ರಾಜ್ಯ

ರೈತರ ಸಾಲಮನ್ನಾ ಮಾಡದಿದ್ದರೆ ರಾಜಕೀಯ ನಿವೃತ್ತಿ, ಬುಧವಾರ ನಿರ್ಧಾರ ಪ್ರಕಟ: ಸಿಎಂ ಕುಮಾರಸ್ವಾಮಿ

ನಾನು ಎಲ್ಲಿಯೂ ರೈತರ ಸಾಲಮನ್ನಾ ಮಾಡುವುದಿಲ್ಲ ಹೇಳಿಲ್ಲ.. ನನ್ನ ಹೇಳಿಕೆಗಳನ್ನು ಬಿಜೆಪಿ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿಕೊಂಡು ಬಳಸಿಕೊಳ್ಳುತ್ತಿದೆ ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.

ರೈತರ ಸಾಲಮನ್ನಾ ಮಾಡದಿದ್ದರೆ ರಾಜಕೀಯ ನಿವೃತ್ತಿ, ಬುಧವಾರ ನಿರ್ಧಾರ ಪ್ರಕಟ: ಸಿಎಂ ಕುಮಾರಸ್ವಾಮಿ
ದೆಹಲಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ
Published On :
ನವದೆಹಲಿ: ನಾನು ಎಲ್ಲಿಯೂ ರೈತರ ಸಾಲಮನ್ನಾ ಮಾಡುವುದಿಲ್ಲ ಹೇಳಿಲ್ಲ.. ನನ್ನ ಹೇಳಿಕೆಗಳನ್ನು ಬಿಜೆಪಿ ತಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿಕೊಂಡು ಬಳಸಿಕೊಳ್ಳುತ್ತಿದೆ ಎಂದು ಸಿಎಂ ಎಚ್ ಡಿ ಕುಮಾರಸ್ವಾಮಿ ಹೇಳಿದ್ದಾರೆ.
ದೆಹಲಿಯಲ್ಲಿ ಪ್ರಧಾನಿ ಮೋದಿ ಅವರ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಕುಮಾರಸ್ವಾಮಿ ಅವರು, ನಾನು ನನ್ನ ಕೆಲವು ಭಾವನೆಗಳನ್ನು ಮುಕ್ತವಾಗಿ ಮಾತನಾಡುತ್ತೇನೆ. ಆದರೆ, ನನ್ನ ಹೇಳಿಕೆಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ತಿರುಚಿ ಬಳಸಿಕೊಳ್ಳುತ್ತಿದ್ದೀರಿ. ಹೀಗೆ ಮಾಡಬೇಡಿ ಎಂದು ಕಿಡಿಕಾರಿದರು. 'ಕರ್ನಾಟಕದಲ್ಲಿ ಜನರೊಂದಿಗೆ ನಾನು ಸದಾ ಸೌಜನ್ಯದಿಂದ ಮಾತನಾಡುತ್ತೇನೆ. ಅದು ನನ್ನ ಗುಣ. ರೈತರ ಸಾಲಮನ್ನಾ ಸಾಧ್ಯವಿಲ್ಲ ಎಂದು ಹೇಳಿಯೇ ಇಲ್ಲ. ಆದರೆ, ಕಾಂಗ್ರೆಸ್ ಒಪ್ಪಿಗೆ ಪಡೆಯಬೇಕು ಎಂದಷ್ಟೇ ನಾನು ಹೇಳುತ್ತಿದ್ದೇನೆ ಎಂದು ಹೇಳಿದರು.
ಇದನ್ನು ತಿರುಚಿ ಹೇಳಿಕೆಗಳನ್ನು ಪ್ರಕಟಿಸಲಾಗುತ್ತಿದೆ. ವಾಸ್ತವ ಅರಿತುಕೊಂಡು ವಿಶ್ಲೇಷಣೆ ಮಾಡಿ. ವಿಷಯಗಳನ್ನು ತಿರುಚಬೇಡಿ. ನಾಡಿನ ರೈತ ಬಂಧುಗಳಿಗೆ ನಾನು ನೆರವಾಗಲಿದ್ದೇನೆ. ಆದರೆ, ನನಗೆ ಸಮಯಾವಕಾಶ ಬೇಡವೇ? ಸ್ವಲ್ಪ ತಾಳ್ಮೆ ಬೇಕಲ್ಲವೇ? ನಾನು ಸುಮ್ಮನೆ ಕೂರಲು ಯಡಿಯೂರಪ್ಪ ಅಲ್ಲ. ಸಾಲ ಮನ್ನಾಕ್ಕೆ ಸೂಕ್ತ ಕ್ರಮ ಕೈಗೊಳ್ಳಲಿದ್ದೇನೆ. ನಾನು ಹಾಕಿಕೊಂಡಿರುವ ಸೂತ್ರಗಳನ್ನು ಬುಧವಾರ ಜನರ ಮುಂದೆ ಬೆಂಗಳೂರಿನಲ್ಲಿ ಪ್ರಸ್ತುತಪಡಿಸಲಿದ್ದೇನೆ. ಯಾರೂ ಆತಂಕ ಪಡುವ ಅಗತ್ಯ ಇಲ್ಲ ಎಂದು ಹೇಳಿದರು.
ಸಾಲಮನ್ನಾ ಮಾಡದಿದ್ದರೆ ರಾಜಕೀಯ ನಿವೃತ್ತಿ
