ಬೆಂಗಳೂರಿನಲ್ಲಿ ಒಂಟಿ ಮಹಿಳೆ ಕೊಲೆ ಪ್ರಕರಣ: ಓಲಾ ಕ್ಯಾಬ್ ಚಾಲಕ ಬಂಧನ
ಓಲಾ ಕ್ಯಾಬ್ ನಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಹೊರರಾಜ್ಯದ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು: ಓಲಾ ಕ್ಯಾಬ್ ನಲ್ಲಿ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುತ್ತಿದ್ದ ಹೊರರಾಜ್ಯದ ಒಂಟಿ ಮಹಿಳೆಯನ್ನು ಕೊಲೆ ಮಾಡಿದ ಆರೋಪಿಯನ್ನು ಬಾಗಲೂರು ಪೊಲೀಸರು ಬಂಧಿಸಿದ್ದಾರೆ.
22 ವರ್ಷದ ಸಂಜೀವಿನಿ ನಗರದ ಹೆಚ್ ಎಮ್ ನಾಗೇಶ್ ಬಂಧಿತ ಆರೋಪಿ.
ಘಟನೆಯ ಹಿನ್ನೆಲೆ
ಜುಲೈ 31ರಂದು ಕಾಡಯರಪ್ಪನಹಳ್ಳಿ ಗ್ರಾಮದ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಹಿಂಭಾಗದ ಕಾಂಪೌಂಡ್ ಹತ್ತಿರ ಬೆಳಗ್ಗೆ ಅಪರಿಚಿತ ಮಹಿಳೆಯ ಕತ್ತು ಕೊಯ್ದು, ತಲೆಯ ಮೇಲೆ ಸಿಮೆಂಟಿನ ಇಟ್ಟಿಗೆ ಎತ್ತಿಹಾಕಿ ಕೊಲೆ ಮಾಡಲಾಗಿದೆ ಎಂದು ಕಾಡಯರಪ್ಪನಹಳ್ಳಿ ಗ್ರಾಮದ ನಿವಾಸಿ ಮುನಿರಾಜು ಎಂಬುವರು ಬಾಗಲೂರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಪ್ರಕರಣವನ್ನು ಬೇಧಿಸಲು ಈಶಾನ್ಯ ವಿಭಾಗದ ಉಪ ಪೊಲೀಸ್ ಆಯುಕ್ತ ಡಾ. ಭೀಮಾಶಂಕರ ಎಸ್. ಗುಳೇದ ಅವರು ಎರಡು ತಂಡಗಳನ್ನು ರಚಿಸಿದ್ದರು. ಒಂದು ತಂಡವು ಮೃತಳ ಕೈಯಲ್ಲಿದ್ದ ಟೈಟನ್ ವಾಚ್ ಹಾಗೂ ಅವರು ಧರಿಸಿದ್ದ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಮೇಲಿದ್ದ ಬಾರ್ ಕೋಡ್ ಆಧಾರದ ಮೇಲೆ ದೇಶದಾದ್ಯಂತ ಶಾಪಿಂಗ್ ಮಾಲ್ ಮತ್ತು ಆನ್‍ಲೈನ್ ಮಾರಾಟ ಸಂಸ್ಥೆಗಳ ಮೂಲಕ ಮಾಹಿತಿಯನ್ನು ಕಲೆ ಹಾಕಿತ್ತು.
ಮೃತ ಮಹಿಳೆಯು ಧರಿಸಿದ್ದ ಉಂಗುರ ಹಾಗೂ ಮುಖ ಚಹರೆಯು ಮೇಲ್ನೋಟಕ್ಕೆ ಉತ್ತರ ಭಾರತ ಹಾಗೂ ಪಶ್ಚಿಮ ಬಂಗಾಳ ರಾಜ್ಯದ ಮಹಿಳೆಯರಿಗೆ ಹೋಲಿಕೆಯಾಗುತ್ತಿತ್ತು. ಆದ್ದರಿಂದ ಎರಡನೇ ತಂಡವು ಪಶ್ಚಿಮ ಬಂಗಾಳ ಮತ್ತು ದೆಹಲಿಗೆ ತೆರಳಿ ಮೃತಳ ಬಗ್ಗೆ ಮಾಹಿತಿ ಕಲೆ ಹಾಕುವ ಕಾರ್ಯದಲ್ಲಿ ತೊಡಗಿತ್ತು.
ಪಶ್ಚಿಮ ಬಂಗಾಳದ ಕೊಲ್ಕತ್ತಾ ನಗರಕ್ಕೆ ಹೋದ ತಂಡವು ಎಲ್ಲಾ ಪೊಲೀಸ್ ಠಾಣೆಗಳಿಗೂ ಭೇಟಿ ನೀಡಿ ಅಪರಿಚಿತ ಮಹಿಳೆಯ ಕೊಲೆ ಪ್ರಕರಣದ ಬಗ್ಗೆ ವಿಚಾರಿಸುತ್ತಿರುವಾಗ ಅಲ್ಲಿನ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಓರ್ವ ಮಹಿಳೆ ಕಾಣೆಯಾದ ಬಗ್ಗೆ ಮಾಹಿತಿ ದೊರೆತಿತ್ತು. ಆ ಮಹಿಳೆಯ ಚಹರೆಯು ಬಾಗಲೂರು ಪೊಲೀಸ್ ಠಾಣೆಯ ಕೊಲೆ ಪ್ರಕರಣದ ಅಪರಿಚಿತ ಮಹಿಳೆಯ ಚಹರೆಗೆ ಹೋಲಿಕೆಯಾಗುತ್ತಿದ್ದರಿಂದ ಆಕೆಯ ಸಂಬಂಧಿಕರನ್ನು ಸಂಪರ್ಕಿಸಿದ್ದರು. ಮೃತಳ ಭಾವಚಿತ್ರ, ಧರಿಸಿದ್ದ ಬಟ್ಟೆ, ವಾಚ್ ಮತ್ತು ಉಂಗುರವನ್ನು ತೋರಿಸಿದಾಗ ಆಕೆ ತನ್ನ ಪತ್ನಿ ಪೂಜಾಸಿಂಗ್ ದೇ ಎಂದು ಪತಿ ಸೌದೀಪ್ ದೇ ಗುರುತಿಸಿರುತ್ತಾರೆ.
ಮೃತ ಪೂಜಾಸಿಂಗ್ ದೇ ಅವರು ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದಿದ್ದು, ಓಲಾ ಕ್ಯಾಬಿನಲ್ಲಿ ಪ್ರಯಾಣಿಸಿದ್ದರ ಕುರಿತು ಅವರ ಇಮೇಲ್ ಐಡಿ ಮೂಲಕ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಅನುಮಾನದ ಮೇಲೆ ಓಲಾ ಕಾರಿನ ಚಾಲಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಹಣದ ಆಸೆಗಾಗಿ ತಾನೇ ಪೂಜಾಸಿಂಗ್ ದೇ ಅವರನ್ನು ಕೊಲೆ ಮಾಡಿರುವುದಾಗಿ ಚಾಲಕ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


