ರಾಜ್ಯ

ಬಂಧಿಸಲು ಬಂದ ಪೊಲೀಸರ ಮೇಲೆ ಫೈರಿಂಗ್: ರೌಡಿ ಶೀಟರ್ ಬಂಧನ

ಬಂಧಿಸಲು ಬಂದ ಪೊಲೀಸರ ಮೇಲೆ ಕೊಲೆ ಆರೋಪಿ ಗುಂಡಿನ ದಾಳಿ ನಡೆಸಿದ್ದು, ಆತ್ಮ ರಕ್ಷಣೆಗೆಂದು ಖಾಕಿಪಡೆ ಸಹ ಆರೋಪಿಗಳ ಮೇಲೆ ಫೈರಿಂಗ್ ನಡೆಸಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ...

ಬಂಧಿಸಲು ಬಂದ ಪೊಲೀಸರ ಮೇಲೆ ಫೈರಿಂಗ್: ರೌಡಿ ಶೀಟರ್ ಬಂಧನ
ಸಂಗ್ರಹ ಚಿತ್ರ
Published On :
ಬೆಂಗಳೂರು: ಬಂಧಿಸಲು ಬಂದ ಪೊಲೀಸರ ಮೇಲೆ ಕೊಲೆ ಆರೋಪಿ ಗುಂಡಿನ ದಾಳಿ ನಡೆಸಿದ್ದು, ಆತ್ಮ ರಕ್ಷಣೆಗೆಂದು ಖಾಕಿಪಡೆ ಸಹ ಆರೋಪಿಗಳ ಮೇಲೆ ಫೈರಿಂಗ್ ನಡೆಸಿದ ಘಟನೆ ಭಾನುವಾರ ಬೆಳಿಗ್ಗೆ ನಡೆದಿದೆ. 
ಕೆ.ಆರ್.ಪುರ ನಿವಾಸಿಗಳಾದ ನವೀನ್ ಅಲಿಯಾಸ್ ಅಪ್ಪು ಹಾಗೂ ಗಿರೀಶ್ ಅಲಿಯಾಸ್ ಗಿರಿ ಗುಂಡೇಟು ತಿಂದ ಆರೋಪಿಗಳಾಗಿದ್ದಾರೆ. ಘಟನೆಯಲ್ಲಿ ಪೇದೆ ಮುನಿರಾಜು ಎಂಬುವವರ ಕೈಗೆ ಗಾಯಗಳಾಗಿದ್ದು. ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. 
ಇಬ್ಬರು ರೌಡಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ. 
ಬಂಧಿತ ಆರೋಪಿ ಅಪ್ಪು ಬಿಬಿಎಂಪಿ ಮಾಜಿ ಕೌನ್ಸಿಲರ್ ಪತಿ ಸಿರಪುರ ಶ್ರೀನಿವಾಸ್ ಅವರ ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದ. 2014ರ ಮಾರ್ಚ್ ನಲ್ಲಿ ಆರೋಪಿಯನ್ನು ಬಂಧನಕ್ಕೊಳಪಡಿಸಲಾಗಿತ್ತು. 2 ತಿಂಗಳ ಬಳಿಕ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ. ಬಿಡುಗಡೆಗೊಂಡ ಬಳಿಕವೂ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಳಿದ್ದಾರೆ. 
ಅ.13 ರಂದು ಆರೋಪಿಗಳಾದ ಅಪ್ಪು ಹಾಗೂ ಗಿರೀಶ್ ಚೇತನ್ ಎಂಬ ವ್ಯಕ್ತಿಯನ್ನು ಅಪಹಣ ಮಾಡಿದ್ದರು. ಖಾಸಗಿ ಕಂಪನಿಯ ಉದ್ಯೋಗಿ ಚೇತನ್ ತನ್ನ ಸ್ನೇಹಿತ ವಿನಯ್ ಎಂಬುವವರನ್ನು ರಾತ್ರಿ 12 ಗಂಟೆ ಸುಮಾರಿಗೆ ಹೆಬ್ಬಾಳದಿಂದ ಕೆ.ಆರ್.