ಸದಾನಂದ ಗೌಡ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸೇನೆಯ ಮುಖ್ಯಸ್ಥರು ಸೇರಿ ಅನೇಕ ಗಣ್ಯರ ಸಮ್ಮುಖದಲ್ಲಿ ವಿಮಾನಗಳು ಕಸರತ್ತು ನಡೆಸಿದವು.

ಆದರೆ, ಈ ಪ್ರದರ್ಶನದ ಉತ್ಸಾಹದ ಬೆನ್ನಲ್ಲೇ ನಿನ್ನೆ ನಡೆದ ಯುದ್ಧ ವಿಮಾನಗಳ ಅಪಘಾತದ ಕರಿನೆರಳು ಢಾಳಾಗಿ ಕಾಣಿಸಿತು.

ಎಚ್ಎಎಲ್ ನ ಸುಖೋಯ್, ಜಾಗ್ವಾರ್ , ತೇಜಸ್ ಯುದ್ಧ ವಿಮಾನಗಳು ಒಟ್ಟಾಗಿ 'ಮಿಸ್ಸಿಂಗ್ ಮ್ಯಾನ್ ' ಹಾರಾಟ ನಡೆಸುವ ಮೂಲಕ ನಿನ್ನೆ ಅಪಘಾತದಲ್ಲಿ ಮೃತಪಟ್ಟ ಪೈಲಟ್ ವಿಂಗ್ ಕಮಾಂಡರ್ ಸಾಹಿಲ್ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದವು.

ನಂತರ ಎಚ್ಎಎಲ್‌ನಿಂದ ಭಾರತೀಯ ಸೇನೆಗೆ ಸೇರ್ಪಡೆಗೊಂಡಿರುವ ಹಗುರ ಯುದ್ಧ ವಿಮಾನ ತೇಜಸ್, ವಿಮಾನಕ್ಕೆ 'ತೇಜಸ್ ' ಎಂದು ನಾಮಕರಣ ಮಾಡಿದ ಮಾಜಿ ಪ್ರಧಾನಿ ದಿ. ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಿತು.

ನಂತರ, ಇದೇ ಮೊದಲ ಬಾರಿಗೆ ರಫೇಲ್ ಯುದ್ಧ ವಿಮಾನ ಬಾನಿನಲ್ಲಿ ಚೆಲ್ಲಾಟವಾಡಿತು. ಗಾಳಿಯನ್ನು ತೂರಿಕೊಂಡು ವೇಗವಾಗಿ ನುಗ್ಗುವ ಜೊತೆಗೆ, ಅಷ್ಟೇ ವೇಗವಾಗಿ ಪಲ್ಟಿ ಹೊಡೆಯುವ ಮೂಲಕ ತನ್ನ ಶಕ್ತಿ ಪ್ರದರ್ಶನ ಮಾಡಿತು. ಕೊನೆಯಲ್ಲಿ ಗಂಟೆಗೆ 150 ಕಿ.ಮೀ. ವೇಗದಲ್ಲಿ ನಿಧಾನವಾಗಿ ಚಲಿಸಿ, ಮೃತ ಪೈಲೆಟ್ ಸಾಹಿಲ್ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಿದ್ದು ವಿಶೇಷವಾಗಿತ್ತು.

ಭಾರತೀಯ ವಾಯುಪಡೆಗೆ ಹೊಸದಾಗಿ ಸೇರ್ಪಡೆಗೊಂಡಿರುವ ಹಗುರ ಉಪಯುಕ್ತತೆಯ ಹೆಲಿಕಾಪ್ಟರ್ (ಎಲ್‍ಯುಎಚ್ ) ಅನ್ನು ಆದರದಿಂದ ಸೇನೆಗೆ ಬರಮಾಡಿಕೊಳ್ಳಲಾಯಿತು. ನೆಲದಿಂದ, ನೀರಿನಿಂದ ಹಾಗೂ ಅಗ್ನಿ ಆಕಸ್ಮಿಕಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸುವ ಸಾಮರ್ಥ್ಯ ಹೊಂದಿರುವ ಈ ಹೆಲಿಕಾಪ್ಟರ್, ಹಲವು ಕಸರತ್ತುಗಳಿಂದ ತನ್ನ ಸಾಮರ್ಥ್ಯವನ್ನು ಸಾಬೀತುಪಡಿಸಿತು. ಇದು 2016ರಲ್ಲಿ ಮೊದಲ ಹಾರಾಟ ನಡೆಸಿತ್ತು. ಇದನ್ನು ಸೇನೆಯಲ್ಲಿ ಹಳೆಯದಾಗಿರುವ ಚೇತಕ್ ಹಾಗೂ ಚೀತಾ ಹೆಲಿಕಾಪ್ಟರ್ ಬದಲಿಗೆ ಸಿದ್ಧಪಡಿಸಲಾಗಿದೆ.

