ದಶಕಗಳ ಕನಸು ನನಸು: ಬೀದರ್-ಕಲ್ಬುರ್ಗಿ ನೂತನ ರೈಲು ಸಂಚಾರಕ್ಕೆ ಪ್ರಧಾನಿ ಮೋದಿ ಚಾಲನೆ
ಹೈದರಾಬಾದ್ ಕರ್ನಾಟಕ ಭಾಗದ ದಶಕಗಳ ಕನಸು ನನಸಾಗಿದ್ದು, ಬೀದರ್-ಕಲ್ಬುರ್ಗಿ ನಡುವಿನ ನೂತನ ರೈಲು ಸೇವೆಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.

Published On :
ಬೀದರ್: ಹೈದರಾಬಾದ್ ಕರ್ನಾಟಕ ಭಾಗದ ದಶಕಗಳ ಕನಸು ನನಸಾಗಿದ್ದು, ಬೀದರ್-ಕಲ್ಬುರ್ಗಿ ನಡುವಿನ ನೂತನ ರೈಲು ಸೇವೆಗೆ ಭಾನುವಾರ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದ್ದಾರೆ.
ಭಾನುವಾರ ಸಂಜೆ ಬೀದರ್‌ನಲ್ಲಿ ನಡೆದ ಸಮಾರಂಭದಲ್ಲಿ ಮೋದಿ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಿಸಿದರು. ಬೀದರ್-ಕಲಬುರಗಿ ನಡುವಿನ 104 ಕಿ.ಮೀ.ಮಾರ್ಗದಲ್ಲಿ ಡೆಮೋ ರೈಲು ಸಂಚಾರ ನಡೆಸಲಿದೆ. ಕಲಬುರಗಿಯಿಂದ 2 ಬಾರಿ, ಬೀದರ್‌ನಿಂದ 2 ಬಾರಿ ರೈಲು ಸಂಚಾರ ನಡೆಸಲಿದೆ. ಕಲಬುರಗಿ-ಬೀದರ್ ಮಾರ್ಗದಲ್ಲಿ 13 ನಿಲ್ದಾಣಗಳಿವೆ. ಮೊದಲು 383 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿತ್ತು. ನಂತರ 1,542 ಕೋಟಿ ಪರಿಷ್ಕೃತ ವೆಚ್ಚದಲ್ಲಿ ಯೋಜನೆ ಪೂರ್ಣಗೊಂಡಿದೆ.
ಈ ರೈಲು ಮಾರ್ಗ ಯೋಜನೆಗೆ 1999ರಲ್ಲಿ ಚಾಲನೆ ಸಿಕ್ಕಿತ್ತು. ಬಳಿಕ 2000ದ ಇಸವಿಯಲ್ಲಿ ಅಂದಿನ ರೈಲ್ವೆ ಸಚಿವ ಬಂಗಾರು ಲಕ್ಷ್ಮಣ್ ಅವರು ಯೋಜನೆಗೆ ಶಂಕುಸ್ಥಾಪನೆ ಮಾಡಿದ್ದರು. ಅಂತೆಯೇ 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸುವ ಭರವಸೆ ನೀಡಿದ್ದರು. ಮೊದಲು 369.7 ಕೋಟಿ ವೆಚ್ಚದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹೊಂದಲಾಗಿತ್ತು. ಆದರೆ, ಅನುದಾನದ ಕೊರತೆಯಿಂದಾಗಿ ಯೋಜನೆ ನೆನೆಗುದಿಗೆ ಬಿದ್ದಿತ್ತು. ಸಂಸದ ಮಲ್ಲಿಕಾರ್ಜುನ ಖರ್ಗೆ ಅವರು ರೈಲ್ವೆ ಸಚಿವರಾಗಿದ್ದಾಗ ಅನುದಾನ ಬಿಡುಗಡೆಯಾಯಿತು. ನಂತರ ಕಾಮಗಾರಿಗೆ ವೇಗ ಸಿಕ್ಕಿತು. ಇದೀಗ 16 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದೆ.
ಈ ರೈಲು ಮಾರ್ಗದಲ್ಲಿ 2 ಕಿ.ಮೀ.ಉದ್ದದ ಸುರಂಗ ಮಾರ್ಗವಿದೆ. ಮರಗುತ್ತಿ ಸುರಂಗ ಮಾರ್ಗದ ಕಾಮಗಾರಿ ಪೂರ್ಣಗೊಂಡಿದೆ. ಈ ರೈಲು ಮಾರ್ಗದಿಂದ ಕಲಬುರಗಿ ಹಾಗೂ ಬೀದರ್ ಜನರಿಗೆ ಅನುಕೂಲವಾಗಿದೆ. ಇನ್ನು ಇಂದಿನ ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯೆಲ್, ಸಚಿವ ಅನಂತ್ ಕುಮಾರ್, ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ರೈಲು ಉದ್ಘಾಟನೆ ಬಳಿಕ ಮಾತನಾಡಿದ ಪ್ರಧಾನಿ ಮೋದಿ, ಬೀದರ್ ಜಿಲ್ಲೆ ಪವಿತ್ರ ಪುಣ್ಯ ಭೂಮಿ ಎಂದು ಮೋದಿ ಶ್ಲಾಘಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


