ರಾಜ್ಯ

ರಾಜ್ಯಾದ್ಯಂತ ಇಂದು ಟಿಪ್ಪು ಜಯಂತಿ, ತೀವ್ರ ಪ್ರತಿಭಟನೆ, ನಿಷೇಧಾಜ್ಞೆ ಜಾರಿ

ಹಿಂದೆ ಮೈಸೂರು ರಾಜ್ಯವನ್ನು ಆಳಿದ ಟಿಪ್ಪು ಜಯಂತಿಯನ್ನು ಶನಿವಾರ ಕರ್ನಾಟಕದಾದ್ಯಂತ ಆಚರಿಸುತ್ತಿರುವುದರಿಂದ ಯಾವುದೇ ಕೋಮುಗಲಭೆ...

ರಾಜ್ಯಾದ್ಯಂತ ಇಂದು ಟಿಪ್ಪು ಜಯಂತಿ, ತೀವ್ರ ಪ್ರತಿಭಟನೆ, ನಿಷೇಧಾಜ್ಞೆ ಜಾರಿ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ಹಿಂದೆ ಮೈಸೂರು ರಾಜ್ಯವನ್ನು ಆಳಿದ ಟಿಪ್ಪು ಜಯಂತಿಯನ್ನು ಶನಿವಾರ ಕರ್ನಾಟಕದಾದ್ಯಂತ ಆಚರಿಸುತ್ತಿರುವುದರಿಂದ ಯಾವುದೇ ಕೋಮುಗಲಭೆ, ಹಿಂಸಾಚಾರಗಳು  ನಡೆಯದಂತೆ ನಿಗಾವಹಿಸಲು ಭದ್ರತೆಯನ್ನು ಕೈಗೊಳ್ಳಲಾಗಿದೆ.

ಮಡಿಕೇರಿಯ ಕೋಟೆ ಆವರಣದಲ್ಲಿ ಏರ್ಪಡಿಸಿರುವ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿದ ಶಾಸಕ ಎಂ ಪಿ ಅಪ್ಪಚ್ಚು ರಂಜನ್ ಹಾಗೂ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಸೇರಿ ಹಲವರನ್ನು ಪೊಲೀಸರು ಬಂಧಿಸಿದ್ದಾರೆ.

ಇಂದು ರಾಜ್ಯ ಸರ್ಕಾರ ಆಚರಿಸುತ್ತಿರುವ ಟಿಪ್ಪು ಜಯಂತಿ ವಿರೋಧಿಸಿ ಬಿಜೆಪಿ ಹಾಗೂ ಹಿಂದೂಪರ ಸಂಘಟನೆಗಳು ಬೆಂಗಳೂರು ಸೇರಿದಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಪ್ರತಿಭಟನೆ ನಡೆಸಲು ಸಜ್ಜಾಗಿರುವುದರಿಂದ ಕೊಡಗು, ಚಿಕ್ಕಮಗಳೂರು, ಚಿತ್ರದುರ್ಗ, ದಕ್ಷಿಣ ಕನ್ನಡ ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ನಿಷೇಧಾಜ್ಞೆ ಜಾರಿಯಲ್ಲಿದೆ.

ಟಿಪ್ಪು ಜಯಂತಿಗೆ ಬಿಜೆಪಿಯಿಂದ ತೀವ್ರ ವಿರೋಧವಿದ್ದರೂ ಕೂಡ ಆಡಳಿತಾರೂಢ ಮೈತ್ರಿಪಕ್ಷ ಕಾಂಗ್ರೆಸ್ ಮತ್ತು ಜೆಡಿಎಸ್ ಆಚರಣೆಗೆ ಮುಂದಾಗಿದೆ. ಬೆಂಗಳೂರು, ಮೈಸೂರು, ಮಂಡ್ಯ, ಕೊಡಗು, ಮಂಗಳೂರು ಸೇರಿದಂತೆ ರಾಜ್ಯಾದ್ಯಂತ ಇಂದು ಹೆಚ್ಚುವರಿ ಪೊಲೀಸ್ ಪಡೆಯನ್ನು ಭದ್ರತೆಗೆ ನಿಯೋಜಿಸಿದ್ದೇವೆ, ಟಿಪ್ಪು ಜಯಂತಿ ಆಚರಣೆ ಶಾಂತಿಯುತವಾಗಿ ಮುಕ್ತಾಯವಾಗಬೇಕೆಂಬುದು ನಮ್ಮ ಆಶಯ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ.

ಕೊಡಗಿನ ಟಿಪ್ಪು ಜಯಂತಿ ವಿರೋಧಿ ಹೋರಾಟ ಸಮಿತಿ ಇಂದು ಜಿಲ್ಲಾ ಬಂದ್‌ಗೆ ಕರೆ ನೀಡಿದ್ದು, ಮುಂಜಾಗ್ರತಾ ಕ್ರಮವಾಗಿ ಖಾಸಗಿ ಬಸ್‌, ಆಟೋಗಳ ಸಂಚಾರ ಸ್ಥಗಿತಗೊಳಿಸಲಿವೆ. ಆದರೆ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿಲ್ಲ.

