ಅನುಮತಿಯಿಲ್ಲದೆಯೇ ದಲಿತ ಸಂಘಟನೆಗಳಿಂದ ವಿಚಾರ ಸಂಕಿರಣ: ತಡೆಯೊಡ್ಡಿದ ಚುನಾವಣಾ ಆಯೋಗ
ಅನುಮತಿ ಪಡೆಯದೆಯೇ ಮೈಸೂರಿನ ದಲಿತ ಸಂಘಟನೆಗಳು ನಡೆಸುತ್ತಿದ್ದ 'ಸಂವಿಧಾನ ರಕ್ಷಿಸಿ' ವಿಚಾರ ಸಂಕಿರಣಕ್ಕೆ, ಕಾರ್ಯಕ್ರಮದ ಮಧ್ಯದಲ್ಲಿ ಚುನಾವಣಾ ಆಯೋಗ ತಡೆಯೊಡ್ಡಿದ ಘಟನೆ ಶನಿವಾರ ನಡೆದಿದೆ...

Published On :
ಮೈಸೂರು: ಅನುಮತಿ ಪಡೆಯದೆಯೇ ಮೈಸೂರಿನ ದಲಿತ ಸಂಘಟನೆಗಳು ನಡೆಸುತ್ತಿದ್ದ 'ಸಂವಿಧಾನ ರಕ್ಷಿಸಿ' ವಿಚಾರ ಸಂಕಿರಣಕ್ಕೆ, ಕಾರ್ಯಕ್ರಮದ ಮಧ್ಯದಲ್ಲಿ ಚುನಾವಣಾ ಆಯೋಗ ತಡೆಯೊಡ್ಡಿದ ಘಟನೆ ಶನಿವಾರ ನಡೆದಿದೆ.
ದೇವರಾಜ ಮೊಹಲ್ಲಾದ ಆಲಮ್ಮನವರ ಛತ್ರದಲ್ಲಿ ನಡೆದ ಈ ವಿಚಾರ ಸಂಕಿರಣ/ಸಂವಾದ ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಡಾ.ಕೆ.ಮರುಳ ಸಿದ್ದಪ್ಪ, ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರ ದಿನೇಶ್ ಅಮೀನ್ ಮಟ್ಟು ಅವರು ಹಾಜರಿದ್ದರು.
ಕಾರ್ಯಕ್ರಮ ಒಂದು ರೀತಿ ಆಡಳಿತಾರೂಢ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರ ಚುನಾವಣಾ ಪ್ರಚಾರ ಸಭೆಯಾಗಿ ಬದಲಾದಂತಿತ್ತು.
ಕಾರ್ಯಕ್ರಮದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ದರಾಮಯ್ಯ ಅವರು ಭಾಷಣ ಮಾಡುತ್ತಿದ್ದ ಸಂದರ್ಭದಲ್ಲಿ ವೇದಿಕೆಯತ್ತ ಆಗಮಿಸಿದ ಚುನಾವಣಾ ಆಯೋಗದ ಅಧಿಕಾರಿಗಳು, ಕಾರ್ಯಕ್ರಮವನ್ನು ಕೂಡಲೇ ನಿಲ್ಲಿಸುವಂತೆ ಸೂಚಿಸಿದರು. ಇದಕ್ಕೆ ಸ್ಥಳದಲ್ಲಿದ್ದ ಕೆಲ ಸದಸ್ಯರು ವಿರೋಧ ವ್ಯಕ್ತಪಡಿಸಿದರು. ಈ ವೇಳೆ ಕಾರ್ಯಕ್ರಮ ನಡೆಯಲು ಆಯೋಜಕರು ಚುನಾವಣಾ ಆಯೋಗದ ಬಳಿಯಾಗಲೀ ಅಥವಾ ಪೊಲೀಸರ ಬಳಿಯಾಗಲೀ ಯಾವುದೇ ಅನುಮತಿಗಳನ್ನು ಪಡೆದುಕೊಂಡಿಲ್ಲ. ಹೀಗಾಗಿ ಕಾರ್ಯಕ್ರಮವನ್ನು ನಿಲ್ಲಿಸುವಂತೆ ಸೂಚಿಸಿದರು.
