ಬೆಂಗಳೂರು: ಬಾರ್ ನಲ್ಲಿ ಬಿಲ್ ಪಾವತಿಸುವ ಸಂಬಂಧ ಸ್ನೇಹಿತರ ಜಗಳ ಕೊಲೆಯಲ್ಲಿ ಅಂತ್ಯ
ಬಾರ್ ಒಂದರಲ್ಲಿ ಮದ್ಯ ಸೇವನೆ ಮಾಡಿ ಬಿಲ್ ಪಾವತಿಸುವ ಕ್ಷುಲ್ಲಕ ವಿಚಾರದಲ್ಲಿ ಪ್ರಾರಂಭವಾದ ಜಗಳ ಕೊಲೆಯಲ್ಲಿ ಮುಕ್ತಾಯ ಕಂಡಿದೆ.

Published On :
ಬೆಂಗಳೂರು: ಬಾರ್ ಒಂದರಲ್ಲಿ ಮದ್ಯ ಸೇವನೆ ಮಾಡಿ ಬಿಲ್ ಪಾವತಿಸುವ ಕ್ಷುಲ್ಲಕ ವಿಚಾರದಲ್ಲಿ ಪ್ರಾರಂಭವಾದ ಜಗಳ ಕೊಲೆಯಲ್ಲಿ ಮುಕ್ತಾಯ ಕಂಡಿದೆ. ಬೆಂಗಳೂರಿನ ಕಮರ್ಷಿಯಲ್ ಸ್ಟ್ರೀಟ್ ಬಾರ್ ಒಂದರಲ್ಲಿ ಗುರುವಾರ ಬೆಳಿಗ್ಗೆ ನಡೆದ ಘಟನೆಯಲ್ಲಿ ದಿನಗೂಲಿ ನೌಕರನೊಬ್ಬನನ್ನು ಅವನ ಸ್ನೇಹಿತನೇ ಹತ್ಯೆ ಮಾಡಿದ್ದಾನೆ.
ಭರತ್ ನಗರ ನಿವಾಸಿ ಅನಿಲ್ ಎಸ್.(24) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ. ಈತ ಅದೇ ಪ್ರದೇಶದ ನಿರ್ಮಾಣ ಹಂತದ ಕಟ್ಟಡವೊಂದರಲ್ಲಿ ಪೇಂಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದ. ಇನ್ನು ಆರೋಪಿಯನ್ನು ಶಿವಕುಮಾರ್ ಎಂದು ಪತ್ತೆ ಮಾಡಲಾಗಿದ್ದು ಈತ ಸಹ ಅದೇ ಕಟ್ಟಡದಲ್ಲಿ ಕೆಲಸ ಮಾಡುತ್ತಿದ್ದ. ಈತ ಶೇಶಾದ್ರಿಪುರಂ ನಿವಾಸಿಯಾಗಿದ್ದ ಎಂದು ಪೋಲೀಸರು ಮಾಹಿತಿ ನೀಡಿದ್ದಾರೆ.
ಬೆಳಿಗ್ಗೆ 10 ಗಂಟೆ ಸುಮಾರಿಗೆ ನಗರದ ನಾರಾಯಣ ಪಿಳ್ಳೈ ರಸ್ತೆಯ ಬಾರ್ ಒಂದರಲ್ಲಿ ಮದ್ಯ ಸೇವನೆಯಲ್ಲಿ ತೊಡಗಿದ್ದ ಗೆಳೆಯರು ಬಿಲ್ ಪಾವತಿ ವಿಚಾರವಾಗಿ ಜಗಳ ಆಡಿದ್ದಾರೆ. ಜಗಳ ತೀವ್ರಗೊಂಡಿದೆ. ಶಿವಕುಮಾರ್ ಹಾಗೂ ಅನಿಲ್ ಇಬ್ಬರೂ ಯಾರು ಬಿಲ್ ಪಾವತಿಸಬೇಕೆನ್ನುವುದನ್ನು ತೀರ್ಮಾನಿಸದೆ ’ನೀನು, ನೀನು’ ಎಂದು ಕಾದಾಡಿದ್ದಾರೆ.
ಇದಾಗಿ ಶಿವಕುಮಾರ್, ಅನಿಲ್ ಗೆ ಬಿಲ್ ಪಾವತಿಸಲು ಒತ್ತಾಯಿಸಿದ್ದಾನೆ. ಆಗ ಅನಿಲ್ ನಿರಾಕರಿಸಿದ್ದು ಉದ್ರೇಕಗೊಂಡ ಶಿವಕುಮಾರ್ ಅವನನ್ನು ಬಾರ್ ನಿಂದ ಹೊರಗೆಳೆದು ತಂದು ರಸ್ತೆಯಲ್ಲಿ ಬಿದ್ದ ಕಲ್ಲೊಂದನ್ನು ಎತ್ತಿ ಅನಿಲ್ ತಲೆಗೆ ಹೊಡೆದಿದ್ದಾನೆ. ಕಲ್ಲಿನ ಏಟಿನಿಂದ ಗಂಭೀರವಾಗಿ ಗಾಯಗೊಂಡ ಅನಿಲ್ ತಲೆಯಲ್ಲಿ ರಕ್ತಸ್ರಾವವಾಗಿ ಪ್ರಜ್ಞೆ ಕಳೆದುಕೊಂಡಿದ್ದಾನೆ. ಇದರ ಬಳಿಕ ಶಿವಕುಮಾರ್ ಸ್ಥಳದಿಂದ ಪರಾರಿಯಾಗಿದ್ದ ಎಂದು ಪೋಲೀಸರು ಹೇಳಿದರು.
ಇದನ್ನು ಕಂಡ ಬಾರ್ ಸಿಬ್ಬಂದಿ ಕಮರ್ಷಿಯಲ್ ಸ್ಟ್ರೀಟ್ ಪೋಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೋಲೀಸರು ಗಂಬೀರವಾಗಿ ಗಾಯಗೊಂಡ ಅನಿಲ್ ನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪ್ರಾಥಮಿಕ ತನಿಖೆ ವೇಳೆ ಶಿವಕುಮಾರ್ ಶೇಶಾದ್ರಿಪುರಂ ನಿವಾಸಿ ಎಂದು ತಿಳಿದ ಪೋಲೀಸರು ಶೇಶಾದ್ರಿಪುರಂ ಪೋಲೀಸರಿಗೆ ಮಾಹಿತಿ ತಿಳಿಸಿದರು. ಅಲ್ಲಿಂದ ಶೇಶಾದ್ರಿಪುರಂಪೋಲೀಸರು ಮನೆಯಲ್ಲಿ ಮಲಗಿದ್ದ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ’ಜಗಳದ ವೇಳೆ ನಾನು ಹಲ್ಲೆ ನಡೆಸಿದ್ದು ನಿಜ, ಇದು ಅನಿಲ್ ಸಾವಿಗೆ ಕಾರಣವಾಗುವುದೆಂದು ತಿಳಿದಿರಲಿಲ್ಲ’ ಎಂದು ಆರೋಪಿ ಪೋಲೀಸರಿಗೆ ಮಾಹಿತಿ ನೀಡಿದ್ದಾನೆ.
ಇದೀಗ ಶಿವಕುಮಾರ್ ನನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ತನಿಖೆ ಮುಂದುವರಿದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ಬೆಂಗಳೂರುBengaluruCommercial Street policeliquor billfriend killಮದ್ಯ ಬಿಲ್ಸ್ನೇಹಿತನ ಕೊಲೆಕಮರ್ಷಿಯಲ್ ಸ್ಟ್ರೀಟ್ ಪೊಲೀಸ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


