ಕಾಟ ನೀಡುತ್ತಿದ್ದ 'ಪುಂಡ'ನ ಹಿಡಿಯಲೂ ಹನಿಟ್ರ್ಯಾಪ್!
ಹಣ ಕೀಳಲು ವಂಚಕರು ಮಾಡುತ್ತಿದ್ದ ಹನಿ ಟ್ರಾಪ್ ಮತ್ತು ಕಳ್ಳರ ಹಿಡಿಯಲು ಪೊಲೀಸರು ರೂಪಿಸುತ್ತಿದ್ದ ಹನಿ ಟ್ರಾಪ್ ಬಗ್ಗೆ ಕೇಳಿದ್ದೇವೆ. ಆದರೆ ರೈತರಿಗೆ ಕಾಟ ನೀಡುತ್ತಿದ್ದ ಪುಂಡಾನೆಯನ್ನೂ ಹಿಡಿಯಲು ಹನಿ ಟ್ರಾಪ್ ಮಾಡಿರುವ ಕುರಿತು ಕೇಳಿದ್ದೀರಾ..!

Published On :
ದಾವಣಗೆರೆ: ಹಣ ಕೀಳಲು ವಂಚಕರು ಮಾಡುತ್ತಿದ್ದ ಹನಿ ಟ್ರಾಪ್ ಮತ್ತು ಕಳ್ಳರ ಹಿಡಿಯಲು ಪೊಲೀಸರು ರೂಪಿಸುತ್ತಿದ್ದ ಹನಿ ಟ್ರಾಪ್ ಬಗ್ಗೆ ಕೇಳಿದ್ದೇವೆ. ಆದರೆ ರೈತರಿಗೆ ಕಾಟ ನೀಡುತ್ತಿದ್ದ ಪುಂಡಾನೆಯನ್ನೂ ಹಿಡಿಯಲು ಹನಿ ಟ್ರಾಪ್ ಮಾಡಿರುವ ಕುರಿತು ಕೇಳಿದ್ದೀರಾ..!
ಹೌದು.. ಪುಂಡಾಟ ನಡೆಸುತ್ತಿದ್ದ ಪುಂಡಾನೆಯನ್ನು ಹಿಡಿಯಲು ಅರಣ್ಯ ಅಧಿಕಾರಿಗಳು ಹನಿಟ್ರ್ಯಾಪ್ ಅಸ್ತ್ರವನ್ನು ಪ್ರಯೋಗಿಸಿ ಸೆರೆ ಹಿಡಿದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಮಾವಿನಹೊಳೆ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಕಳೆದ ಒಂದು ವರ್ಷದಿಂದ ಮಾವಿನ ಹೊಳೆ ಅರಣ್ಯ ಪ್ರದೇಶದಲ್ಲಿ ಪುಂಡಾನೆಯೊಂದು ರೈತರಿಗೆ ಕಾಟನೀಡುತ್ತಿತ್ತು. ರೈತರ ಜಮೀನಿನ ಮೇಲೆ ದಾಳಿ ಮಾಡಿ ಬೆಳೆ, ಆಸ್ತಿ ನಷ್ಟ ಮಾಡುತ್ತಿತ್ತು. ಅಂತಹ ಪುಂಡಾನೆಯನ್ನು ಮಂಗಳವಾರ ಸಂಜೆ ಸೆರೆ ಹಿಡಿಯಲು ಅರಣ್ಯ ಅಧಿಕಾರಿಗಳು ಹಾಗೂ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ. ಕಳೆದ ಎರಡು ದಿನಗಳಿಂದ ಪುಂಡಾನೆಯನ್ನು ಹಿಡಿಯಲು ಕಾರ್ಯಾಚರಣೆ ನಡೆಸಿದ್ದು, ಸಕ್ರೇಬೈಲು ಆನೆ ಶಿಬಿರದಿಂದ ಅಭಿಮನ್ಯು ನೇತೃತ್ವದಲ್ಲಿ ಕೃಷ್ಣಾ, ಧನಂಜಯ, ಹರ್ಷ, ಹಾಗೂ ಅಜೇಯ ಎಂಬ ಸಾಕಾನೆಗಳು ಕಾಡಾನೆಯನ್ನು ಸೆರೆ ಹಿಡಿಯಲು ಆಗಮಿಸಿದ್ದವು.
ಮಂಗಳವಾರ ಬೆಳಗ್ಗೆ ಪುಂಡಾನೆಯನ್ನು ಹನಿಟ್ರ್ಯಾಪ್ ಮೂಲಕ ಸೆರೆ ಹಿಡಿಯಲು ಗೀತಾ ಹಾಗೂ ಗಂಗೆ ಎನ್ನುವ ಎರಡು ಹೆಣ್ಣಾನೆಯನ್ನು ಕಾರ್ಯಾಚರಣೆಗೆ ಬಳಸಿ ಚಿಕ್ಕಸಂದಿ ಗ್ರಾಮದ ಹಳೇಬೀಳು ಕಾಡಿನ ಗುಡ್ಡದ ಮಧ್ಯೆ ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು. ಕಳೆದ 2017ರ ಡಿಸೆಂಬರ್ 21ರಂದು ಕಾಡಿನಲ್ಲಿದ್ದ ಒಂದು ಪುಂಡಾನೆಯನ್ನು ನುರಿತ ತಜ್ಞ ವೈದ್ಯರ ತಂಡ ಹಾಗೂ ಅರಣ್ಯ ಅಧಿಕಾರಿಗಳು ಸೆರೆ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.
ಕಾಡಿನಲ್ಲೇ ಇದ್ದ ಮತ್ತೊಂದು ಪುಂಡಾನೆಯನ್ನು ಹಿಡಿಯಲು ಸರ್ಕಾರದಿಂದ ಅನುಮತಿ ಸಿಕ್ಕಿರಲಿಲ್ಲ. ಈಗ ಆನುಮತಿಯನ್ನು ಪಡೆದು ತಜ್ಞ ವೈದ್ಯರು, ನುರಿತ ಮಾವುತರು ಸೇರಿದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಸೆರೆ ಹಿಡಿದಿದ್ದು, ಸೆರೆ ಹಿಡಿದ ಕಾಡಾನೆಯನ್ನು ಸಕ್ರೇಬೈಲು ಆನೆ ಬಿಡಾರಕ್ಕೆ ರವಾನಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
ದಾವಣಗೆರೆdavanagereHoney TrapKarnataka Forest Departmentಕರ್ನಾಟಕ ಅರಣ್ಯ ಇಲಾಖೆಹನಿಟ್ರಾಪ್Lovesick Jumboಪುಂಡಾನೆ
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