ಕಾರ್ಯಕ್ರಮದ ವಿರುದ್ದ ನಮಗೆ ದೂರು ಬಂದಿತ್ತು. ಹೀಗಾಗಿ ಕಾರ್ಯಕ್ರಮ ನಿಲ್ಲಿಸಿದೆವು. ಕಾರ್ಯಕ್ರಮದ ವಿಡಿಯೋವನ್ನು ಸೆರೆ ಹಿಡಿಯಲಾಗಿತ್ತು. ವಿಡಿಯೋ ಪರಿಶೀಲನೆ ಬಳಿಕ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಚುನಾವಣಾಧಿಕಾರಿಗಳು ಹೇಳಿದ್ದಾರೆ.
ಕಾರ್ಯಕ್ರಮಕ್ಕೆ ಆಗಮಿಸಿದ್ದವರಿಗೆ ಭೋಜನಕೂಟವನ್ನು ಆಯೋಜಿಸಲಾಗಿತ್ತು. ಇದಕ್ಕೆ ಚುನಾವಣಾ ಆಯೋಗದ ಅಧಿಕಾರಿಗಳು ಅನುಮತಿ ನೀಡಲು ನಿರಾಕರಿಸಿದ್ದರು. ನಂತರ ಆಯೋಜಕರು ಅದಿಕಾರಿಗಳ ಬಳಿ ಮನವಿ ಮಾಡಿಕೊಂಡ ಬಳಿಕ ಅನುಮತಿ ನೀಡಲಾಯಿತು.
ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದಿಂದ ಬುದ್ಧ-ಬಸವ-ಅಂಬೇಡ್ಕರ್ ಜನ್ಮ ದಿನಾಚರಣೆ ಅಂಗವಾಗಿ ನಿನ್ನೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.
ಆಯೋಜಕರು ಕಾರ್ಯಕ್ರಮಕ್ಕೆ ಚುನಾವಣಾ ಆಯೋಗ, ಪೊಲೀಸ್ ಇಲಾಖೆಯ ಅನುಮತಿ ಪಡೆದಿರಲಿಲ್ಲ. ಅನುಮತಿ ಇಲ್ಲದೆಯೇ ಕಾರ್ಯಕ್ರಮ ನಡೆಸುತ್ತಿದ್ದೇವೆಂದು ಆರಂಭದಲ್ಲಿಯೇ ಹೇಳಿದ್ದರು.
ಕಾರ್ಯಕ್ರಮ ನಡೆಸಲು ಚುನಾವಣಾ ಆಯೋಗದ ಬಳಿ ಏ.16 ರಂದು ಅನುಮತಿ ಕೇಳಲಾಗಿತ್ತು. ಆದರೆ, ಅನುಮತಿ ನಿರಾಕರಿಸಿದ್ದರು. ನಂತರ ರಾಜಕೀಯ ನಾಯಕರಿಗೆ ಅನುಮತಿ ನೀಡಿ ಲಕ್ಷದಷ್ಟು ಜನರನ್ನು ಸೇರಿಸಿ ಕಾರ್ಯಕ್ರಮ ನಡೆಸಬಹುದು ಎಂದಿದ್ದರು. ನಂತರ ಪೊಲೀಸರೂ ಕೂಡ ಅನುಮತಿ ನೀಡಲಿಲ್ಲ. ಆದರೂ, ಕಾರ್ಯಕ್ರಮ ನಡೆಸುತ್ತಿರುವುದಾಗಿ ಪೊಲೀಸರಿಗೆ ಮಾಹಿತಿ ನೀಡಿದ್ದೆವು ಎಂದು ಸಾಮಾಜಿಕ ಕಾರ್ಯಕರ್ತ ಪಿಎ.ಮಲ್ಲೇಶ್ ಅವರು ಹೇಳಿದ್ದಾರೆ.
