ಗೌರಿ ಲಂಕೇಶ್ ಹತ್ಯೆ: ಬಂಧಿತ ಶಂಕಿತನ ವಶಕ್ಕೆ ಪಡೆಯಲು ಮುಂದಾದ ಎಸ್ ಐಟಿ!
ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬೆಂಗಳೂರು ಪೊಲೀಸರಿಂದ ಬಂಧನಕ್ಕೀಡಾಗಿದ್ದ ಆರೋಪಿ ನವೀನ್ ಕುಮಾರ್ ಮತ್ತಿತ್ತರನ್ನು ವಶಕ್ಕೆ ಪಡೆಯಲು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಮುಂದಾಗಿದೆ ಎಂದು ತಿಳಿದುಬಂದಿದೆ.

Published On :
ಬೆಂಗಳೂರು: ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಹಿಂದೆ ಬೆಂಗಳೂರು ಪೊಲೀಸರಿಂದ ಬಂಧನಕ್ಕೀಡಾಗಿದ್ದ ಆರೋಪಿ ನವೀನ್ ಕುಮಾರ್ ಮತ್ತಿತ್ತರನ್ನು ವಶಕ್ಕೆ ಪಡೆಯಲು ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ದಳ ಮುಂದಾಗಿದೆ ಎಂದು ತಿಳಿದುಬಂದಿದೆ.
ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ವರದಿ ಮಾಡಿರುವಂತೆ ಮಂಡ್ಯದ ಮದ್ದೂರಿನಲ್ಲಿ ಕಳೆದ ಫೆಬ್ರವರಿ 18ರಂದು ಬೆಂಗಳೂರು ಪೊಲೀಸರಿಂದ ಬಂಧನಕ್ಕೀಡಾಗಿದ್ದ ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತ ಎನ್ನಲಾದ ನವೀನ್ ಕುಮಾರ್ ಮತ್ತಿತ್ತರರನ್ನು ಎಸ್ ಐಟಿ ವಿಚಾರಣೆಗೊಳಪಡಿಸಲು ಮುಂದಾಗಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಮೊದಲಿನಿಂದಲೂ ಶಂಕಿತ ಆರೋಪಿ ಮೇಲೆ ಕಣ್ಣಿಟ್ಟಿದ್ದ ಎಸ್ ಐಟಿ ಅಧಿಕಾರಿಗಳು ಈತನ ದೂರವಾಣಿ ಕರೆಗಳ ಪರಿಶೀಲನೆ ನಡೆಸಿದ್ದರು. ಈ ವೇಳೆ ಈತ ಗನ್ ಮತ್ತು ಇತರೆ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳ ಕುರಿತು ಮಾತನಾಡುತ್ತಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದೇ ಕಾರಣಕ್ಕೆ ಆರೋಪಿ ನವೀನ್ ಕುಮಾರ್ ಗೂ ಗೌರಿ ಲಂಕೇಶ್ ಹತ್ಯೆಗೂ ಸಂಬಂಧವಿರಬಹುದು ಎಂದು ಅಧಿಕಾರಿಗಳು ಶಂಕಿಸಿದ್ದಾರೆ. ಅಲ್ಲದೆ ನವೀನ್ ಕುಮಾರ್ ಗೆ ಸನಾತನ ಸಂಸ್ಥೆ, ಹಿಂದೂ ಯುವ ಸೇನಾದಂತಹ ಕಠಿಣ ಹಿಂದೂಪರ ಸಂಘಟನೆಗಳೊಂದಿಗೆ ಸಂಪರ್ಕವಿದೆ ಎಂದು ಹೇಳಲಾಗುತ್ತಿದೆ.
ಎಸ್ ಐಟಿ ಮೂಲಗಳ ಪ್ರಕಾರ ತನಿಖಾಧಿಕಾರಿಗಳು ಈಗಾಗಲೇ ಒಂದೆರಡು ಬಾರಿ ಆರೋಪಿ ನವೀನ್ ಕುಮಾರ್ ನನ್ನು ಪ್ರಶ್ನೆ ಮಾಡಿದ್ದು, ಇದೀಗ ಪೂರ್ಣ ಪ್ರಮಾಣದಲ್ಲಿ ಆತನನ್ನು ತನಿಖೆಗೆ ಒಳಪಡಿಸಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಈ ಹಿಂದೆ ಮಂಡ್ಯದಲ್ಲಿ ಕಾರ್ಯಾಚರಣೆ ನಡೆಸಿದ್ದ ಬೆಂಗಳೂರು ಪೊಲೀಸರು ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತ ಕೆ.ಟಿ. ನವೀನ್ ಅಲಿಯಾಸ್ ಹೊಟ್ಟೆ ಮಂಜ ಸೇರಿ ನಾಲ್ವರನ್ನು ವಶಕ್ಕೆ ಪಡೆದಿದ್ದರು. ಮಂಡ್ಯ ಜಿಲ್ಲೆ ಕದಲೂರು ಗ್ರಾಮದ ನವೀನ್, ಫೆ.18ರ ಸಂಜೆ 6 ಗಂಟೆ ಸುಮಾರಿಗೆ ಪಿಸ್ತೂಲ್ನೊಂದಿಗೆ ಮೆಜೆಸ್ಟಿಕ್ಗೆ ಬಂದಿದ್ದ. ಈ ಬಗ್ಗೆ ದೊರೆತ ಖಚಿತ ಮಾಹಿತಿಯಿಂದ ದಾಳಿ ನಡೆಸಿದ್ದ ಸಿಸಿಬಿ ಇನ್ಸ್ಪೆಕ್ಟರ್ ಬಿ.ರಾಜು ನೇತೃತ್ವದ ತಂಡ, ಆತನನ್ನು ವಶಕ್ಕೆ ಪಡೆದು ನಾಡಪಿಸ್ತೂಲ್ ಹಾಗೂ ‘ಪಾಯಿಂಟ್ 32’ ರಿವಾಲ್ವರ್ನ ಐದು ಜೀವಂತ ಗುಂಡುಗಳನ್ನು ಜಪ್ತಿ ಮಾಡಿತ್ತು. ಈ ಸಂಬಂಧ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿತ್ತು.
ನವೀನ್ ಬಳಿ ಪಿಸ್ತೂಲ್ .32 ಗನ್ 15 ಸುತ್ತು ಗುಂಡುಗಳು, 7.65 ಎಂಎಂನ ಗುಂಡಿನ ಕಾರ್ಟ್ ರಿಡ್ಜ್ ಅನ್ನು ಪೊಲೀಸರು ವಶಕ್ಕೆ ಪಡೆದಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


