ಶಿರಸಿ: ಮೂರು ವರ್ಷದ ಈ ಬಾಲಕಿಗೆ ಹಾವುಗಳೇ ಆಟಿಕೆ!
ಹಾವು ಎಂದರೆ ಸಾಕು ಮಾರುದ್ದ ಹಾರುವವರ ನಡುವೆ ಶಿರಸಿಯ ಮೂರು ವರ್ಷದ ಬಾಲಕಿ ವಿಷಕಾರಿ ಹಾವುಗಳನ್ನೇ ತನ್ನ ಆಟಿಕೆ ಮಾಡಿಕೊಂಡಿದ್ದಾಳೆ.

Published On :
ಶಿರಸಿ: ಹಾವು ಎಂದರೆ ಸಾಕು ಮಾರುದ್ದ ಹಾರುವವರ ನಡುವೆ ಶಿರಸಿಯ ಮೂರು ವರ್ಷದ ಬಾಲಕಿ ವಿಷಕಾರಿ ಹಾವುಗಳನ್ನೇ ತನ್ನ ಆಟಿಕೆ ಮಾಡಿಕೊಂಡಿದ್ದಾಳೆ.
ಹೌದು... ಶಿರಸಿಯ ಚಿಪಗಿ ಗ್ರಾಮದ ಪ್ರಶಾಂತ್ ಹುಲೇಕಲ್ ಹಾಗೂ ಸ್ವಾತಿ ಎಂಬವರ ಮಗಳಾದ ಆಕರ್ಷ ಹಾವಿಗಳೊಂದಿಗೆ ಸರಸವಾಡುತ್ತಾಳೆ. ಹಾವುಗಳೊಂದಿಗೆ ಸ್ನೇಹ ಬೆಳೆಸಿ ಅವುಗಳನ್ನೇ ತನ್ನ ಆಟಿಕೆ ಮಾಡಿಕೊಂಡಿದ್ದಾಳೆ. ಇನ್ನು ಮಾತು ಕೂಡ ಸರಿಯಾಗ ಆಡದ ಬಾಲಕಿ ಹಾವುಗಳೊಂದಿಗೆ ಆಟವಾಡುವುದನ್ನು ನೋಡಿ ಎಂತಹವರಿಗೂ ಅಚ್ಚರಿಯಾಗುತ್ತದೆ. ವಿಷಕಾರಿಯಾದ ಕಾಳಿಂಗ ಸರ್ಪ, ನಾಗರಹಾವು, ಕೊಳಕಮಂಡಲ ಸೇರಿದಂತೆ 60 ಕ್ಕೂ ಹೆಚ್ಚು ಹಾವುಗಳನ್ನ ಹಿಡಿದಿರುವುದಲ್ಲದೇ ಅದರೊಂದಿಗೆ ಆಟವಾಡುತ್ತಾ ಎಲ್ಲರೂ ಹುಬ್ಬೇರಿಸುವಂತೆ ಮಾಡಿದ್ದಾಳೆ.
ಇಷ್ಟಕ್ಕೂ ಹಾವಿಗೂ ಈ ಬಾಲಕಿಗೂ ಏನು ನಂಟು ಎಂದು ಕೆದಕುತ್ತಾ ಹೋದರೆ ಅಲ್ಲಿ ಸಿಗುವುದು ಈ ಅಚ್ಚರಿ ಬಾಲಕಿಯ ತಂದೆ ಪ್ರಶಾಂತ್ ಹುಲೇಕಲ್. ಪ್ರಶಾಂತ್ ಅವರು ಹವ್ಯಾಸಿ ಉರಗತಜ್ಞರಾಗಿದ್ದು, ಕಳೆದ 20 ವರ್ಷಗಳಿಂದ ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಡುತ್ತಾರೆ. ಕಳೆದ 20 ವರ್ಷಗಳಲ್ಲಿ ಅವರು ಸುಮಾರು 12 ಸಾವಿರಕ್ಕೂ ಹೆಚ್ಚು ಹಾವುಗಳನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರಂತೆ. ಇದೇ ಕಾರಣಕ್ಕೆ ಈ ಹಾವನ್ನು ಹಿಡಿಯುವ ಹವ್ಯಾಸ ಅವರ ಪುತ್ರಿ ಆಕರ್ಷಗೂ ಕರಗತವಾಗಿದೆ.
