ಕಳೆದ 6 ತಿಂಗಳಿನಿಂದ ರಾಜ್ಯದ 12 ಸಾವಿರ ಸರ್ಕಾರಿ ಶಾಲೆ ಶಿಕ್ಷಕರಿಗೆ ವೇತನವಿಲ್ಲ!
ಶಿಕ್ಷಕರ ದಿನಾಚರಣೆ ಎಂದರೆ ಮಕ್ಕಳಿಗೆ ವಿದ್ಯೆ-ಬುದ್ದಿ ಕಲಿಸುವ ಶಿಕ್ಷಕ ಶಿಕ್ಷಕಿಯರಿಗೆ ವಿಶೇಷ ದಿನ, ಆದರೆ ...

ಬೆಂಗಳೂರು: ಶಿಕ್ಷಕರ ದಿನಾಚರಣೆ ಎಂದರೆ ಮಕ್ಕಳಿಗೆ ವಿದ್ಯೆ-ಬುದ್ದಿ ಕಲಿಸುವ ಶಿಕ್ಷಕ ಶಿಕ್ಷಕಿಯರಿಗೆ ವಿಶೇಷ ದಿನ, ಆದರೆ ರಾಜ್ಯದ ಸಾವಿರಾರು ಶಿಕ್ಷಕರ ಪಾಲಿಗೆ ನಿನ್ನೆ ದುಃಖದ ದಿನ ಎಂದು ಹೇಳಬಹುದು.
ಹಣಕಾಸು ಇಲಾಖೆ ಹಾಗೂ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರುಗಳ ಎಡವಟ್ಟಿನಿಂದ ಹಲವು ತಾಲೂಕುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ (ಆರ್‌ಎಸ್‌ಎಂಎ) ಶಾಲೆ ಶಿಕ್ಷಕರು ಕಳೆದ ಆರು ತಿಂಗಳಿನಿಂದ ವೇತನವಿಲ್ಲದೆ ತೊಂದರೆಯಲ್ಲಿ ಸಿಲುಕಿದ್ದಾರೆ. ಈ ಕುರಿತು ಸಂಬಂಧಪಟ್ಟ ಡಿಡಿಪಿಐಗಳ ಗಮನಕ್ಕೆ ತಂದರೂ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡಿಲ್ಲ ಎಂದು ಶಿಕ್ಷಕರು ಅಳಲು ತೋಡಿಕೊಂಡಿದ್ದಾರೆ.
ವೇತನ ಸಮಸ್ಯೆ ರಾಜ್ಯದ ಶಿಕ್ಷಕರಿಗೆ ಹೊಸದಲ್ಲ, ಕಳೆದ ವರ್ಷ ಕೂಡ ಇದೇ ರೀತಿ ಆಗಿತ್ತು. ಹಲವು ತಾಲೂಕುಗಳ ಶಿಕ್ಷಣ ಇಲಾಖೆ ಸಿಬ್ಬಂದಿಗೂ 2-3 ತಿಂಗಳಿಂದ ವೇತನ ಸಿಕ್ಕಿಲ್ಲ. ಮಾತ್ರವಲ್ಲ, ಕೆಲವು ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೂ ವೇತನ ಆಗಿಲ್ಲ. ಈ ಸಮಸ್ಯೆ ಮಾಚ್‌ರ್ ತಿಂಗಳಲ್ಲೇ ಆರಂಭವಾಗಿತ್ತು. ಹಣಕಾಸು ಇಲಾಖೆ ಮಾಡಿದ ಸಣ್ಣ ತಪ್ಪನ್ನು ಆಗಲೇ ಸರಿಪಡಿಸುತ್ತಿದ್ದರೆ ಇಂದು ಸಮಸ್ಯೆ ದೊಡ್ಡದಾಗುತ್ತಿರಲಿಲ್ಲ. ಸಮಸ್ಯೆ ಸರಿಪಡಿಸದೇ ಹೋದಲ್ಲಿ ಮುಂದಿನ ಫೆಬ್ರವರಿ ತಿಂಗಳವರೆಗೂ ಶಿಕ್ಷಕರು ವೇತನವಿಲ್ಲದೆ ಕೆಲಸ ಮಾಡಬೇಕಾದ ಶಿಕ್ಷೆಗೆ ಗುರಿಯಾಗಲಿದ್ದಾರೆ ಎನ್ನಲಾಗಿದೆ.