ಪ್ರದರ್ಶನದ ಆಕರ್ಷಣೆಯಾಗಿದ್ದ ಸಾರಂಗ್ ಹೆಲಿಕಾಪ್ಟರ್ ಗಳು ಎಂದಿನಂತೆ ತಮ್ಮ ಅಪಾಯಕಾರಿ ಕ್ರಾಸಿಂಗ್ ಗಳ ಮೂಲಕ ಜನರನ್ನು ಬೆಚ್ಚಿ ಬೀಳಿಸಿದವು. ಹೊಗೆ ಉಗುಳುತ್ತಾ ಮೈದಾನದ ನಾಲ್ಕು ದಿಕ್ಕುಗಳನ್ನು ಆವರಿಸಿ, ಆಗಾಗ್ಗೆ ಒಂದೊಕ್ಕೊಂದು ಡಿಕ್ಕಿ ಹೊಡೆಯುವಂತೆ ವೇಗವಾಗಿ ನುಗ್ಗಿ ಕ್ಷಣಾರ್ಧದಲ್ಲಿ ತಪ್ಪಿಸಿಕೊಂಡು ಮತ್ತೆ ಹಾರಾಟ ನಡೆಸುವ ಮೂಲಕ ಪ್ರೇಕ್ಷಕರು ಉಸಿರು ಬಿಗಿಹಿಡಿದು ನೋಡುವಂತೆ ಮಾಡಿದವು.

ಉಳಿದಂತೆ ರಾಷ್ಟ್ರೀಯ ಬಾವುಟ ಹೊತ್ತು ಸಾಗುವ ಎಂಇ-17, ಡಕೋಟ ಡಿಸಿ -3, ಎಎಲ್ ಎಚ್ ಎಂಕೆ-3 (ಧ್ರುವ), ರುದ್ರ,  ಎಚ್ಎಎಲ್ ನ ಆವ್ರೋ, ಕಿರಣ್ ಎಂಕೆ 1 , ಮಿಗ್ 21 ಬಿಷನ್, ಸಾರಸ್, ನೇತ್ರಾ, ಪಿ-81, ಎಸ್ ಯು 30 ಎಂಕೆಐ, ಎಫ್ -16, ಏರ್ ಬಸ್ 330, ಬಿ 52 ಯುದ್ಧ ವಿಮಾನಗಳು ಪ್ರದರ್ಶನದಲ್ಲಿ ಪಾಲ್ಗೊಂಡವು.

ಅಪಘಾತದ ಹಿನ್ನೆಲೆಯಲ್ಲಿ "ಸೂರ್ಯಕಿರಣ" ಜೆಟ್ ವಿಮಾನಗಳು ಪ್ರದರ್ಶನದಲ್ಲಿ ಪಾಲ್ಗೊಳ್ಳಲಿಲ್ಲ. ಉದ್ಘಾಟನಾ ಕಾರ್ಯಕ್ರಮದ ಆರಂಭದಲ್ಲಿ ಮೃತ ಸಾಹಿಲ್ ಗಾಂಧಿಗೆ ಶ್ರದ್ಧಾಂಜಲಿ ಸಲ್ಲಿಸಲಾಗಿತ್ತು.
ಐದು ದಿನಗಳ ವೈಮಾನಿಕ ಪ್ರದರ್ಶನದಲ್ಲಿ ವಿಮಾನ, ಹೆಲಿಕಾಪ್ಟರ್‌ಗಳು, ನಾಗರಿಕ ವಿಮಾನಗಳು ವೈಮಾನಿಕ ಪ್ರದರ್ಶನವನ್ನು ನೀಡಲಿವೆ. ದೇಶ-ವಿದೇಶಗಳ ನೂರಾರು ಕಂಪನಿಗಳು ತಮ್ಮ ಉತ್ಪನ್ನಗಳನ್ನು ಪ್ರದರ್ಶನಕ್ಕೆ ಇಡಲಿದ್ದಾರೆ. ಈ ವೇಳೆ ರಕ್ಷಣಾ ವಲಯಕ್ಕೆ ಸಂಬಂಧಿಸಿದ ಹಲವು ಮಹತ್ವದ ಒಪ್ಪಂದಗಳು, ಅಭಿವೃದ್ಧಿ ಒಪ್ಪಂದಗಳು, ಮಾರಾಟ, ಖರೀದಿಗೆ ಸಹಿ ಬೀಳಲಿವೆ. 
ಈ ವರ್ಷ ನಡೆಯುತ್ತಿರುವ ಏರೋ ಇಂಡಿಯಾ ವೈಮಾನಿಕ ಪ್ರದರ್ಶನದ 12ನೇ ಆವೃತ್ತಿ. 
ಈ ಪ್ರದರ್ಶನ ರಕ್ಷಣಾ ಮತ್ತು ತಂತ್ರಜ್ಞಾನ ಇಲಾಖೆಗಳ ವ್ಯಾಪಾರಕ್ಕೆ ಉತ್ತಮ ವೇದಿಕೆ ಮಾತ್ರವಲ್ಲದೆ, ಈ ಕ್ಷೇತ್ರಗಳ ಬಗ್ಗೆ ಅನೇಕ ಜ್ಞಾನವನ್ನು ಹಂಚಿಕೊಳ್ಳಲಾಗುತ್ತದೆ. 
ಈ ವರ್ಷದ ಪ್ರದರ್ಶನ ಭಾರತದ ವೈಮಾನಿಕ ಪ್ರದರ್ಶನ ಇತಿಹಾಸದಲ್ಲಿಯೇ ಅತ್ಯಂತ ದೊಡ್ಡದಾಗಿದ್ದು 51 ದೇಶಗಳು ಮತ್ತು 44 ಅಧಿಕಾರಿ ನಿಯೋಗಗಳು ಭಾಗವಹಿಸುತ್ತಿವೆ.
ವೈಮಾನಿಕ ಪ್ರದರ್ಶನದ ಇಂದಿನ ಕಾರ್ಯಕ್ರಮಗಳ ಪಟ್ಟಿ ಇಂತಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.