ಮಹಿಳೆಯರಿಗಾಗಿ ರಾಜ್ಯ ಸರ್ಕಾರ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಇಲ್ಲಿದೆ ಮಾಹಿತಿ
ದೇಶದಲ್ಲಿ ಮಹಿಳೆ, ಮಕ್ಕಳ ಸುರಕ್ಷತೆಯಾದರೆ ದೇಶವು ಅಭಿವೃದ್ಧಇ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದು, ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ...

Published On :
ಬೆಂಗಳೂರು: ದೇಶದಲ್ಲಿ ಮಹಿಳೆ, ಮಕ್ಕಳ ಸುರಕ್ಷತೆಯಾದರೆ ದೇಶವು ಅಭಿವೃದ್ಧಇ ಕಾಣಲು ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಹಲವಾರು ಉಪಕ್ರಮಗಳನ್ನು ಕೈಗೊಂಡಿದ್ದು, ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ.
ಮಹಿಳೆಯರಿಗಾಗಿ ಜಾರಿಗೆ ತಂದಿರುವ ಯೋಜನೆಗಳಿಗೆ ಗುಲಾಬಿ ಬಣ್ಣವನ್ನು ಸರ್ಕಾರ ಬಳಕೆ ಮಾಡಿಕೊಂಡಿದ್ದು, ಸರ್ಕಾರ ಜಾರಿಗೆ ತಂದಿರುವ ಹೊಸ ಯೋಜನೆಗಳ ಕುರಿತ ಮಾಹಿತಿ ಈ ಕೆಳಕಂಡಿಂತಿವೆ...
ಬಿಎಂಟಿಸಿ ಬಸ್ ಗಳಲ್ಲಿ ಪಿಂಕ್ ಸೀಟ್
ನಗರದಲ್ಲಿ ಒಟ್ಟಾರೆಯಾಗಿ 6,500 ಬಿಎಂಟಿಸಿ ಬಸ್ ಗಳು ಪ್ರತೀದಿನ್ಯ ಸಂಚಾರ ನಡೆಸುತ್ತಿದ್ದು, ಈ ಬಸ್ ಗಳಲ್ಲಿ ಮಹಿಳೆಯರಿಗಾಗಿ ಸೀಟುಗಳನ್ನು ಮೀಸಲಿರಿಸಲಾಗಿದೆ. ಮಹಿಳೆಯರಿಗೆ ಮೀಸಲಿರುವ ಆಸನದಲ್ಲಿ ಪುರುಷರು ಕುಳಿತು ಪ್ರಯಾಣಿಸುವ ಘಟನೆಗಳು ಹೆಚ್ಚಾಗಿರುವ ಹಿನ್ನಲೆಯಲ್ಲಿ ಇದಕ್ಕೆ ಕಡಿವಾಣ ಹಾಕಲು ಮುಂದಾದ ಸರ್ಕಾರದ ಬಿಎಂಟಿಸಿ ಸೇರಿ ಎಲ್ಲಾ ಸರ್ಕಾರಿ ಬಸ್ ಗಳಲ್ಲಿ ಮಹಿಳಾ ಆಸನಗಳಿಗೆ ಗುಲಾಬಿ ಬಣ್ಣ ಅಳವಡಿಸಲು ನಿರ್ಧರಿಸಿದೆ.
ನಮ್ಮ ಮೆಟ್ರೋದಲ್ಲಿ ಪಿಂಕ್ ಬಾಗಿಲು
ನಮ್ಮ ಮೆಟ್ರೋದಲ್ಲಿ ಎದುರಾಗುವ ಜನದಟ್ಟಣೆಯಿಂದ ಮಹಿಳೆಯರು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದರು. ಇದಕ್ಕೆ ಪರಿಹಾರವನ್ನು ನೀಡಿದ ಸರ್ಕಾರ ನಮ್ಮ ಮೆಟ್ರೋ ರೈಲಿನ ಮೊದಲ ಬೋಗಿಯ 2 ಬಾಗಿಲುಗಳನ್ನು ಪೀಕ್ ಅವರ್'ನಲ್ಲಿ ಮಹಿಳೆಯರಿಗೆ ಮೀಸಲಿಟ್ಟಿದೆ.
ಪಿಂಕ್ ಆಟೋಗಳು
ಮಹಿಳೆಯರಿಗೆ ಸುರಕ್ಷತೆ ಕಲ್ಪಿಸುವ ಉದ್ದೇಶದಿಂದ ಸರ್ಕಾರ ಪಿಂಕ್ ಆಟೋಗಳನ್ನು ರಸ್ತೆಗಿಳಿಸೋ ನಿರ್ಧಾರ ಕೈಗೊಂಡಿದೆ. ಸಾಮಾಜಿಕ ಕಲ್ಯಾಣ ಯೋಜನೆ ಅಡಿಯಲ್ಲಿ 500 ಆಟೋಗಳನ್ನು ನೀಡುವುದಾಗಿ ಇತ್ತೀಚೆಗಷ್ಟೇ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಅವರು ಘೋಷಣೆ ಮಾಡಿದ್ದರು. ಮಹಿಳೆಯರಿಗಾಗಿ ರಸ್ತೆಗಿಳಿಯಲಿರುವ ಈ ಆಟೋಗಳಲ್ಲಿ ಜಿಪಿಎಸ್ ಟ್ರಾಕರ್ ಮತ್ತು ಸಿಸಿಟಿವಿಗಳನ್ನು ಅಳವಡಿಸಲಾಗಿರುತ್ತದೆ. ಆಟೋಗಳಲ್ಲಿ ಕೇವಲ ಮಹಿಳೆಯರು ಮಾತ್ರವೇ ಪ್ರಯಾಣಿಸಬೇಕಿದ್ದು, ಮಹಿಳೆಯರೇ ಆಟೋ ಚಲಿಸಲಿದ್ದಾರೆ.
