ಬೆಂಗಳೂರು: ಹೆಣ್ಣುಮಗು ಹುಟ್ಟಿದ್ದಕ್ಕೆ ಪತ್ನಿಯ ಬೆನ್ನು ಮುರಿದ ಸಾಫ್ಟ್ ವೇರ್ ಎಂಜಿನೀಯರ್!
ಹೆಣ್ಣು ಮಗು ಜನಿಸಿದ ಕಾರಣಕ್ಕೆ ಅತ್ತೆ ಮನೆಯವರು ಮಾಡಿದ ಹಲ್ಲೆಯಿಂದಾಗಿ 29 ವರ್ಷದ ಮಹಿಳೆಯೊಬ್ಬರು ಬೆನ್ನು ಮೂಳೆ ಮುರಿದುಕೊಂಡು...

Published On :
ಬೆಂಗಳೂರು: ಹೆಣ್ಣು ಮಗು ಜನಿಸಿದ ಕಾರಣಕ್ಕೆ ಅತ್ತೆ ಮನೆಯವರು ಮಾಡಿದ ಹಲ್ಲೆಯಿಂದಾಗಿ 29 ವರ್ಷದ ಮಹಿಳೆಯೊಬ್ಬರು ಬೆನ್ನು ಮೂಳೆ ಮುರಿದುಕೊಂಡು ಆಸ್ಪತ್ರೆ ಸೇರಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಹರ್ಷಿತಾ ಆಸ್ಪತ್ರೆ ಸೇರಿರುವ ಮಹಿಳೆ, ಕಳೆದ ಮೂರು ವರ್ಷಗಳ ಹಿಂದೆ ಹರ್ಷಿತಾ ಮತ್ತು ಚೇತನ್ ದಂಪತಿಗೆ ಹೆಣ್ಣು ಮಗು ಜನಿಸಿತ್ತು. ಅಂದಿನಿಂದ ಇಂದಿನವರೆಗೆ ಪ್ರತಿನಿತ್ಯ ಅತ್ತೆ ಮನೆಯವರು ಆಕೆಗೆ ಕಿರುಕುಳ ನೀಡುತ್ತಿದ್ದು, ಈ ಸಂಬಂಧ ಜೀವನ್ ಭೀಮಾ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ಹರ್ಷಿತಾ ಪತಿ ನಗರದ ಪ್ರಮುಖ ಸಾಫ್ಟ್ ವೇರ್ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಚೇತನ್ ಸೇರಿದಂತೆ ಐವರ ವಿರುದ್ಧ ದೂರು ದಾಖಲಿಸಲಾಗಿದೆ.
ಜಾಲಹಳ್ಳಿ ನಿವಾಸಿಯಾದ ಹರ್ಷಿತಾ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ, ಈ ಹಿಂದೆ ಹಲವು ಬಾರಿ ತನ್ನ ಮೇಲೆ ಅತ್ತೆಮನೆಯವರಿಂದ ಹಲ್ಲೆ ನಡೆದಿದ್ದು, ನಾಲ್ಕು ಬಾರಿ ಪೊಲೀಸರ ಸಹಾಯಕ್ಕಾಗಿ ಮನವಿ ಮಾಡಿದ್ದೆ, ಆದರೆ ಇದು ಕೌಟುಂಬಿಕ ವಿಷಯ ಎಂದು ಪೋಲೀಸರು ನಿರ್ಲಕ್ಷ್ಯಿಸಿದರು ಎಂದು ಆಕೆ ಆರೋಪಿಸಿದ್ದಾರೆ. ಚೇತನ್ ಮತ್ತು ಆತನ ಪೋಷಕರಾದ ನಾಗರಾಜ್ ಮತ್ತು ನಾಗವೇಣಿ ನ್ಯೂ ತಿಪ್ಪಸಂದ್ರದಲ್ಲಿ ವಾಸಿಸುತ್ತಿದ್ದಾರೆ.
