ಚುನಾವಣೆ ಸನ್ನಿಹದಲ್ಲಿ ತರಾತುರಿಯಲ್ಲಿ ಕಾಮಗಾರಿ ಉದ್ಘಾಟನೆ
ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ತಿಂಗಳು ಬಾಕಿ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತರಾತುರಿಯಲ್ಲೇ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ. ಕೆಲ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿದ್ದರೂ ಸಾರ್ವಜನಿಕ ಸೇವೆಗಾಗಿ ಮುಕ್ತಗೊಳಿಸಲಾಗುತ್ತಿದೆ.

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ಇನ್ನೂ ಒಂದು ತಿಂಗಳು ಬಾಕಿ ಇದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ತರಾತುರಿಯಲ್ಲೇ ಕಾಮಗಾರಿಗಳನ್ನು ಉದ್ಘಾಟಿಸುತ್ತಿದ್ದಾರೆ. ಕೆಲ ಕಾಮಗಾರಿಗಳು ಇನ್ನೂ ಪೂರ್ಣಗೊಳ್ಳದಿದ್ದರೂ ಸಾರ್ವಜನಿಕ ಸೇವೆಗಾಗಿ ಮುಕ್ತಗೊಳಿಸಲಾಗುತ್ತಿದೆ.
ಈ ಪರಿಸ್ಥಿತಿ ಬೆಂಗಳೂರು ಮಾತ್ರವಲ್ಲದೇ ಇಡೀ ರಾಜ್ಯಾದ್ಯಂತ ಕಂಡುಬರುತ್ತಿದೆ. ರಾಜ್ಯದ ಬಹುತೇಕ ನಗರಗಳಲ್ಲಿ ಪೂರ್ಣವಾಗದ ಕಾಮಗಾರಿಗಳನ್ನ ಉದ್ಘಾಟಿಸಲಾಗುತ್ತಿದೆ. ಇಂತಹ ಕಾಮಗಾರಿಗಳನ್ನು ಉದ್ಘಾಟಿಸಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವಲ್ಲಿ ಹಲವು ಸಚಿವರು ನಿರತರಾಗಿದ್ದಾರೆ.
ಚುನಾವಣಾ ನೀತಿ ಸಂಹಿತೆ ಜಾರಿಯಾದ ನಂತರ ರಸ್ತೆ ನಿರ್ಮಾಣ, ಕುಡಿಯುವ ನೀರಿನ ಸೌಲಭ್ಯ, ಮತ್ತಿತರ ಕಾಮಗಾರಿಗಳ ಉಧ್ಘಾಟನೆ ಮಾಡುವಂತಿಲ್ಲ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಒಕಳಿಪುರಂ ಸಿಗ್ನಲ್ ಮುಕ್ತ ಕಾರಿಡಾರ್, ಫ್ರೀಡಂಪಾರ್ಕ್ ಬಳಿ ಬಹುಹಂತದ ನಿಲುಗಡೆ , ಹೆಣ್ಣೂರು ಮೇಲ್ಸುತುವೆ. ಬೇಗೂರಿನಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಪರ್ಕ ಕಲ್ಪಿಸುವ ರಸ್ತೆ ಮತ್ತಿತರ ಕಾಮಗಾರಿಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಕಳೆದ ವಾರ ತರಾತುರಿಯಲ್ಲೇ ಉದ್ಘಾಟಿಸಿದ್ದಾರೆ.
ಈ ಪೈಕಿ ಕೆಲ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಆದರೂ ತರಾತುರಿಯಲ್ಲೇ ಕಾಮಗಾರಿ ಉದ್ಘಾಟಿಸಲಾಗಿದೆ.
ಕೆಂಗೇರಿ ಬಳಿ ನಿರ್ಮಿಸಲಾಗಿರುವ 60 ಮಿಲಿ ಸಾಮರ್ಥ್ಯದ ತ್ಯಾಜ್ಯ ಸಂಸ್ಕರಣಾ ಘಟಕ ಇನ್ನೂ ಕಾರ್ಯಾರಂಭ ಮಾಡದಿದ್ದರೂ ಮುಖ್ಯಮಂತ್ರಿ ಉದ್ಘಾಟಿಸಿದ್ದಾರೆ.
