ರಾಜ್ಯ

ಕಾಂಕ್ರಿಟ್ ರಸ್ತೆ ಕೆಲಸ ಪೂರ್ಣ: 6 ತಿಂಗಳ ಬಳಿಕ ಶಿರಾಡಿ ಘಾಟ್ ಪುನಾರಂಭ

ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು

ಕಾಂಕ್ರಿಟ್ ರಸ್ತೆ ಕೆಲಸ ಪೂರ್ಣ: 6 ತಿಂಗಳ ಬಳಿಕ ಶಿರಾಡಿ ಘಾಟ್ ಪುನಾರಂಭ
ಕಾಂಕ್ರಿಟ್ ರಸ್ತೆ ಕೆಲಸ ಪೂರ್ಣ: 6 ತಿಂಗಳ ಬಳಿಕ ಶಿರಾಡಿ ಘಾಟ್ ಪುನಾರಂಭ
Published On :
ಮಂಗಳೂರು: ಬೆಂಗಳೂರಿನಿಂದ ಹಾಸನ ಮಾರ್ಗವಾಗಿ ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿ ಘಾಟ್ ರಸ್ತೆಯನ್ನು ಭಾನುವಾರ ಲೋಕಾರ್ಪಣೆಗೊಳಿಸಲಾಯಿತು. 
ಸಕಲೇಶಪುರ ತಾಲೂಕಿನ ಕೆಂಪುಹೊಳೆ ಜಂಕ್ಷನ್'ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಹೆಚ್.ಡಿ.ರೇವಣ್ಣ, ವಸತಿ ಸಚಿವ ಯು.ಟಿ. ಖಾದರ್, ದಕ್ಷಿಣ ಕನ್ನಡ ಸಂಸದ ನಳೀನ್ ಕುಮಾರ್ ಕಟೀಲು ಮೊದಲಾದವರು ಶಿರಾಡಿ ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಿದರು. 
ಬೆಂಗಳೂರಿನಿಂದ ಕರಾವಳಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಶಿರಾಡಿಘಾಟ್ ಆಗಿದೆ. ಸಂಚಾರ ದಟ್ಟಣೆ ಹೆಚ್ಚಾದ ಕಾರಣ ರಸ್ತೆ ಪದೇ ಪದೇ ಹಾಳಾಗುತ್ತಿತ್ತು. ಈ ಹಿನ್ನಲೆಯಲ್ಲಿ 26 ಕಿ.ಮೀ ಉದ್ದ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲು ಸರ್ಕಾರ ತೀರ್ಮಾನಿಸಿತ್ತು. 
2015ರಲ್ಲಿ ಮೊದಲ ಹಂತದಲ್ಲಿ 13 ಕಿ.ಮೀ ರಸ್ತೆಯನ್ನು ಕಾಂಕ್ರೀಟಿಕರಣಗೊಳಿಸಲಾಗಿತ್ತು. 2ನೇ ಹಂತದಲ್ಲಿ 12.38 ಕಿ.ಮೀ ಉದ್ದ ರಸ್ತೆ ಕಾಂಕ್ರೀಟಿಕರಣ ಕಾಮಗಾರಿಯನ್ನು 2018ರ ಜ.20ರಿಂದ ಕೈಗೆತ್ತಿಕೊಳ್ಳಲಾಗಿತ್ತು. 
ಅಂದಿನಿಂದ ಈ ಮಾರ್ಗದ ಸಂಚಾರ ಬಂದ್ ಆಗಿ ಕರಾವಳಿ ಭಾಗಕ್ಕೆ ಹೋಗುವವರು ಸುತ್ತಿ ಬಳಸಿ ಪ್ರಯಾಣ ಮಾಡಬೇಕಿತ್ತು. ಕೊನೆಗೂ ಮಳೆಯ ಅಡೆತಡೆಗಳ ನಡುವೆಯೂ ಸುಮಾರು ರೂ.74 ಕೋಟಿ ವೆಚ್ಚದ ಕಾಮಗಾರಿ ಪೂರ್ಣಗೊಂಡ ಹಿನ್ನಲೆಯಲ್ಲಿ 6 ತಿಂಗಳ ಬಳಿಕ ಸಂಚಾರಕ್ಕೆ ಮುಕ್ತಗೊಳಿಸಲಾಗಿದೆ. 
ಇದೀಗ ರಸ್ತೆ ಕಾಮಗಾರಿ ಪೂರ್ಣಗೊಂಡಿದೆ ಆದರೂ, ರಸ್ತೆ ಪಕ್ಕದ ಇಳಿಜಾರು ಕಣಿವೆಯ ತಡೆಗೋಡೆ ಹಾಗೂ ರಸ್ತೆ ಬಾಹೂ ಕಾಮಗಾರಿ ಅಲ್ಲಲ್ಲಿ ಬಾಕಿ ಉಳಿದುಕೊಂಡಿದೆ. ವಾಹನ ಸಂಚಾರಕ್ಕೆ ಅಪಾಯಕಾರಿಯಾಗಿದ್ದರೂ ತರಾತುರಿಯಲ್ಲಿ ಉದ್ಘಾಟನೆ ನಡೆಸಲಾಗಿದೆ. ಈ ಮಧ್ಯೆ ನೂತನವಾಗಿ ನಿರ್ಮಾಣವಾದ ಶಿರಾಢಿ ಘಾಟಿಯ ತಡೆಗೋಡೆಯೊಂದು ಶನಿವಾರ ರಾತ್ರಿ ಸುರಿದ ಭಾರೀ ಮಳೆಗೆ ಕುಸಿದು ಬಿದ್ದಿದ್ದು, ಅಪಾಯದ ಮುನ್ಸೂಚನೆಯನ್ನು ಮೊದಲೇ ನೀಡಿದೆ. 
ಉದ್ಘಾಟನೆ ಬಳಿಕ ಕಾಮಗಾರಿ ಪರಿಶೀಲನೆ ನಡೆಸಿದ ಸಚಿವ ರೇವಣ್ಣ ಅವರು, ಕಾಮಗಾರಿ ಇನ್ನೂ ಪೂರ್ಣಗೊಳ್ಲದ ಕಾರಣ ಭಾರೀ ಪ್ರಮಾಣದ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರೆ ಅಪಾಯ ಸಂಭವಿಸುವ ಮುನ್ಸೂಚನೆ ನೀಡಿದರು. 
ಇದರಂತೆ ಭಾನುವಾರ ಸಂಜೆ ಸಚಿವ ಯು.ಟಿ.ಖಾದರ್ ನೇತೃತ್ವದಲ್ಲಿ ಸಭೆ ನಡೆಸಿದ ದಕ್ಷಿಣ ಕನ್ನಡ ಹಾಗೂ ಹಾಸನ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳು, ಕಾಮಗಾರಿ ಪೂರ್ಣಗೊಳ್ಳುವ ತನಕ ಭಾರೀ ವಾಹನ ಸಂಚಾರ ನಿಷೇಧಿಸಿದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.