ಪಿಂಕ್ ಟಾಯ್ಲೆಟ್
ಮಹಿಳೆಯರ ಸುರಕ್ಷತೆಗಾಗಿ ನಗರದಲ್ಲಿ ಪಿಂಕ್ ಟಾಯ್ಲೆಟ್'ಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಜಧಾನಿ ದೆಹಲಿಯಲ್ಲಿರುವ ಮಾದರಿ ಪಿಂಕ್ ಟಾಯ್ಲೆಟ್ ಗಳನ್ನು ನಗರದಲ್ಲಿ ನಿರ್ಮಾಣ ಮಾಡಲು ಸರ್ಕಾರ ನಿರ್ಧರಿಸಿದೆ. ಸ್ವಚ್ಛತೆ, ರಕ್ಷಣೆ ಇದರ ಪ್ರಮುಖ ಉದ್ದೇಶವಾಗಿದ್ದು, ದಿನದ 24 ತಾಸುಗಳು ಈ ಟಾಯ್ಲೆಟ್ ಗಳು ಕಾರ್ಯನಿರ್ವಹಿಸಲಿವೆ.
ಪಾರ್ಕಿಂಗ್ ನಲ್ಲೂ ಮಹಿಳೆಯರಿಗೆ ಮೀಸಲಾತಿ
ಮಹಿಳೆಯರಿಗೆ ವಾಹನ ನಿಲುಗಡೆಯಲ್ಲಿ ಮೀಸಲಾತಿ ನೀಡಲು ಬಿಬಿಎಂಪಿ ನಿರ್ಧರಿಸಿದ್ದು, ಇದಕ್ಕಾಗಿ ಯೋಜನೆಯನ್ನು ರೂಪಿಸಿದೆ. ಯೋಜನೆಯಂತೆಯೇ ಈಗಾಗಲೇ ಬಿಬಿಎಂಪಿ ಟೆಂಡರ್ ಕರೆದಿದ್ದು, ಪಾರ್ಕಿಂಗ್ ಸ್ಥಳದಲ್ಲಿ ಮಹಿಳೆಯರಿಗೆ ಶೇ.20 ರಷ್ಟು ಮೀಸಲಾತಿ ನೀಡಲು ನಿರ್ಧರಿಸಿದೆ. ಮಹಿಳೆಯರಿಗೆ ಮೀಸಲಿರುವ ಸ್ಥಳಗಳಿಗೆ ಪಿಂಕ್ ಬಣ್ಣವನ್ನು ಹಚ್ಚಲು ಸರ್ಕಾರ ನಿರ್ಧರಿಸಿದೆ.
ಕ್ಯಾಂಟೀನ್
ರಾಜ್ಯ ಮಹಿಳಾ ಅಭಿವೃದ್ಧಿ ನಿಗಮ ಸ್ತ್ರೀ ಶಕ್ತಿ ಒಕ್ಕೂಟಗಳ ಮೂಲಕ ಕೆಲ ದಿನಗಳ ಹಿಂದಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸವಿ ರುಚಿ ಸಂಚಾರಿ ಕ್ಯಾಂಟೀನ್'ಗೆ ಚಾಲನೆ ನೀಡಿದ್ದರು. ಈ ವಾಹನದ ಬಣ್ಣ ಗುಲಾಬಿಯಾಗಿದೆ. ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಇಂದಿರಾ ಕ್ಯಾಂಟೀನ್ ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಆಹಾರ ನೀಡುವುದಾಗಿ ಬಿಬಿಎಂಪಿ ಮೇಯರ್ ಸಂಪತ್ ರಾಜ್ ಅವರು ಘೋಷಣೆ ಮಾಡಿದ್ದಾರೆ.
ಪಿಂಕ್ ಹೊಯ್ಸಳ
ಮಹಿಳೆಯರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳಿಗೆ ಕಡಿವಾಣ ಹಾಕುವ ಸಲುವಾಗಿ ಕಳೆದ ವರ್ಷವಷ್ಟೇ ಸರ್ಕಾರ ಪಿಂಕ್ ಹೊಯ್ಸಳಗಳನ್ನು ರಸ್ತೆಗಿಳಿಸಿತ್ತು. ಈ ಹೊಯ್ಸಳಗಳ ಬಣ್ಣ ಕೂಡ ಪಿಂಕ್ ಆಗಿದ್ದು, ರಾತ್ರಿ ಪಾಳಿಯಲ್ಲಿ ಈ ಹೊಯ್ಸಳಗಳು ಕಾರ್ಯನಿರ್ವಹಿಸಲಿವೆ. ಈ ವಾಹನದಲ್ಲಿ ಕನಿಷ್ಟವೆಂದರೂ ಒಬ್ಬರು ಮಹಿಳಾ ಪೊಲೀಸ್ ಇರುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Siddaramaiahಸಿದ್ದರಾಮಯ್ಯKarnatakaಕರ್ನಾಟಕInternational Women\'s Dayಅಂತರಾಷ್ಟ್ರೀಯ ಮಹಿಳಾ ದಿನಾಚರಣೆPinkಪಿಂಕ್
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


