ರಾಜ್ಯ

ಕೊಡಗಿನಲ್ಲಿ ಜಲಪ್ರಳಯ: ಪ್ರಾಣದ ಹಂಗು ತೊರೆದು ರಕ್ಷಣೆಯಲ್ಲಿ ತೊಡಗಿರುವ ಎನ್ ಡಿಆರ್ ಎಫ್ ಸಿಬ್ಬಂದಿ

ಮಂಜಿನ ಜಿಲ್ಲೆ ಕೊಡಗಿನಲ್ಲಿ ಮಳೆರಾಯ ತನ್ನ ರೌದ್ರಾವತಾರ ಮುಂದುವರೆಸಿದ್ದು, ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದೆ.

ಕೊಡಗಿನಲ್ಲಿ ಜಲಪ್ರಳಯ: ಪ್ರಾಣದ ಹಂಗು ತೊರೆದು ರಕ್ಷಣೆಯಲ್ಲಿ ತೊಡಗಿರುವ ಎನ್ ಡಿಆರ್ ಎಫ್ ಸಿಬ್ಬಂದಿ
ಪ್ರಾಣದ ಹಂಗು ತೊರೆದು ರಕ್ಷಣೆಯಲ್ಲಿ ತೊಡಗಿರುವ ಎನ್ ಡಿಆರ್ ಎಫ್ ಸಿಬ್ಬಂದಿ
Published On :
ಕೊಡಗು: ಮಂಜಿನ ಜಿಲ್ಲೆ ಕೊಡಗಿನಲ್ಲಿ ಮಳೆರಾಯ ತನ್ನ ರೌದ್ರಾವತಾರ ಮುಂದುವರೆಸಿದ್ದು, ಹಿಂದೆಂದೂ ಕಂಡು ಕೇಳರಿಯದ ರೀತಿಯಲ್ಲಿ ಪ್ರವಾಹ ಪರಿಸ್ಥಿತಿ ಉಲ್ಬಣಿಸಿದೆ.
ಮಳೆ ತಂದಿಟ್ಟ ಅವಾಂತರಕ್ಕೆ ಕೊಡಗಿನಲ್ಲಿ ಈ ವರೆಗೆ 10ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಹಲವರು ಕಣ್ಮರೆಯಾಗಿದ್ದಾರೆ. ನಾಪತ್ತೆಯಾದವರ ದೇಹವೂ ಸಿಕ್ಕಿಲ್ಲ. ಮಾಹಿತಿಯೂ ಲಭ್ಯವಾಗಿಲ್ಲ. ಹಲವು ಮನೆಗಳು ಕುಸಿದು ಬಿದ್ದಿವೆ. ಗಾಯದ ಮೇಲೆ ಬರೆ ಎಳೆದಂತೆ ಭಾರಿ ಮಳೆಯಿಂದಾಗಿ ವಿದ್ಯುತ್​ ಕಂಬಗಳು ನೆಲಕ್ಕುರುಳಿದ್ದು, ಜಿಲ್ಲೆಯಾದ್ಯಂತ ವಿದ್ಯುತ್​ ಕಡಿತವಾಗಿದೆ. ಹೀಗಾಗಿ ಕೊಡಗಿಗೆ ಭಾಗಶಃ ಕತ್ತಲೆ ಕವಿದಿದ್ದು, ಮೊಬೈಲ್​ ರೀಚಾರ್ಜ್​ ಕೂಡ ಆಗದೇ ಸಂಪರ್ಕ ಕಡಿತವಾಗುತ್ತಿದೆ. 
ಗುಡ್ಡ ಕುಸಿತ ಪ್ರಕರಣಗಳು ಸಾಮಾನ್ಯ ಎಂಬಂತಾಗಿದ್ದು, ಕುಸಿದ ಒಂದು ಗುಡ್ಡವನ್ನು ತೆರವು ಮಾಡುತ್ತಿರುವಾಗಲೇ ಮತ್ತೆಲ್ಲೋ ಮತ್ತೊಂದು ಗುಡ್ಡ ಜಾರಿಕೊಂಡು ಬೀಳುತ್ತಿದೆ. ಗುರುವಾರ ಕೊಡಗು-ಮಂಗಳೂರು ಮಾರ್ಗದಲ್ಲಿ ಗುಡ್ಡ ಕುಸಿದು ಸಂಚಾರವೇ ಸ್ತಬ್ಧವಾಗಿತ್ತು. ಶುಕ್ರವಾರ ರಾತ್ರಿ ಜೋಡುಪಾಲ ಎಂಬಲ್ಲಿ ಗುಡ್ಡವೊಂದು ಕುಸಿದಿದೆ.
ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯಾಚರಣೆ
ಇನ್ನು ಕೊಡಗಿನಲ್ಲಿ ಉಂಟಾಗಿರುವ ಪ್ರವಾಹಕ್ಕೆ ಸೆಡ್ಡು ಹೊಡೆದಿರುವ ಎನ್ ಡಿಆರ್ ಎಫ್ ಸಿಬ್ಬಂದಿ ತಮ್ಮ ಪ್ರಾಣದ ಹಂಗು ತೊರೆದು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ. ಪ್ರವಾಹದ ನೀರಿಗೆ ಅಡ್ಡಲಾಗಿ ಹಗ್ಗ ಕಟ್ಟಿ ಒಂದು ಬದಿಯಿಂದ ಮತ್ತೊಂದು ಬದಿಗೆ ನಿರಾಶ್ರಿತರನ್ನು ಸುರಕ್ಷಿತವಾಗಿ ಕರೆದೊಯ್ಯುತ್ತಿರುವ ದೃಶ್ಯ  ಇದೀಗ ವೈರಲ್ ಆಗಿದೆ.  ಕೊಂಚ ಹೆಚ್ಚು ಕಡಿಮೆಯಾದರೂ ನಿರಾಶ್ರಿತರೊಂದಿಗೆ ಸಿಬ್ಬಂದಿಗಳೇ ನೀರಿನಲ್ಲಿ ಕೊಚ್ಚಿ ಹೋಗುವ ಅಪಾಯವಿದೆ. ಹೀಗಿದ್ದೂ ನಿರಾಶ್ರಿತರ ರಕ್ಷಣೆಗೆ ಸಿಬ್ಬಂದಿ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ.
ಹೆಗಲ ಮೇಲೆ ಸ್ಥಳೀಯರನ್ನ ಹೊತ್ತೊಯ್ದ ಪಿಎಸ್ ಐ ಮಂಜುನಾಥ್
ಕರಾವಳಿ, ಮಲೆನಾಡಿನಲ್ಲಿ ಎಡಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಅಲ್ಲಿಯ ಜನರು ಬೀದಿಗೆ ಬಂದಿದ್ದು, ಜೀವವನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆಗಳನ್ನು ದಾಟುತ್ತಿದ್ದಾರೆ. ಸಂಪಾಜೆಯ  ಜೋಡುಪಾಳದಲ್ಲಿ ಗುಡ್ಡ ಕುಸಿತವಾದ ಹಿನ್ನೆಲೆಯಲ್ಲಿ ಪಿಎಸ್ ಐ ಮಂಜುನಾಥ್ ಹೆಗಲ ಮೇಲೆ ಸ್ಥಳೀಯರನ್ನ ಹೊತ್ತೊಯ್ದ ಸುರಕ್ಷಿತ ಸ್ಥಳಕ್ಕೆ ಸಾಗಿಸುತ್ತಿದ್ದಾರೆ. ಜನರನ್ನು ಒಂದೆಡೆಯಿಂದ ಮತ್ತೊಂದು ಕಡೆಗೆ ಸಾಗಿಸಲು ಮಾರ್ಗ ಮಧ್ಯೆ ಹಗ್ಗ ಕಟ್ಟಲಾಗಿದ್ದು, ರಕ್ಷಣಾ ಕಾರ್ಯ ಮುಂದುವರೆದಿದೆ. ಸ್ಥಳದಲ್ಲಿ ಮಂಜುನಾಥ್‍ರ ಕೆಲಸ ಸ್ಥಳೀಯರ ಮೆಚ್ಚುಗೆಗೆ ಪಾತ್ರವಾಗಿದೆ. ರಭಸದಿಂದ ಹರಿಯುತ್ತಿರುವ ನೀರನ್ನು ದಾಟಿಸಲು ಮಂಜುನಾಥ್ ತಮ್ಮ ಭುಜದ ಮೇಲೆ ಹೊತ್ತು ಸಾಗಿಸುತ್ತಿರುವ ದೃಶ್ಯ ಇದೀಗ ವೈರಲ್ ಆಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.