ಇದೇ ವೇಳೆ ನನ್ನ ಕರ್ನಾಟಕದ ಜನರಿಗೆ ನಾನು ವಂಚನೆ ಮಾಡುವುದಿಲ್ಲ ಎಂದು ಹೇಳಿದ ಕುಮಾರಸ್ವಾಮಿ ಅವರು, ಜನರ ಹೆಸರಿನಲ್ಲಿ ನಾನು ಪ್ರಮಾಣ ಮಾಡಿ ಅಧಿಕಾರ ಸ್ವೀಕರಿಸಿದ್ದೇನೆ. ನಾನು ಬಹಳ ಸೂಕ್ಷ್ಮ ಜೀವಿ. ನನ್ನ ಮಾತನ್ನು ನಡೆಸಿಕೊಟ್ಟಿಲ್ಲ ಎಂದರೆ ರಾಜೀನಾಮೆ ಕೊಟ್ಟು ಹೋಗುತ್ತೇನೆ. ಅಷ್ಟು ಮಾತ್ರವಲ್ಲ ರಾಜಕೀಯದಿಂದಲೇ ನಿವೃತ್ತಿ ಪಡೆಯುತ್ತೇನೆ. ಈ ಬಗ್ಗೆ ಕೇಂದ್ರ ಸರ್ಕಾರದ ಸಹಕಾರ ಕೋರಿ ಪ್ರಧಾನಿ ಅವರಿಗೂ ಮನವಿ ಸಲ್ಲಿಸಿದ್ದೇನೆ. ರಾಜ್ಯದಲ್ಲಿರುವ ಥರ್ಮಲ್ ಪ್ಲಾಂಟ್‌ನಲ್ಲಿ ವಿದ್ಯುತ್ ಉತ್ಪಾದಿಸಲು ಕಲ್ಲಿದ್ದಲು ಬೇಕಿದೆ. ಕಲ್ಲಿದ್ದಲು ಸಚಿವಾಲಯಕ್ಕೆ ಅವರು ನಿರ್ದೇಶಿಸಬೇಕು ಎಂದು ವಿನಂತಿಸಿದ್ದೇನೆ. ಪ್ರಧಾನಿ ಮೋದಿ ಅವರು ನನಗೆ ಹಲವು ಉತ್ತಮ ಸಲಹೆಗಳನ್ನು ಕೊಟ್ಟಿದ್ದಾರೆ. ಅದಕ್ಕೆ ನಾನು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಕುಮಾರಸ್ವಾಮಿ ತಿಳಿಸಿದರು.
ಬಿಜೆಪಿ ವಾಗ್ದಾಳಿಯಿಂದ ವಿಚಲಿತನಾಗಿಲ್ಲ
ಇದೇ ವೇಳೆ ಬಿಜೆಪಿ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ, ಬಿಜೆಪಿ ನಾಯಕರ ಹೇಳಿಕೆಗಳಿಂದ ನಾನು ವಿಚಲಿತನಾಗಿಲ್ಲ. ನಾನು ಯಾವತ್ತೂ ರೈತರ ಸಾಲ ಮನ್ನಾ ಮಾಡಲ್ಲ ಅಂತಾ ಹೇಳಿಲ್ಲ. ಅಧಿಕಾರಕ್ಕೆ ಬಂದು 24 ಗಂಟೆಯೊಳಗೆ ಸಾಲ ಮನ್ನಾ ಮಾಡೋದಾಗಿ ಹೇಳಿದ್ದೆ ನಿಜ. ಸಾಲ ಮನ್ನಾ ಮಾಡದಿದ್ದರೆ ರಾಜಕೀಯದಿಂದ ನಿವೃತ್ತಿ ಪಡೆಯೋದಾಗಿಯೂ ಹೇಳಿದ್ದೆ. ಆದರೆ ನನಗೆ ಸಮಯ ಬೇಕಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಾಲ ಮನ್ನಾ ಮಾಡಲು ಸಾಧ್ಯವಿಲ್ಲ ಅನ್ನೋ ಪದವನ್ನೇ ಬಳಸಿಲ್ಲ. ಯಾವುದೇ ತೀರ್ಮಾನ ತೆಗೆದುಕೊಳ್ಳುವ ಸಂದರ್ಭದಲ್ಲಿ ನನಗೆ ಬೆಂಬಲ ನೀಡಿದ್ದ ಕಾಂಗ್ರೆಸ್​​ ಜೊತೆ ಚರ್ಚೆ ಮಾಡುವುದು ಅಗತ್ಯ. ಸಾಲ ಮನ್ನಾ ವಿಚಾರದಲ್ಲಿ ಬಿಜೆಪಿ ಜನರ ಮುಂದೆ ಅಪಪ್ರಚಾರ ನಡೆಸುತ್ತಿದೆ. ರೈತರ ಸಾಲ ಮನ್ನಾ ಮಾಡ್ತೀನಿ ಅಂತಾ ಸ್ಪಷ್ಟವಾಗಿಯೇ ಹೇಳಿದ್ದೇನೆ. ನಂಗೆ ಉಸಿರಾಡಲಿಕ್ಕಾದರೂ ಸಮಯ ಕೊಡಬೇಕೋ? ಬೇಡವೋ? ಸುಮ್ಮನೆ ಕೂರಲಿಕ್ಕೆ ನಾನು ಯಡಿಯೂರಪ್ಪ ಅಲ್ಲ. ನನ್ನ ಬದ್ಧತೆ ಬಗ್ಗೆ ಬುಧವಾರ ನಾಡಿನ ಜನತೆ ಮುಂದೆ ಹೇಳುತ್ತೇನೆ.  ಸಮ್ಮಿಶ್ರ ಸರ್ಕಾರ ಆಗಿದ್ದರೂ ಇದು ನಿಮ್ಮ ಸರ್ಕಾರ, ಜನಗಳ ಸರ್ಕಾರ, ಯಾರೂ ಆತಂಕ ಅನುಮಾನಗಳಿಗೆ ಒಳಗಾಗಬೇಡಿ ಎಂದು ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.