ರಾಜ್ಯ

ಕಾವೇರಿ ಕುರಿತ ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ ಇಲ್ಲ

ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಬದ್ಧವಾಗಿರುವುದು ಒಳಿತು ಎಂದು ಕಾನೂನು ತಜ್ಞರು ಸಲಹೆಗಳನ್ನು ನೀಡಿದ್ದು, ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್'ಗೆ ಮೇಲ್ಮನವಿ ಸಲ್ಲಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ...

ಕಾವೇರಿ ಕುರಿತ ಸುಪ್ರೀಂ ತೀರ್ಪಿನ ವಿರುದ್ಧ ಮೇಲ್ಮನವಿ ಇಲ್ಲ
ಕಾವೇರಿ ತೀರ್ಪು ಹಿನ್ನಲೆಯಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲು ನಿನ್ನೆಯಷ್ಟೇ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಂಸದರ ಸಭೆ ಗಣ್ಯರು
Published On :
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದ ಕುರಿತಂತೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿಗೆ ಬದ್ಧವಾಗಿರುವುದು ಒಳಿತು ಎಂದು ಕಾನೂನು ತಜ್ಞರು ಸಲಹೆಗಳನ್ನು ನೀಡಿದ್ದು, ಈ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್'ಗೆ ಮೇಲ್ಮನವಿ ಸಲ್ಲಿಸದಿರಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. 
ಕಾವೇರಿ ತೀರ್ಪು ಹಿನ್ನಲೆಯಲ್ಲಿ ಮುಂದಿನ ತೀರ್ಮಾನ ಕೈಗೊಳ್ಳಲು ನಿನ್ನೆಯಷ್ಟೇ ವಿಧಾನಸೌಧದಲ್ಲಿ ಆಯೋಜಿಸಲಾಗಿದ್ದ ಸಂಸದರ ಸಭೆಯಲ್ಲಿ ಮೂಡಿದ ಒಮ್ಮತದ ತೀರ್ಮಾನವನ್ನು ಆಧರಿಸಿ ರಾಜ್ಯ ಸರ್ಕಾರ ಈ ರೀತಿಯ ನಿಲುವು ತಳೆದಿದೆ ಎಂದು ತಿಳಿದುಬಂದಿದೆ. 
ಸರ್ವ ಪಕ್ಷ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಜಲಸಂಪನ್ಮೂಲ ಸಚಿವೆ ಎಂ.ಬಿ.ಪಾಟೀಲ್ ಅವರು, ಕಾವೇರಿ ನದಿ ನೀರು ಹಂಚಿಕೆ ವಿವಾದದ ಬಗ್ಗೆ ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸುತ್ತಿರುವ ಹಿರಿಯ ವಕೀಲ ನಾರಿಮನ್ ಮತ್ತು ಕಾನೂನು ತಜ್ಞರ ತಂಡದ ಸಲಹೆಯನ್ನು ಸಭೆಯಲ್ಲಿ ಸಂಸದರ ಮುಂದಿಡಲಾಯಿತು. 

ನೀರು ಹಂಚಿಕೆ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಿಂದ ಕರ್ನಾಟಕಕ್ಕೆ ತಕ್ಕ ಮಟ್ಟಿಗೆ ಲಾಭ ಆಗಿದೆ. ಹೀಗಾಗಿ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದಿರಲು ಕಾನೂನು ತಂಡ ಸಲಹೆ ನೀಡಿತ್ತು. ಕಾನೂನು ತಜ್ಞರ ಸಲಹೆ ಪಾಲಿಸಲು ಸಭೆಯಲ್ಲಿದ್ದ ಸಂಸದರು ಒಪ್ಪಿದ್ದಾರೆ. ಆದ್ದರಿಂದ ಸುಪ್ರೀಂಕೋರ್ಟ್ ಆದೇಶ ಕುರಿತು ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. 