ಭಾಷಣದ ಸಂದರ್ಭದಲ್ಲಿ ಮಲ್ಲೇಶ್ ಅವರು ಬಿಜೆಪಿ ವಿರುದ್ಧ ಕಿಡಿಕಾರುತ್ತಾ ಕಾಂಗ್ರೆಸ್ ಪಕ್ಷವನ್ನು ಪ್ರಶಂಸಿಸಿದರು. ನರೇಂದ್ರ ಮೋದಿಯವರು ಬಿಜೆಪಿಗೆ ಪ್ರಧಾನಮಂತ್ರಿಯೇ ಹೊರತು, ದೇಶಕ್ಕಲ್ಲ. ಪ್ರಧಾನಮಂತ್ರಿಯಾಗಿ ಅವರು ಕೇವಲ ಬಿಜೆಪಿ ಬಗ್ಗೆಯಷ್ಟೇ ಮಾತನಾಡುತ್ತಾರೆ. ಜನರ ಹಕ್ಕುಗಳನ್ನು ಬಿಜೆಪಿ ಕಿತ್ತುಕೊಂಡಿದೆ. ಬಿಜೆಪಿ ವಿಫಲಗೊಂಡ ಪಕ್ಷವಾಗಿದ್ದು, ದಲಿತರು ಹಾಗೂ ಅಲ್ಪಸಂಖ್ಯಾತರನ್ನು ಹತ್ಯೆ ಮಾಡುತ್ತಿದೆ. ದೇಶದಲ್ಲಿ ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಿವೆ. ಬಿಜೆಪಿಗೆ ಮತ ಹಾಕಬೇಡಿ. ಅವರಿಗೆ ಪಾಠ ಕಲಿಸಬೇಕಿದೆ ಎಂದು ಹೇಳಿದ್ದರು.
ನಂತರ ಮಾತನಾಡಿದ ಸಾಹಿತಿ ಕೆ.ಮರುಳ ಸಿದ್ದಪ್ಪ ಅವರು, ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ವಿರುದ್ಧ ತೀವ್ರವಾಗಿ ಕಿಡಿಕಾರಿದರು. ಮೋದಿ ಹಾಗೂ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ದೊಡ್ಡ ಷಡ್ಯಂತ್ರವೊಂದರನ್ನು ರಚಿಸುತ್ತಿದ್ದಾರೆಂದು ತಿಳಿಸಿದರು.
ನಂತರ ಮೈಸೂರು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪಿ.ಮಹೇಶ್ ಚಂದ್ರ ಗುರು ಅವರ ಅಮಾನತನ್ನು ತೀವ್ರವಾಗಿ ಖಂಡಿಸಿದರು. ಇಂತಹ ಪ್ರಾಧ್ಯಾಪಕರೇಕೆ ರಾಜಕೀಯ ಕಾರ್ಯಕ್ರಮಗಳಲ್ಲಿ ಭಾಗವಹಿಸಬಾರದು ಎಂದು ಪ್ರಶ್ನಿಸಿದರು.
ನಂತರ ಮಾತನಾಡಿದ ದಿನೇಶ್ ಅಮೀನ್ ಮಟ್ಟು ಅವರು, ಸಂವಿಧಾನವನ್ನು ನಾವು ರಕ್ಷಣೆ ಮಾಡಬೇಕಿದೆ. ಸಂವಿಧಾನದ ಪರ ಹಾಗೂ ವಿರುದ್ಧವಾಗಿ ಯಾರಿದ್ದಾರೆಂಬುದನ್ನು ನಾವು ತಿಳಿದುಕೊಳ್ಳಬೇಕಿದೆ. ಸಂವಿಧಾನವನ್ನು ರಕ್ಷಣೆ ಮಾಡಲು ಕಾಂಗ್ರೆಸ್ ಸರಿಯಾದ ಪಕ್ಷವಾಗಿದೆ ಎಂದಿದ್ದಾರೆ.
ಕಾರ್ಯಕ್ರಕ್ಕೆ ಬಹುಭಾಷಾ ನಟ ಪ್ರಕಾಶ್ ರಾಜ್ ಕೂಡ ಅಗಮಿಸಬೇಕಿತ್ತು. ಆದರೆ, ಕಾರಣಾಂತರಗಳಿಂದಾಗಿ ಅವರು ಪಾಲ್ಗೊಳ್ಳಲಾಗಿರಲಿಲ್ಲ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