ಇದು ಧೀರ್ಘಕಾಲೀನ ಯೋಜನೆಯಾಗಿದ್ದು, ಪೂರ್ಣಗೊಳ್ಳಲು ಇನ್ನೂ ಹಲವು ದಿನಗಳೇ ಬೇಕಾಗುತ್ತದೆ. ಜೂನ್ ಅಥವಾ ಸೆಪ್ಬೆಂಬರ್ ವೇಳೆಗೆ ಇದೇ ಪೂರ್ಣಗೊಳ್ಳುವ ಸಾಧ್ಯತೆ ಇದೆ. ಆದರೆ , ಅದನ್ನು ಈಗಲೇ ಉದ್ಘಾಟಿಸಿದರೆ ನಾವು ಏನು ಮಾಡುವುದಕ್ಕೂ ಆಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ 4 ವರ್ಷ 12 ತಿಂಗಳು ನಿದ್ದೆಯಲ್ಲಿದ್ದು, ಚುನಾವಣೆ ಹತ್ತಿರ ಬರುತ್ತಿದ್ದಂತೆ ತರಾತುರಿಯಲ್ಲಿ ಇನ್ನೂ ಪೂರ್ಣಗೊಳ್ಳದ ಕಾಮಗಾರಿ ಉದ್ಘಾಟಿಸುತ್ತಿದ್ದಾರೆ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಆರೋಪಿಸಿದ್ದಾರೆ.
ಕಾರವಾರ
ಕಾರವಾರದಲ್ಲಿನ ರವೀಂದ್ರನಾಥ್ ಠ್ಯಾಗೂರ್ ಬೀಚ್ ನಲ್ಲಿ ಸುಮಾರು 2.60 ಕೋಟಿ ವೆಚ್ಚದಲ್ಲಿ ರಾಕ್ ಗಾರ್ಡನ್ ನಿರ್ಮಾಣ ಕಾಮಗಾರಿ ಇನ್ನೂ ಪೂರ್ಣಗೊಳ್ಳಲಿದ್ದರೂ ಕೈಗಾರಿಕಾ ಸಚಿವ ಆರ್ . ವಿ. ದೇಶಪಾಂಡೆ ಈಗಾಗಲೇ ಉದ್ಘಾಟಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆ ಕ್ಯಾಸ್ಟಲ್ ರಾಕ್ ಬಳಿ ನಿರ್ಮಾಣಗೊಳ್ಳುತ್ತಿರುವ ದೇಶದ ಮೊದಲ ಕ್ಯಾನೊಪಿ ವಾಕ್ ಸೇತುವೆಯನ್ನು ಇತ್ತೀಚಿಗೆ ದೇಶಪಾಡೆ ಉದ್ಘಾಟಿಸಿದ್ದಾರೆ. ಇದರ ಕಾಮಗಾರಿ ಕೂಡಾ ಇನ್ನೂ ಪೂರ್ಣಗೊಂಡಿಲ್ಲ. ಇಲ್ಲಿ ಕುಡಿಯುವ ನೀರು, ಶೌಚಾಲಯ ಮತ್ತಿತರ ಯಾವ ವ್ಯವಸ್ಥೆಯೂ ಒದಗಿಸಿಲ್ಲ.