ಪುರದ ಬಸವನಪುರಕ್ಕೆ ಬಿಟ್ಟು ವಾಪಸ್ ಬೈಕ್ ನಲ್ಲಿ ಮಹಾಲಕ್ಷ್ಮೀ ಲೇ ಔಟ್'ನ ತಮ್ಮ ಮನೆಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ದಾರಿ ತಪ್ಪಿದ ಪರಿಣಾಮ ಅಲ್ಲಿಯೇ ಇದ್ದ ಆರೋಪಿ ಅಪ್ಪು ಮನೆಯ ಸಮೀಪ ಹೋಗಿ ಹೆಬ್ಬಾಳ ಕಡೆ ಹೋಗುವ ಅಪ್ಪು ಬಳಿ ದಾರಿ ಕೇಳಿದ್ದ. ವಿಳಾಸ ಕೇಳಲು ಬಂದಿರುವ ವ್ಯಕ್ತಿ ತನ್ನ ವಿರೋಧಿ ಹರೀಶ್ ಗ್ಯಾಂಗ್ ನವನೇ ಆಗಿದ್ದು. ನನ್ನ ಮಾಹಿತಿ ಸಂಗ್ರಹಿಸಲು ಬಂದಿರಬಹುದು ಎಂದು ತಪ್ಪಾಗಿ ಭಾವಿಸಿ ಚೇತನ್'ನ್ನು ಆರೋಪಿ ಅಪಹರಿಸಿ ತನ್ನ ಮನೆಯಲ್ಲಿ ಇಟ್ಟುಕೊಂಡಿದ್ದ. 
ಮರುದಿನ ಮುಂಜಾನೆ ತನ್ನ ಮನೆಗೆ ತನ್ನ ಸಹಚರರನ್ನು ಕರೆಯಿಸಿಕೊಂಡು ಮಾರಕಾಸ್ತ್ರಗಳಿಂದ ಚೇತನ್ ಮೇಲೆ ಹಲ್ಲೆ ನಡೆಸಿ ಹತ್ಯೆ ಮಾಡಿದ್ದರು. ನಂತರ ಮೃತ ದೇಹವನ್ನು ಹೊಸಕೋಟೆ ತಾಲೂಕಿನ ದೊಡ್ಡದೇವನಹಳ್ಳಿ ಗ್ರಾಮದ ನೀಲಗಿ ತೋಪಿನಲ್ಲಿ ಎಸೆದು ಬೆಂಕಿ ಹಾಕಿ ಸುಟ್ಟು ಹಾಕಿ, ಆರೋಪಿಗಳು ತಲೆಮರೆಸಿಕೊಂಡಿದ್ದರು.
ಆರೋಪಿಗಳ ಬಂಧನಕ್ಕೆ  ವೈಟ್'ಫೀಲ್ಡ್ ವಿಭಾಗದ ಡಿಸಿಪಿ ಅಬ್ದುಲ್ ಅಹದ ಅವರು ಮೂರು ವಿಶೇಷ ತಂಡ ರಚಿಸಿದ್ದರು. ಈ ಪೈಕಿ 6 ಮಂದಿಗಳನ್ನು ಬಂಧಿಸಿದ್ದ ತಂಡ ಪ್ರಮುಖ ಆರೋಪಿಗಳಿಗಾಗಿ ಬಲೆ ಬೀಸಿತ್ತು. ಭಾನುವಾರ ಬೆಳಿಗ್ಗೆ ರೌಡಿಗಳಾದ ನವೀನ್ ಮತ್ತು ಗಿರೀಶ್ ಬೈಕ್ ನಲ್ಲಿ ಕಾಡುಗೋಡಿ ಕಡೆ ಹೋಗುತ್ತಿರುವ ಬಗ್ಗೆ ಕೆ.ಆರ್.ಪುರ ಇನ್ಸ್'ಪೆಕ್ಟರ್ ಜಯರಾಜ್ ಅವರಿಗೆ ಮಾಹಿತಿ ಲಭಿಸಿತ್ತು. 
ಕೂಡಲೇ ಕಾರ್ಯ ಪ್ರವೃತ್ತರಾದ ಪೊಲೀಸರು ಬೆಳಿಗ್ಗೆ 6 ಗಂಟೆ ಸುಮಾರಿಗೆ ಕಾಟನಲ್ಲೂರು ಗೇಟ್ ಸಮೀಪ ಹೊಸಕೊಟೆ-ಕಾಡುಗೋಡಿ ಮುಖ್ಯ ರಸ್ತೆಯ ಖಾಜಿಸೊನ್ನನಹಳ್ಳಿ ರಸ್ತೆಯಲ್ಲಿ ಪರಾರಿಯಾಗಲು ಯತ್ನಿಸಿದಾಗ ಆರೋಪಿಗಳ ಬೈಕ್'ಗೆ ಪೊಲೀಸ್ ಜೀಪ್ ಅಡ್ಡ ಹಾಕಿದ್ದರು. 
ಈ ವೇಳೆ ಆರೋಪಿ ನವೀನ್ ಪೊಲೀಸರ ಮೇಲೆ 3 ಸುತ್ತು ಗುಂಡು ಹಾರಿಸಿದ್ದಾರೆ. ಜೀಪ್ ಹಿಂಭಾಗ ಗುಂಡು ತಗುಲಿ ಜಖಂಗೊಂಡಿದೆ. ಮತ್ತೊಬ್ಬ ಆರೋಪಿ ಗಿರೀಶ್ ತನ್ನನ್ನು ಹಿಡಿಯಲು ಬಂದ ಪೇದೆ ಮುನಿರಾಜು ಅವರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾನೆ. ಕೂಡಲೇ ರಕ್ಷಣೆಗಾಗಿ ಇನ್ಸ್'ಪೆಕ್ಟರ್ ಜಯರಾಜ್ ಇಬ್ಬರು ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಆರೋಪಿಗಳನ್ನು ಕೆ.ಆರ್.ಪುರ ಸರ್ಕಾರಿ ಆಸ್ಪತ್ರೆಗ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.