ಇದೆಲ್ಲದರ ಮಧ್ಯೆ ಇಂದು ವಿಧಾನಸೌಧದ ಬ್ಯಾಂಕ್ವೆಟ್‌ ಹಾಲ್‌ನಲ್ಲಿ ಮುಖ್ಯ ಸಮಾರಂಭ ಜರುಗಲಿದ್ದು, ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಗೈರುಹಾಜರಿಯಲ್ಲಿ ಉಪಮುಖ್ಯಮಂತ್ರಿ ಡಾ. ಜಿ.ಪರಮೇಶ್ವರ್‌ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮಕ್ಕೆ 2000 ಮಂದಿಗೆ ಆಹ್ವಾನ ನೀಡಲಾಗಿದೆ.

ಆದರೆ ಇಂದಿನ ರಾಜ್ಯ ಸರ್ಕಾರದ ಕಾರ್ಯಕ್ರಮದಿಂದ ಜೆಡಿಎಸ್ ನಾಯಕರು ದೂರವುಳಿದಿದ್ದಾರೆ. ಸರ್ಕಾರದ ಅಧಿಕೃತ ಆಹ್ವಾನ ಪತ್ರಿಕೆಯಲ್ಲಿ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿಯವರ ಹೆಸರೇ ಇಲ್ಲ. ಈ ಬಗ್ಗೆ ಜೆಡಿಎಸ್ ನಾಯಕರನ್ನು ಕೇಳಿದರೆ ವೈದ್ಯರ ಸಲಹೆ ಮೇರೆಗೆ ಇಂದಿನಿಂದ ಮೂರು ದಿನಗಳ ಕಾಲ ಮುಖ್ಯಮಂತ್ರಿಗಳು ವಿಶ್ರಾಂತಿ ತೆಗೆದುಕೊಳ್ಳುತ್ತಿದ್ದಾರೆ ಎನ್ನುತ್ತಾರೆ.

ನವೆಂಬರ್ 11ರವರೆಗೆ ಮುಖ್ಯಮಂತ್ರಿಗಳ ಅಧಿಕೃತ ಕಾರ್ಯಕ್ರಮಗಳು ಯಾವುದೂ ಇಲ್ಲ. ಅವರು ತಮ್ಮ ಕುಟುಂಬದವರ ಜೊತೆ ಕಳೆಯಲಿದ್ದಾರೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.

18ನೇ ಶತಮಾನದ ವಿವಾದಿತ ಮೈಸೂರು ರಾಜ್ಯವನ್ನು ಆಳಿದ ಟಿಪ್ಪುವಿನ ಜಯಂತಿಯನ್ನು 2015ರಲ್ಲಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಆಚರಿಸಲು ಪ್ರಾರಂಭಿಸಿತು.

ನಿಷೇಧಾಜ್ಞೆಯ ನಡುವೆಯೂ ಚಿತ್ರದುರ್ಗದಲ್ಲಿ ನಿನ್ನೆ ಪ್ರತಿಭಟನೆಗೆ ಯತ್ನಿಸಿದ ಶಾಸಕ ತಿಪ್ಪಾರೆಡ್ಡಿ ಸೇರಿದಂತೆ 54 ಮಂದಿ ಬಿಜೆಪಿ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿ ನಿನ್ನೆ ಬಿಡುಗಡೆಗೊಳಿಸಿದರು. ಚಿಕ್ಕಮಗಳೂರಲ್ಲೂ ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಪ್ರತಿಭಟನೆಗೆ ಯತ್ನಿಸಿದ 30ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆಗೊಳಿಸಲಾಯಿತು.

ರಾಯಚೂರು ನಗರದಲ್ಲೂ ಪ್ರತಿಭಟನಾನಿರತರನ್ನು ಪೊಲೀಸರು ಬಂಧಿಸಿ ಬಳಿಕ ಬಿಡುಗಡೆಗೊಳಿಸಿದರು. ಬೆಳಗಾವಿಯಲ್ಲಿ ಟಿಪ್ಪು ಜಯಂತಿ ವಿರೋಧಿಸಿ ಪ್ರತ್ಯೇಕ ಪ್ರತಿಭಟನೆ ನಡೆಸಿದ ಬಿಜೆಪಿ ಮತ್ತು ವಿಶ್ವ ಹಿಂದೂ ಪರಿಷತ್‌ ಕಾರ್ಯಕರ್ತರು ಜಿಲ್ಲಾಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಬಾಗಲಕೋಟೆ, ಕೊಪ್ಪಳ, ಹಾವೇರಿ, ಗದಗ, ಕಾರವಾರ, ಶಿವಮೊಗ್ಗ, ದಾವಣಗೆರೆ, ಉಡುಪಿ, ಮಡಿಕೇರಿ, ಮಂಗಳೂರು, ಉಡುಪಿ, ಬೀದರ್‌, ಯಾದಗಿರಿ, ಕಲಬುರಗಿ, ಹಾಸನ, ರಾಮನಗರ, ತುಮಕೂರು, ಮೈಸೂರು, ಚಾಮರಾಜನಗರ, ದಾವಣಗೆರೆ, ಚಿಕ್ಕಮಗಳೂರು, ಕೋಲಾರ ನಗರಗಳಲ್ಲಿ ಪ್ರತಿಭಟನೆಗಳು ನಡೆದಿದ್ದು ಮೈತ್ರಿ ಸರ್ಕಾರದ ನಿಲುವಿಗೆ ಖಂಡನೆ ವ್ಯಕ್ತವಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.