ರಾಜ್ಯ

ಕಾವೇರಿ ನದಿ ನೀರು ವಿವಾದ: ಕರ್ನಾಟಕಕ್ಕೆ 270 ಟಿಎಂಸಿಗಿಂತ ಹೆಚ್ಚು ನೀರು ಸಿಗುತ್ತಾ?

ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ...

ಕಾವೇರಿ ನದಿ ನೀರು ವಿವಾದ: ಕರ್ನಾಟಕಕ್ಕೆ 270 ಟಿಎಂಸಿಗಿಂತ ಹೆಚ್ಚು ನೀರು ಸಿಗುತ್ತಾ?
ಸುಪ್ರೀಂಕೋರ್ಟ್
Published On :
ಬೆಂಗಳೂರು: ಕಾವೇರಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಅಂತಿಮ ತೀರ್ಪಿಗೆ ಕ್ಷಣಗಣನೆ ಆರಂಭವಾಗಿದೆ. 
ಕಾವೇರಿ ನದಿಯನ್ನು ಆತಂಕಕ್ಕೆ ದೂಡಿರುವ ಕಾವೇರಿ ಜಲ ವಿವಾದದ ತೀರ್ಪನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ 2018-19ನೇ ಸಾಲಿನ ಬಜೆಟ್ ಮಂಡನೆಗೂ ಮುನ್ನ ಸುಪ್ರೀಂಕೋರ್ಟ್ ಪ್ರಕಟಿಸಲಿದೆ. 
ಕಾವೇರಿ ನದಿ ನ್ಯಾಯಾಧೀಕರಣತ ಐತೀರ್ಪು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಗೆ ಸಂಬಂಧಿಸಿ 11 ವರ್ಷಗಳ ಸುದೀರ್ಘ ವಿಚಾರಣೆ ಬಳಿಕ ಇಂದು ಬೆಳಿಗ್ಗೆ 10.30ಕ್ಕೆ ಸುಪ್ರೀಂಕೋರ್ಟ್ ಹಾಲ್ ನಂ.1ರಲ್ಲಿ ಮುಖ್ಯ ನ್ಯಾಯಾಮೂರ್ತಿ ದೀಪಕ್ ಮಿಶ್ರಾ, ನ್ಯಾ.ಎ.ಎಂ. ಖಾನ್ವೀಳ್ಕರ್ ಮತ್ತು ನ್ಯಾ.ಅಮಿತಾವ್ ರಾಯ್ ತೀರ್ಪು ಪ್ರಕಟಿಸಲಿದ್ದಾರೆ. 
ಇದರಿಂದ ಕಾವೇರಿ ನದಿ ನೀರು ಹಂಚಿಕೆ ವಿಚಾರದಲ್ಲಿ ಸತತ ಅನ್ಯಾಯಕ್ಕೆ ಒಳಗಾಗುತ್ತಲೇ ಬಂದಿರುವ ಕರ್ನಾಟಕದ ಕಾವೇರಿ ಕೊಳ್ಳದ ಜನರ ಕಣ್ಣು ಸಹಜವಾಗಿಯೇ ಈಗ ಸುಪ್ರೀಂಕೋರ್ಟ್ ನ್ಯಾಯಾಲಯದತ್ತ ನೆಟ್ಟಿದೆ. 
ಕಾವೇರಿ ವಿವಾದ ಇತ್ಯರ್ಥಕ್ಕೆ ಸಂಬಂಧಿಸಿದಂತೆ ರಚಿಸಲಾಗಿದ್ದ ಕಾವೇರಿ ನದಿ ನ್ಯಾಯಾಧೀಕರಣವು 2007ರ ತನ್ನ ಅಂತಿಮ ಐತೀರ್ಪು ಪ್ರಕಟಿಸಿ ಶೇ.30ರ ಅವಲಂಬನಾ ಸೂತ್ರದಡಿ ಕಾವೇರಿ ನದಿ ನೀರಿನ ಒಟ್ಟು ಪ್ರಮಾಣವನ್ನು 740 ಟಿಎಂಸಿ ಎಂದು ಲೆಕ್ಕ ಹಾಕಿತ್ತು. ಬಳಿತ ತಮಿಳುನಾಡಿಗೆ 419 ಟಿಎಂಸಿ, ಕರ್ನಾಟಕಕ್ಕೆ 270 ಟಿಎಂಸಿ, ಕೇರಳ ರಾಜ್ಯಕ್ಕೆ 30 ಟಿಎಂಸಿ, ಪಾಂಡಿಚೇರಿಗೆ 7 ಟಿಎಂಸಿ ಹಾಗೂ ಉಳಿದಂತೆ 17 ಟಿಎಂಸಿ ನೀರನ್ನು ಪರಿಸರ ಬಳಕೆ, ಆವಿಯಾಗುವಿಕೆ ಮುಂದಾದವುಗಳಿಗೆ ಹಂಚಿಕೆ ಮಾಡಿತ್ತು. 