ಮೂರು ವರ್ಷದ ಹಿಂದೆ ನನ್ನ ಸಹೋದರಿ ಹರ್ಷಿತಾ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ಆಕೆಯ ಅತ್ತೆ ಮಾವನ ಕೋಪಕ್ಕೆ ಕಾರಣವಾಯಿತು. ತಮ್ಮ ಸಂಬಂಧಿಕರ ಮಗುವೊಂದನ್ನು ದತ್ತು ಪಡೆಯಲು ಚೇತನ್ ನಿರ್ಧರಿಸಿದ್ದ, ಆದರೆ ಇದಕ್ಕೆ ಹರ್ಷಿತಾ ಒಪ್ಪಲಿಲ್ಲ, ಅಂದಿನಿಂದ ನನ್ನ ಸಹೋದರಿಗೆ ಕಿರುಕುಳ ನೀಡಲು ಆರಂಭಿಸಿದರು. ಕೆಲ ತಿಂಗಳ ಹಿಂದೆ ಆಕೆಗೆ ನಿದ್ರೆ ಮಾತ್ರೆ ಸೇವಿಸುವಂತೆ ಬಲವಂತ ಮಾಡಿದ್ದರು, ಅಕ್ಟೋಬರ್ 29 ರಂದು ಹರ್ಷಿತಾ ಮೇಲೆ ಹಲ್ಲೆ ನಡೆಸಿ ಆಕೆಯ ಬೆನ್ನು ಮೂಳೆ ಮುರಿದಿದ್ದಾರೆ ಎಂದು ಹರ್ಷಿತಾ ಸಹೋದರ ಮಿಥುನ್ ಆರೋಪಿಸಿದ್ದಾರೆ.
ಹರ್ಷಿತಾ ಬೆನ್ನು ಮೂಳೆ ಸ್ಥಳಾಂತರಗೊಂಡಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನವೆಂಬರ್ 5 ರಂದು ಪೊಲೀಸರಿಗೆ ದೂರು ನೀಡಿ ಚೇತನ್ ತಂದೆ ನಾಗರಾಜ್, ನಾಗವೇಣಿ, ಚೇತನ್, ಆತನ ಸಹೋದರಿ ಚಿತ್ರ ಮತ್ತು ಆಕೆಯ ಪತಿ ವೇಣುಗೋಪಾಲ್ ವಿರುದ್ಧ ದೂರು ದಾಖಲಾಗಿದೆ, ಪೊಲೀಸ್ ಅಧಿಕಾರಿಗಳು ಆಸ್ಪತ್ರೆಗೆ ಆಗಮಿಸಿ ಹರ್ಷಿತಾ ಹೇಳಿಕೆ ಪಡೆದಿದ್ದಾರೆ, ಆದರೆ ಇದುವರೆಗೆ ಅವರ ವಿರುದ್ದ ಯಾವುದೇ ಕ್ರಮ ಕೈಗೊಂಡಿಲ್ಲ. ತಮಗಿರುವ ಶಿಫಾರಸು ಬಳಸಿ ಪೊಲೀಸರು ತನಿಖೆ ನಡೆಸದಂತೆ ಒತ್ತಡ ಹೇರುತ್ತಿದ್ದಾರೆ ಎಂದು ಮಿಥುನ್ ಆರೋಪಿಸಿದ್ದಾರೆ.
ಹರ್ಷಿತಾ ರ ಮೂರು ವರ್ಷದ ಮಗಳಾದ ಗಣಿಕಾ ಹೆಸರಲ್ಲಿ 20 ಲಕ್ಷ ಫಿಕ್ಸೆಡ್ ಡಿಪಾಸಿಟ್ ಇಡುವಂತೆ ಚೇತನ್ ಪೋಷಕರು ತಮ್ಮ ಮೇಲೆ ಒತ್ತಡ ಹಾಕುತ್ತಿದ್ದರು. ಜೊತೆಗೆ ಮಗುವಿನ ಎಲ್ಲಾ ಖರ್ಚು ವೆಚ್ಚಗಳನ್ನು ನಾವೇ ಭರಿಸುವಂತೆ ಒತ್ತಾಯ ಮಾಡುತ್ತಿದ್ದರು ಎಂದು ಮಿಥುನ್ ದೂರಿದ್ದಾರೆ, ಈ ಸಂಬಂಧ ದೂರು ದಾಖಲಿಸಿಕೊಂಡಿದ್ದು ಎಫ್ಐಆರ್ ಹಾಕಲಾಗಿದ್ದು, ಬಂಧಿಸಲು ಹಿರಿಯ ಅಧಿಕಾರಿಗಳು ಅನುಮತಿಗಾಗಿ ಕಾಯುತ್ತಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