ಸುಪ್ರೀಂಕೋರ್ಟ್ ಕಾವೇರಿ ನಿರ್ವಹಣಾ ಮಂಡಳಿ ರಚಿಸುವುದನ್ನು ಕೇಂದ್ರ ಸರ್ಕಾರದ ವಿವೇಚನೆಗೆ ಬಿಟ್ಟಿದೆ. ಹೀಗಾಗಿ ಮುಂದಿನ ದಿನದಲ್ಲಿ ನಿರ್ವಹಣಾ ಮಂಡಳಿ ರಚಿಸುವುದು ಬೇಡ ಎಂದು ಕೇಂದ್ರಕ್ಕೆ ಒತ್ತಡ ಹೇರುವ ಬಗ್ಗೆ ಚರ್ಚಿಸಲಾಗಿದೆ. ಈಗಾಗಲೇ ನಿರ್ವಹಣಾ ಮಂಡಳಿ ರಚಿಸುವ ಬಗ್ಗೆ ನಮ್ಮ ನಿಲುವನ್ನು ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭಾ ಅವರು ಕೇಂದ್ರ ನಿರಾವರಿ ಕಾರ್ಯದರ್ಶಿಗಳಿಗೆ ತಿಳಿಸಿದ್ದಾರೆ. 

ನಿರ್ವಹಣಾ ಮಂಡಳಿ ಬದಲಿಗೆ, ಸಂಕಷ್ಟ ಪರಿಹಾರ ಸಮಿತಿ ರಚಿಸುವ ಬಗ್ಗೆ ರಾಜ್ಯ ಸರ್ಕಾರ ಒಲವು ಹೊಂದಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಅಂತಿಮ ತೀರ್ಮಾ ಕೈಗೊಳ್ಳಬೇಕಿದೆ ಎಂದಿದ್ದಾರೆ. 

ಕಾವೇರಿ ನದಿ ನೀರಿ ಹಂಚಿಗೆ ಬಗ್ಗೆ ಸುಪ್ರೀಂಕೋರ್ಟ್ ಫೆ.16 ರಂದು ಅಂತಿನ ತೀರ್ಪು ನೀಡಿತ್ತು. ತಮಿಳುನಾಡು ಹಾಗೂ ರಾಜ್ಯದ ನಡುವೆ ಕಾವೇರಿ ನೀರು ಹಂಚಿಕೆ ಬಗ್ಗೆ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನಲ್ಲಿ ತಮಿಳುನಾಡಿಗೆ 192 ಟಿಎಂಸಿ ಬದಲಿಗೆ 177.25 ಟಿಎಂಸಿ ನೀರು ಬಿಡಲು ಆದೇಶಿಸಿತ್ತು. ಇದರಿಂದ 14.75 ಟಿಎಂಸಿ ನೀರು ರಾಜ್ಯಕ್ಕೆ ಉಳಿಕೆಯಾಗಲಿದ್ದು, 4.75 ಟಿಎಂಸಿ ನೀರನ್ನು ಬೆಂಗಳೂರು ನಗರಕ್ಕೆ ಕುಡಿಯುವ ಉದ್ದೇಶಕ್ಕೆ ಬಳಸಿಕೊಳ್ಳಲು ನ್ಯಾಯಾಲಯ ಆದೇಶ ನೀಡಿದೆ. 

ಇದೀಗ ಸುಪ್ರೀಂಕೋರ್ಟ್ ಆದೇಶಕ್ಕೆ ಸುಮ್ಮನಿರಬೇಕೋ ಅಥವಾ ಪುನರ್ ಪರಿಶೀಲನೆ ಅರ್ಜಿ ಸಲ್ಲಿಸಬೇಕೇ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದದ್ದು, ಈ ವೇಳೆ ಸದಸ್ಯರೆಲ್ಲರೂ ಮೇಲ್ಮವಿ ಸಲ್ಲಿಸಬಾರದು ಎಂಬ ಕಾನೂನು ತಜ್ಞರ ಸಲಹೆಗೆ ಒಪ್ಪಿಗೆ ನೀಡಿದ್ದಾರೆ. 

ಸಭೆಯಲ್ಲಿ ಕೇಂದ್ರ ಸಚಿವ ಅನಂತ್ ಕುಮಾರ್, ಸದಾನಂದ ಗೌಡ, ಸಚಿವ ಟಿ.ಬಿ.ಜಯಚಂದ್ರ, ಕೆ.ಜೆ.ಜಾರ್ಜ್, ಸಂಸದರಾದ ಪ್ರಹ್ಲಾದ್ ಜೋಶಿ, ಪಿಸಿ ಮೋಹನ್, ಪ್ರತಾಪ್ ಸಿಂಹ, ಕುಪೇಂದ್ರ ರೆಡ್ಡಿ, ಎಂ.ಬಿ. ಪಾಟೀಲ್, ರಾಜ್ಯ ಕಾರ್ಯದರ್ಶಿ ರತ್ನಪ್ರಭಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾನೂನು ತಜ್ಞರು ಭಾಗವಹಿಸಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.