ಬಾಲಕಿ ಆಕರ್ಷ ಚಿಕ್ಕ ಮಗುವಾಗಿದ್ದಾಗಿನಿಂದಲೇ ತಂದೆ ಹಾವುಗಳನ್ನ ಹಿಡಿಯುವುದನ್ನು ನೋಡುತ್ತಿದ್ದಳಂತೆ. ಹೀಗಾಗಿ ಹಾವುಗಳನ್ನು ಪಳಗಿಸುವುದರಲ್ಲಿ ಈಕೆಗೆ ತಂದೆಯೇ ಮೊದಲ ಗುರು. ಮನೆಯಲ್ಲಿ ಪ್ರತಿ ವರ್ಷ ನಾಗರ ಪಂಚಮಿಯಂದು ನಿಜ ನಾಗರಹಾವಿಗೆ ತಪ್ಪದೇ ಪೂಜೆ ಮಾಡುತ್ತಾರೆ. ಹೀಗಾಗಿ ಇವೆಲ್ಲವೂ ಈ ಪುಟ್ಟ ಬಾಲಕಿಗೆ ಪ್ರಭಾವ ಬೀರಿದ್ದು, ಹಾವುಗಳೊಂದಿಗೆ ಸ್ನೇಹ ಬೆಳಸಿಕೊಳ್ಳುವಂತೆ ಮಾಡಿದೆ.
ಇನ್ನು ಈ ಬಗ್ಗೆ ಹೆಮ್ಮೆಯಿಂದಲೇ ಮಾತನಾಡುವ ಆಕರ್ಷ ತಂದೆ ಪ್ರಶಾತ್ ಅವರು, ನನಗೆ ಹಾವುಗಳನ್ನು ಹಿಡಿಯುವುದು ತುಂಬಾ ಇಷ್ಟ. ಇದೇ ಕಾರಣಕ್ಕೆ ಅದನ್ನು ವೃತ್ತಿಯಾಗಿಸಿಕೊಂಡೆ. ಆಕರ್ಷ ಚಿಕ್ಕವಳಿದ್ದಾಗಲೇ ನಾನು ಹಾವು ಹಿಡಿಯುತ್ತಿದ್ದನ್ನು ಗಮನಿಸುತ್ತಿದ್ದಳು. ಅಲ್ಲದೆ ಕೆಲವೊಮ್ಮೆ ಹಾವುಗಳನ್ನು ಕೈಗೆ ಕೊಡುವಂತೆ ಹಟ ಹಿಡಿಯುತ್ತಿದ್ದಳು. ಅವಳ ಹಟದಿಂದಾಗಿ ಅವಳಿಗೆ ಹಾವುಗಳನ್ನು ನೀಡುತ್ತಿದ್ದೆ. ಕ್ರಮೇಣ ಅದು ಅಭ್ಯಾಸವಾಗಿ ಹೋಯಿತು. ಈಗ ಎಲ್ಲ ಬಗೆಯ ಹಾವುಗಳನ್ನು ಹಿಡಿದುಕೊಂಡು ಆಕೆ ಆಟವಾಡುತ್ತಾಳೆ ಎಂದು ಹೇಳಿದ್ದಾರೆ.
ಒಟ್ಟಾರೆ ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಈ ಚಿಕ್ಕ ಪೋರಿಯ ಈ ಹಾವಿನ ಸಲುಗೆ ಎಲ್ಲರನ್ನು ಮೂಕವಿಸ್ಮಿತರನ್ನಾಗಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


