ರಾಜ್ಯ

ನಾಗರಹೊಳೆ ಮೀಸಲು ಅರಣ್ಯದ ಹೊರಗಡೆ ಕಾಡ್ಗಿಚ್ಚು

ಕೊಡಗು ಜಿಲ್ಲೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಫೆಬ್ರವರಿ 25ರಿಂದಲೂ ಸಂಭವಿಸುತ್ತಿರುವ ಕಾಡ್ಗಿಚ್ಚಿನಿಂದ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ.

ನಾಗರಹೊಳೆ ಮೀಸಲು ಅರಣ್ಯದ ಹೊರಗಡೆ ಕಾಡ್ಗಿಚ್ಚು
ಕಾಡ್ಗಿಚ್ಚಿನಿಂದಾಗಿ ಸುಮಾರು 200 ಎಕರೆಗೂ ಅಧಿಕ ಪ್ರದೇಶ ಬೆಂಕಿಗಾಹುತಿಯಾಗಿರುವ ಚಿತ್ರ
Published On :

ಬೆಂಗಳೂರು: ಬೇಸಿಗೆ ಸಂದರ್ಭದಲ್ಲಿ ಪದೇ ಪದೇ ಉಂಟಾಗುವ ಕಾಡ್ಗಿಚ್ಚು ನಿಯಂತ್ರಿಸಿ ಅರಣ್ಯ ರಕ್ಷಿಸಲು ಅರಣ್ಯ ಇಲಾಖೆ ಇನ್ನಿಲ್ಲದಂತಹ ಪ್ರಯತ್ನ ನಡೆಸುತ್ತಿದ್ದರೂ ಕೊಡಗು ಜಿಲ್ಲೆಯ ಮೀಸಲು ಅರಣ್ಯ ಪ್ರದೇಶದಲ್ಲಿ ಫೆಬ್ರವರಿ 25ರಿಂದಲೂ ಸಂಭವಿಸುತ್ತಿರುವ ಕಾಡ್ಗಿಚ್ಚಿನಿಂದ ಭಾರಿ ಪ್ರಮಾಣದ ನಷ್ಟ ಉಂಟಾಗಿದೆ.

ಹತ್ತು ಹದಿನೈದು ದಿನಗಳಿಂದ ನಿರಂತರವಾಗಿ ಕಾಡ್ಗಿಚ್ಚು ಉಂಟಾಗಿದ್ದು  ನಾಗರಹೊಳೆ ರಾಷ್ಟ್ರೀಯ ಉದ್ಯಾನದ ಹೊರಭಾಗದಲ್ಲಿನ ಸುಮಾರು 200 ಎಕರೆಗೂ ಅಧಿಕ ಪ್ರದೇಶ ಬೆಂಕಿಗಾಹುತಿಯಾಗಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ಮಲ್ದಾರೆಯಿಂದ ದುಬಾರೆ ಆನೆಶಿಬಿರ ಹಾಗೂ ಆನೆಕಾಡಿನವರೆಗೂ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿಯ ಜ್ವಾಲೆ 60 ಅಡಿವರೆಗೂ ವ್ಯಾಪಿಸುತ್ತಿದೆ. ಇದು ರಸ್ತೆಯವರೆಗೂ ಕಾಣಿಸುತ್ತಿದೆ  ಎಂದು ನಮ್ಮ ಪ್ರತಿನಿಧಿ ವರದಿ ಮಾಡಿದ್ದಾರೆ.

 ಭಾರಿ ಬೆಂಕಿಯಿಂದಾಗಿ  ಬಿದಿರು, ಲ್ಯಾಂಟನಾ ಪೊದೆಗಳು ಮತ್ತಿತರ ವನ್ಯಸಂಪತ್ತು ಸುಟ್ಟು ಭಸ್ಮವಾಗಿದೆ.  ಪ್ರವಾಸಿಗರು ಆಗ್ಗಾಗೇ ಭೇಟ ನೀಡುವ ಹಾಗೂ ರಾಷ್ಟ್ರೀಯ ಹೆದ್ದಾರಿಗೆ ಸಮೀಪದಲ್ಲಿರುವ ಕೆಲ ಪ್ರದೇಶಗಳಲ್ಲಿ ಮಾತ್ರ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದ್ದು, ಕಾಡ್ಗಿಚ್ಚು ಉಂಟಾಗದಂತೆ ನೋಡಿಕೊಳ್ಳಲಾಗಿದೆ.

 ಸ್ಥಳೀಯ ಜನರು ಹಾಗೂ  ಅರಣ್ಯ ಇಲಾಖೆ ಸಿಬ್ಬಂದಿ ನಡುವಿನ   ಸಂಘರ್ಷದಿಂದ  ಪಾಲಿಬೆಟ್ಟ ಪ್ರದೇಶದಿಂದ ಬೇರೆಡೆಗೆ ಹೋಗಿ ಜನರು ನೆಲೆಸಿದ್ದಾರೆ. ಬುಡಕಟ್ಟು ಜನರು ಅಗರಬತ್ತಿ ಕಾರ್ಖಾನೆಗಾಗಿ ಮರ ಕಡಿಯುವುದು ನಡೆಯುತ್ತಲೇ ಇದ್ದು ಅರಣ್ಯ ಇಲಾಖೆ ಸಿಬ್ಬಂದಿ ಅಸಹಾಯಕರಾಗಿದ್ದಾರೆ  ಎಂದು ಪರಿಸರ ವಾದಿ ಮಾಚು ಮಾಚಯ್ಯ ಮ್ಯಾಕ್ಸ್ ಅಪಯ್ಯ ಹೇಳುತ್ತಾರೆ.

ಈ ಸಂದರ್ಭದಲ್ಲಿ  ಹುಲಿ, ಕರಡಿ ಮತ್ತಿತರ ವನ್ಯಜೀವಿಗಳು ನಾಗರಹೊಳೆಯಿಂದ ದುಬಾರೆ ಅರಣ್ಯಕ್ಕೆ ಬರುತ್ತಿವೆ. ಕುಶಾಲನಗರದಿಂದ ಸುಂಟಿಕೊಪ್ಪದವರೆಗೂ ಇದೇ ಪರಿಸ್ಥಿತಿ ಕಂಡುಬರುತ್ತಿದ್ದು ಜನತೆ ಆತಂಕಕ್ಕೊಳಗಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.