ಆದರೆ, ನ್ಯಾಯಾಧೀಕಱಣದ ಅಂತಿಮ ತೀರ್ಪಿನಲ್ಲಿನ ನೀರು ಹಂಚಿಕೆ ಪ್ರಮಾಣ, ನೀರು ಹಂಚಿಕೆಗೆ ಬಳಸಿದ ಮಾನದಂಡಗಳ ಬಗ್ಗೆ ಕರ್ನಾಟಕ, ತಮಿಳುನಾಡು ಮತ್ತು ಕೇರಳ ರಾಜ್ಯಗಳು ಅತೃಪ್ತಿ ಹೊರಹಾಕಿತ್ತು. ಅಲ್ಲದೆ, ಸುಪ್ರೀಂಕೋರ್ಟ್ ನಲ್ಲಿ ಈ ಬಗ್ಗೆ ಮೇಲ್ಮನವಿಯನ್ನೂ ಮಾಡಿಕೊಂಡಿದ್ದವು. ರಾಜ್ಯಗಳು ಮೇಲ್ಮನವಿ ಸಲ್ಲಿಸಿ 11 ವರ್ಷಗಳ ಸುದೀರ್ಘ ವಿಚಾರಣೆ ನಡೆಸಿದ್ದ ನ್ಯಾಯಾಲಯ ಇಂದು ಅಂತಿಮ ತೀರ್ಪು ನೀಡಲಿದೆ.  

ನ್ಯಾಯಾಧೀಕರಣ ಐತೀರ್ಪಿನಲ್ಲಿ ಕರ್ನಾಟಕಕ್ಕೆ ವಾರ್ಷಿಕ 270ಟಿಎಂಸಿ ನೀರು ಹಂಚಿತ್ತು. ಇದು ಸಾಲದು, 465 ಟಿಎಂಸಿ ನೀರು ಬೇಕು ಎಂದು ಕರ್ನಾಟಕ ವಾದಿಸುತ್ತಲೇ ಬಂದಿದೆ. ಅದರೆ 270ಕ್ಕಿಂತಲೂ ಕಡಿಮೆ ನೀರು ಸುಪ್ರೀಂಕೋರ್ಟ್ ಹಂಚಿಕೆ ಮಾಡಿದರೆ, ಮುಂದಿನ ಗತಿಯೇನು ಎಂಬುದು ಇದೀಗ ರಾಜ್ಯಕ್ಕೆ ಎದುರಾಗಿರುವ ಆತಂಕವಾಗಿದೆ. 

ಇನ್ನು ಕರ್ನಾಟಕಕ್ಕೆ ಮತ್ತೊಂದು ಆತಂಕ ಕೂಡ ಇದ್ದು, ಕರ್ನಾಟಕ, ತಮಿಳುನಾಡು, ಕೇರಳ, ಪುದುಚೇರಿಯ ಅಣೆಕಟ್ಟುಗಳ ನಿಯಂತ್ರಣ ತೆಗೆದುಕೊಳ್ಳಲಿದೆ ಎನ್ನಲಾಗಿರುವ ಕಾವೇರಿ ಜಲ ನಿರ್ವಹಣಾ ಮಂಡಳಿ ಕುರಿತು ಇಂದೇ ತೀರ್ಪು ಹೊರಬೀಳುವ ಸಾಧ್ಯತೆಗಳಿವೆ. ಇದರ ಸ್ವರೂಪ, ಕಾರ್ಯವ್ಯಾಪ್ತಿ, ಅಧಿಕಾರ ಎಲ್ಲವೂ ಅಸ್ಪಷ್ಟವಾಗಿದೆ. ಆದರೆ, ಕಾವೇರಿ ನೀರಿನ ಮೇಲಿನ ಹಿಡಿದ ಮಂಡಳಿಯ ಪಾಲಾದರೆ, ಕರ್ನಾಟಕಕ್ಕೆ ಬಹುದೊಡ್ಡ ಸಂಕಷ್ಟ ಎದುರಾಗಲಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.