ಕಲಬುರಗಿ ಜಿಲ್ಲೆಯಲ್ಲಿ ಯಾವುದೇ ಮೂಲಸೌಕರ್ಯ ಒದಗಿಸದಿದ್ದರೂ ಕಲಗಿ , ಕಮಲಾಪುರ, ಹಾಗೂ ಯಾಡ್ರಾಮಿ,ಶಹಬಾದ್ ಹೊಸ ತಾಲೂಕುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಶರಣ್ ಪ್ರಕಾಶ್ ಪಾಟೀಲ್ ಉದ್ಘಾಟಿಸಿದ್ದಾರೆ. ಕಟ್ಟಡ ಕಾಮಗಾರಿ ಪೂರ್ಣಗೊಳ್ಳದಿದ್ದರೂ ಕಲಬುರಗಿಯಲ್ಲಿನ ಟ್ರೂಮಾ ಕೇರ್ ಸೆಂಟರ್ ನ್ನು ಕೂಡಾ ಶರಣ ಪ್ರಕಾಶ್ ಪಾಟೀಲ್ ಫೆಬ್ರವರಿ 28 ರಂದೇ ಉದ್ಘಾಟಿಸಿದ್ದಾರೆ.
ಮಂಗಳೂರು
ಪವೂರು ಉಲ್ಯಾ ದ್ವೀಪದ ನಿವಾಸಿಗಳಿಗಾಗಿ ಮೋಟಾರ್ ಬೋಟ್ ವ್ಯವಸ್ಥೆಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು. ಟಿ. ಖಾದರ್ ಇತ್ತೀಚಿಗೆ ಉದ್ಘಾಟಿಸಿದ್ದಾರೆ. ಕದ್ರಿ ಪಾರ್ಕಿನಲ್ಲಿನ ಪೂಟಾಣಿ ರೈಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಉದ್ಘಾಟನೆಗೊಂಡಿದ್ದರೂ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ. ರೈಲ್ವೆ ಇಲಾಖೆಯಿಂದ ಅನುಮತಿಗಾಗಿ ಇನ್ನೂ ಕಾಯಲಾಗುತ್ತಿದೆ.
ಉಡುಪಿ
ಒಂದೂವರೆ ತಿಂಗಳಲ್ಲಿಯೇ ಸೀತಾ ನದಿ ಸೇತುವೆ ಉದ್ಘಾಟಿಸಲಾಗಿದೆ. 9 ಕೋಟಿ ವೆಚ್ಚದ ಈ ಸೇತುವೆಯನ್ನು 2016ರಲ್ಲಿ ಕೈಗೆತ್ತಿಕೊಂಡು 2017 ಡಿಸೆಂಬರ್ ನಲ್ಲಿ ಪೂರ್ಣಗೊಳಿಸಲಾಗಿದೆ.ಉಡುಪಿ ನಗರದಲ್ಲಿ ಒಳಚರಂಡಿ ವ್ಯವಸ್ಥೆ ವಿಸ್ತರಣೆ ಹಾಗೂ ಪೈಪ್ ಲೈನ್ ಯೋಜನೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜನವರಿ 8 ರಂದು ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ, ಈ ಎರಡು ಯೋಜನೆಗಳ ಟೆಂಡರ್ ಪ್ರಕ್ರಿಯೆ ಇನ್ನೂ ಆರಂಭವಾಗಿಯೇ ಇಲ್ಲ.
ಹಾವೇರಿ ಯಲ್ಲಿನ ಮಹಾನಗರ ಪಾಲಿಕೆ ಕಟ್ಟಡ ಇನ್ನೂ ಪೂರ್ಣಗೊಂಡಿಲ್ಲ. 4 ಕೋಟಿ ರೂ ವೆ್ಚ್ಚದಲ್ಲಿ ಇದರ ನಿರ್ಮಾಣ ವಾಗುತ್ತಿದ್ದು, 15 ದಿನಗಳಲ್ಲಿ ಕಟ್ಟಡ ಪೂರ್ಣಗೊಳಿಸಿದ ನಂತರ ಕಟ್ಟಡ ಉದ್ಘಾಟಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವ ರುದ್ರಪ್ಪ ಲಮಾಣಿ ಹೇಳುತ್ತಿದ್ದಾರೆ.
ಇವೆಷ್ಟೇ ಅಲ್ಲದೇ, ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹಲವು ಕಾಮಗಾರಿಗಳನ್ನು ತರಾತುರಿಯಲ್ಲೇ ಉದ್ಘಾಟಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