ಕಾರಣವೇನು?: ನಿಯಮ ಪ್ರಕಾರ ಜಿಲ್ಲೆಯ ವೇತನ ಬೇಡಿಕೆಯ ವಿವರವನ್ನು ಜಿಲ್ಲಾ ಪಂಚಾಯಿತಿ ಹಣಕಾಸು ಇಲಾಖೆಗೆ ಸಲ್ಲಿಸಬೇಕು. ಬಳಿಕ ಶಿಕ್ಷಣ ಇಲಾಖೆಗೆ ಸಂಬಂಧಿಸಿದಂತೆ ಇಡೀ ವರ್ಷದ ವೇತನ ಅನುದಾನವನ್ನು 2-3 ಕಂತುಗಳಲ್ಲಿ ಆನ್‌ಲೈನ್‌ನಲ್ಲಿ ಹಣಕಾಸು ಇಲಾಖೆ ಆಯಾ ಜಿಲ್ಲೆ, ತಾಲೂಕುಗಳಿಗೆ ಹಂಚಿಕೆ ಮಾಡುತ್ತದೆ. ತಾಲೂಕು ಪಂಚಾಯಿತಿ ಖಜಾನೆಗಳ ಮೂಲಕ ಶಿಕ್ಷಕರಿಗೆ ವೇತನ ಬಟವಾಡೆಯಾಗುತ್ತದೆ. ಆದರೆ ಪ್ರಸ್ತುತ ಹಣಕಾಸು ವರ್ಷದ ಆರಂಭದಲ್ಲೇ ಹಣಕಾಸು ಇಲಾಖೆಯು ಆನ್‌ಲೈನ್ ವ್ಯವಸ್ಥೆಯಲ್ಲಿ ಲೋಪದೋಷವಾಗಿದೆ.
ಒಂದು ತಾಲೂಕಿಗೆ ಹೋಗಬೇಕಾದ ಅನುದಾನವನ್ನು ಇನ್ನೊಂದು ತಾಲೂಕಿಗೆ ವರ್ಗಾಯಿಸಿದೆ. ಅಲ್ಲದೆ, ಕೆಲವು ತಾಲೂಕುಗಳ ಅನುದಾನದ ಮೊತ್ತ ಹಂಚಿಕೆಯಲ್ಲೂ ವ್ಯತ್ಯಾಸ ಮಾಡಿದೆ. ಇನ್ನು ಸರ್ವ ಶಿಕ್ಷಾ ಅಭಿಯಾನದ ಶಿಕ್ಷಕರಿಗೆ ಕೆಲವೆಡೆ ವೇತನ ಹಂಚಿಕೆಯೇ ವಿಳಂಬವಾಗಿದೆ.
ಇದರಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮತ್ತು ಬೆಳ್ತಂಗಡಿ ತಾಲೂಕಿನ ವೇತನ ಅನುದಾನ ಅದಲು ಬದಲಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಕೊಪ್ಪ, ಧಾರವಾಡ ಮತ್ತು ಹುಬ್ಬಳ್ಳಿ, ಹಾಸನದ ಆಲೂರು, ಅರಕಲಗೂಡು, ಅರಸೀಕೆರೆ, ಬೇಲೂರು, ಚನ್ನರಾಯಪಟ್ಟಣ, ಹಾಸನ, ಹೊಳೆನರಸೀಪುರ, ಸಕಲೇಶಪುರ ತಾಲೂಕುಗಳಿಗೆ ಹಂಚಿಕೆಯಾದ ಅನುದಾನದಲ್ಲಿ ವ್ಯತ್ಯಾಸ ಉಂಟಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


