ಕದ್ದಿದ್ದ ಚಿನ್ನಾಭರಣ ವಾಪಸ್ ನೀಡಿ, ಲಾಕರ್ ನಲ್ಲಿಡುವಂತೆ ಸಲಹೆ ನೀಡಿದ 'ಪ್ರಾಮಾಣಿಕ' ಕಳ್ಳರು!
ಮಂಗಳೂರಿನ ಅಡುಮರೋಳಿಯ ಮನೆಯೊಂದರಿಂದ 99 ಪವನ್(ಸುಮಾರು 792 ಗ್ರಾಂ)ಚಿನ್ನಾಭರಣ ಹಾಗೂ 13 ಸಾವಿರ ರುಪಾಯಿ ನಗದು ಕಳವು...

Published On :
ಮಂಗಳೂರು: ಮಂಗಳೂರಿನ ಅಡುಮರೋಳಿಯ ಮನೆಯೊಂದರಿಂದ 99 ಪವನ್(ಸುಮಾರು 792 ಗ್ರಾಂ)ಚಿನ್ನಾಭರಣ ಹಾಗೂ 13 ಸಾವಿರ ರುಪಾಯಿ ನಗದು ಕಳವು ಮಾಡಿದ್ದ ಕಳ್ಳರು ಮೂರೇ ದಿನಗಳಲ್ಲಿ ಆಶ್ಚರ್ಯಕರ ರೀತಿಯಲ್ಲಿ ಕದ್ದ ಎಲ್ಲ ಚಿನ್ನಾಭರಣವಿದ್ದ ಚೀಲವನ್ನು ಅದೇ ಮನೆಯ ಅಂಗಳಕ್ಕೆ ಎಸೆದು ಹೋಗಿದ್ದಾರೆ. ಅಲ್ಲದೆ ಆ ಚೀಲದೊಂದಿಗೆ ಒಂದು ಚೀಟಿ ಬರೆದು ಅದರಲ್ಲಿ 'ಇಂತಹ ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿಡುವಂತೆ' ಸಲಹೆ ನೀಡಿದ್ದಾರೆ.
ಕಳೆದ ಸೆ.16ರಂದು ನಗರದ ಅಡುಮರೋಳಿಯ ಮಾರಿಕಾಂಬಾ ದೇವಸ್ಥಾನದ ಬಳಿಯ ಶೇಖರ್ ಕುಂದರ್ ಹಾಗೂ ಅವರ ಪತ್ನಿ ಕೆಲಸಕ್ಕೆ ಹೋಗಿದ್ದ ಸಮಯದಲ್ಲಿ ಹಾಡಹಗಲೇ ಮನೆಯ ಹಿಂದಿನ ಬಾಗಿಲು ಮುರಿದು 99 ಪವನು ತೂಕದ ವಿವಿಧ ಚಿನ್ನಾಭರಣಗಳು ಮತ್ತು 13,000 ರು. ನಗದು ಕಳವು ಮಾಡಿದ್ದರು. ನಿನ್ನೆ ಮಧ್ಯಾಹ್ನ 3 ಗಂಟೆ ವೇಳೆಗೆ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಅಷ್ಟೂ ಚಿನ್ನಾಭರಣವಿರುವ ಚೀಲವನ್ನು ಮನೆಯ ಅಂಗಳಕ್ಕೆ ಎಸೆದು ಹೋಗಿದ್ದಾರೆ. ಆ ಚೀಲದೊಂದಿಗೆ ಒಂದು ಚೀಟಿ ಇದ್ದು, ಅದರಲ್ಲಿ ತಾವು ಕಳ್ಳತನ ಮಾಡಿ ತಪ್ಪು ಮಾಡಿಬಿಟ್ಟೆವು. ಇಷ್ಟೊಂದು ಚಿನ್ನಾಭರಣವನ್ನು ಮನೆಯಲ್ಲಿಟ್ಟುಕೊಳ್ಳಬಾರದು. ಬೆಲೆ ಬಾಳುವ ವಸ್ತುಗಳನ್ನು ಬ್ಯಾಂಕ್ ಲಾಕರ್ ನಲ್ಲಿಡಬೇಕು ಎಂದು ಮನೆ ಮಾಲೀಕರಿಗೆ ಕಳ್ಳರು ಸಲಹೆ ನೀಡಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಚಿನ್ನವನ್ನು ಕೊಂಡೊಯ್ದವವರು ಯಾರು, ವಾಪಸ್ ತಂದದ್ದೇಕೆ ಎನ್ನುವುದು ತಿಳಿದು ಬಂದಿಲ್ಲ. ಬೈಕ್‌ನಲ್ಲಿ ಬಂದವರ ಸುಳಿವು ಲಭ್ಯವಾಗಿದೆ ಎಂದು ತನಿಖೆ ನಡೆಸುತ್ತಿರುವ ಕಂಕನಾಡಿ ನಗರ ಠಾಣೆಯ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


