ರಾಜ್ಯ

ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸಿದರೆ ಶಿಕ್ಷಕರಿಗೆ ಸಂಬಳ ಕಟ್: ಇದು ಶಿಕ್ಷಣ ಇಲಾಖೆ ಹೊಸ ನಿಯಮ

ರಾಣಿ ಮುಖರ್ಜಿ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ 'ಹಿಚ್ಕಿ' ಸಿನಿಮಾದಲ್ಲಿ ಒಂದು ...

ವಿದ್ಯಾರ್ಥಿಗಳು ಕಡಿಮೆ ಅಂಕ ಗಳಿಸಿದರೆ ಶಿಕ್ಷಕರಿಗೆ ಸಂಬಳ ಕಟ್: ಇದು ಶಿಕ್ಷಣ ಇಲಾಖೆ ಹೊಸ ನಿಯಮ
ಸಾಂದರ್ಭಿಕ ಚಿತ್ರ
Published On :

ಬೆಂಗಳೂರು: ರಾಣಿ ಮುಖರ್ಜಿ ಅಭಿನಯದ ಇತ್ತೀಚೆಗೆ ಬಿಡುಗಡೆಯಾದ 'ಹಿಚ್ಕಿ' ಸಿನಿಮಾದಲ್ಲಿ ಒಂದು ಸಂಭಾಷಣೆಯಿದೆ, ''ಕೆಟ್ಟ ವಿದ್ಯಾರ್ಥಿಗಳಿರಲಾರರು, ಕೆಟ್ಟ ಶಿಕ್ಷಕರು ಇರಬಹುದು'' ಎಂದು. ಅಂದರೆ ವಿದ್ಯಾರ್ಥಿಗಳನ್ನು ತಿದ್ದಿ ತೀಡಿ, ಅವರನ್ನು ಸತ್ಪ್ರಜೆಗಳನ್ನಾಗಿ ಮಾಡುವಲ್ಲಿ ಪೋಷಕರ ಮಾತ್ರ ಎಷ್ಟು ಮುಖ್ಯವೋ ಶಾಲೆಯಲ್ಲಿ ಶಿಕ್ಷಕರ ಪಾತ್ರ ಕೂಡ ಅಷ್ಟೇ ಮುಖ್ಯವಾಗಿರುತ್ತದೆ.

ಈ ನಿಟ್ಟಿನಲ್ಲಿ ರಾಜ್ಯ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಇಲಾಖೆ, ಖಾಸಗಿ ಅನುದಾನಿತ ಶಾಲೆಗಳಲ್ಲಿ ಹತ್ತನೇ ತರಗತಿಯಲ್ಲಿ ವಿದ್ಯಾರ್ಥಿಗಳಿಗೆ ಕಡಿಮೆ ಅಂಕ ಬಂದರೆ ಇನ್ನು ಮುಂದೆ ಅವರಿಗೆ ಪಾಠ ಹೇಳಿಕೊಟ್ಟ ಶಿಕ್ಷಕರಿಗೆ ಶಿಕ್ಷೆ ನೀಡಲು ಮುಂದಾಗಿದೆ. ಶಿಕ್ಷಕರ ವೇತನವನ್ನು ತಡೆಹಿಡಿಯಲಾಗುತ್ತದೆಯಂತೆ.

ರಾಜ್ಯದಲ್ಲಿ ಹತ್ತನೇ ತರಗತಿಯಲ್ಲಿ ಕಡಿಮೆ ಅಂಕ ಗಳಿಸಿದ ವಿದ್ಯಾರ್ಥಿಗಳಿರುವ ಖಾಸಗಿ ಅನುದಾನಿತ ಶಾಲೆಗಳು ಎಷ್ಟಿವೆ ಎಂದು ಪಟ್ಟಿ ನೀಡುವಂತೆ ಸಾರ್ವಜನಿಕ ನಿರ್ದೇಶನಾಲಯದ ಉಪ ನಿರ್ದೇಶಕರಿಗೆ ಇತ್ತೀಚೆಗೆ ಸುತ್ತೋಲೆ ಹೊರಡಿಸಲಾಗಿದೆ. ಇಂತಹ ಶಾಲೆಗಳ ಶಿಕ್ಷಕರ ಜೂನ್ ತಿಂಗಳ ವೇತನವನ್ನು ತಡೆಹಿಡಿಯಲಾಗುತ್ತದೆ. ಕಳೆದ 5 ವರ್ಷಗಳಲ್ಲಿ ಖಾಸಗಿ ಅನುದಾನಿತ ಶಾಲೆಗಳಲ್ಲಿ ಹತ್ತನೇ ತರಗತಿಯ ವಿದ್ಯಾರ್ಥಿಗಳ ಫಲಿತಾಂಶ ಸರಾಸರಿಗಿಂತ ಕಡಿಮೆಯಿರುವ ಶಾಲೆಗಳ ಶಿಕ್ಷಕರ ಈ ತಿಂಗಳ ವೇತನವನ್ನು ತಡೆಹಿಡಿಯಲು ಸುತ್ತೋಲೆಯಲ್ಲಿ ಆದೇಶ ನೀಡಲಾಗಿದೆ.

ಖಾಸಗಿ ಅನುದಾನಿತ ಶಾಲೆಗಳಲ್ಲಿನ ಶಿಕ್ಷಕರಿಗೆ ರಾಜ್ಯ ಸರ್ಕಾರ ವೇತನ ನೀಡುತ್ತದೆ. ಶಿಕ್ಷಕರಿಗೆ ವೇತನ ನೀಡಿಕೆಯಲ್ಲಿ ತಡೆಹಿಡಿಯುವ ಮೂಲಕ ಕಠಿಣ ಕ್ರಮ ತೆಗೆದುಕೊಂಡರೆ ಮಾತ್ರ ಮುಂದಿನ ದಿನಗಳಲ್ಲಿ 10ನೇ ತರಗತಿಯಲ್ಲಿ ವಿದ್ಯಾರ್ಥಿಗಳ ಫಲಿತಾಂಶದಲ್ಲಿ ಹೆಚ್ಚಳ ಕಾಣಬಹುದು ಎನ್ನುತ್ತಾರೆ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಇಲಾಖೆ ಅಧಿಕಾರಿಗಳು.

ಆದರೆ ಈ ಸುತ್ತೋಲೆಯನ್ನು ಹಿಂತೆಗೆದುಕೊಳ್ಳಬೇಕೆಂದು ಶಿಕ್ಷಕರು ಇಲಾಖೆಯನ್ನು ಒತ್ತಾಯಿಸುತ್ತಿದ್ದಾರೆ. ಈ ರೀತಿ ತಮ್ಮ ಮೇಲೆ ಅನವಶ್ಯಕ ಒತ್ತಡ ಹಾಕಬಾರದು. ಶಾಲೆ ಅಂದ ಮೇಲೆ ಅಲ್ಲಿ ಎಲ್ಲಾ ರೀತಿಯ ವಿದ್ಯಾರ್ಥಿಗಳಿರುತ್ತಾರೆ. ಕೆಲವರು ಚೆನ್ನಾಗಿ ಓದುತ್ತಾರೆ, ಇನ್ನು ಕೆಲವರು ಓದುವುದಿಲ್ಲ. ಅವರು ಚೆನ್ನಾಗಿ ಅಂಕ ಗಳಿಸುವಂತೆ ಮಾಡಲು ನಾವು ಸಾಧ್ಯವಾದಷ್ಟು ಪ್ರಯತ್ನ ಮಾಡುತ್ತೇವೆ. ಕೊನೆಗೂ ಅವರು ಉತ್ತಮ ಸಾಧನೆ ಮಾಡದಿದ್ದರೆ ನಾವು ಏನು ಮಾಡಲು ಸಾಧ್ಯ? ಎಂದು ಶಿಕ್ಷಕರೊಬ್ಬರು ಕೇಳುತ್ತಾರೆ. ಇಂತಹ ಕ್ರಮಕ್ಕೆ ಸರ್ಕಾರ ಮುಂದಾದರೆ ನಾವು ಶಿಕ್ಷಕ ವೃತ್ತಿಯನ್ನು ಬಿಡಬೇಕು ಇಲ್ಲವೇ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಬೇಕು ಎನ್ನುತ್ತಾರೆ.

ಈ ಬಗ್ಗೆ ಪ್ರತಿಕ್ರಿಯಿಸಿದ ವಿಧಾನಪರಿಷತ್ ಸದಸ್ಯ ಅರುಣ್ ಶಹಪುರ ಸಹ ಶಿಕ್ಷಕರ ಪರವಾಗಿ ನಿಂತಿದ್ದಾರೆ. ವಿಧಾನಪರಿಷತ್ ನಲ್ಲಿ ಈ ಬಗ್ಗೆ ಚರ್ಚೆ ನಡೆಸಿದ ನಂತರವೂ ಇದನ್ನು ಜಾರಿಗೆ ತರಲಾಗಿದೆ. ಸಭೆಯಲ್ಲಿ ಶಿಕ್ಷಕರ ವೇತನವನ್ನು ತಡೆಹಿಡಿಯಬಾರದು ಎಂದು ಹೇಳಿದ್ದೆವು. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚೆ ನಡೆಸುತ್ತೇವೆ ಎನ್ನುತ್ತಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.