ಇಂದು ಟಿಪ್ಪು ಜಯಂತಿ: ಬೆಂಗಳೂರು ನಗರದಲ್ಲಿ ಬಿಗಿ ಭದ್ರತೆ
ಮೈಸೂರು ಹುಲಿ 18ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಟಿಪ್ಪು ಸುಲ್ತಾನ್ ಜಯಂತಿ ಇಂದು. ರಾಜ್ಯ ಸರ್ಕಾರ ಇಂದು ಆಯೋಜಿಸಿರುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ...

Published On :
ಬೆಂಗಳೂರು: ಮೈಸೂರು ಹುಲಿ 18ನೇ ಶತಮಾನದಲ್ಲಿ ಆಳ್ವಿಕೆ ನಡೆಸಿದ ಟಿಪ್ಪು ಸುಲ್ತಾನ್ ಜಯಂತಿ ಇಂದು. ರಾಜ್ಯ ಸರ್ಕಾರ ಇಂದು ಆಯೋಜಿಸಿರುವ ಟಿಪ್ಪು ಜಯಂತಿ ಕಾರ್ಯಕ್ರಮಕ್ಕೆ ತೀವ್ರ ಭದ್ರತೆ ಏರ್ಪಡಿಸಲಾಗಿದೆ. ಎರಡು ವರ್ಷಗಳ ಹಿಂದೆ ಟಿಪ್ಪು ಜಯಂತಿ ಸಂದರ್ಭದಲ್ಲಿ ಕೊಡಗಿನಲ್ಲಿ ಅಹಿತಕರ ಘಟನೆ ನಡೆದಿರುವುದರಿಂದ ಈ ಬಾರಿ ರಾಜ್ಯಾದ್ಯಂತ ಬಿಗಿ ಭದ್ರತೆ ಕಲ್ಪಿಸಲಾಗಿದೆ. ಅದರಲ್ಲೂ ಬೆಂಗಳೂರಿನಲ್ಲಿ ಭದ್ರತೆ ತುಸು ಹೆಚ್ಚಾಗಿದೆ.
ನಗರದ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.ಟಿಪ್ಪು ಜಯಂತಿ ಪ್ರಯುಕ್ತ ನಗರದಲ್ಲಿ ಯಾವುದೇ ಮೆರವಣಿಗೆಗಳಿಗೆ ಅವಕಾಶ ನೀಡಲಾಗಿಲ್ಲ. ರಾಜ್ಯ ಸರ್ಕಾರದಿಂದ ಮಾತ್ರ ಕಾರ್ಯಕ್ರಮವಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆ ಜೊತೆ ಮಾತನಾಡಿದ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್, ಅದು ಟಿಪ್ಪು ಜಯಂತಿ ಪರವಾಗಿರಬಹುದು ಅಥವಾ ವಿರೋಧವಾಗಿರಬಹುದು, ನಾವು ಯಾವುದೇ ಮೆರವಣಿಗೆಗಳಿಗೆ ಅವಕಾಶ ನೀಡುವುದಿಲ್ಲ. ಸರ್ಕಾರವೇ ನಗರದ ವಿವಿಧ ಭಾಗಗಳಲ್ಲಿ ಟಿಪ್ಪು ಜಯಂತಿಯನ್ನು ಏರ್ಪಡಿಸಿದ್ದು ಅದಕ್ಕೆ ನಾವು ಸಕಲ ವ್ಯವಸ್ಥೆಗಳನ್ನು ಕಲ್ಪಿಸಿದ್ದೇವೆ. ಪೊಲೀಸರು ಮತ್ತು ನಗರ ಪೊಲೀಸ್ ಅಧಿಕಾರಿಗಳು ಹೊರತುಪಡಿಸಿ 30 ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪ್ಲಟೂನ್ ಗಳು ಮತ್ತು 25 ಸೇನಾ ಪ್ಲಟೂನ್ ಗಳನ್ನು ನಿಯೋಜಿಸಲಾಗಿದೆ. ಬೆಂಗಳೂರು ನಗರದಾದ್ಯಂತ 11 ಸಾವಿರ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ನಿತ್ಯದ ಪೊಲೀಸರ ಜೊತೆ ಗೃಹ ರಕ್ಷಕ ಸಿಬ್ಬಂದಿ ಕೂಡ ಇರುತ್ತಾರೆ ಎಂದು ಸುನಿಲ್ ಕುಮಾರ್ ತಿಳಿಸಿದರು.
ಟಿಪ್ಪು ಜಯಂತಿ ಕಾರ್ಯಕ್ರಮದ ಹೆಸರಿನಲ್ಲಿ ಯಾರಾದರೂ ಶಾಂತಿಗೆ ಧಕ್ಕೆ ತಂದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಲ್ಲಿಯವರೆಗೆ ತಡೆಗಟ್ಟುವಿಕೆ ಕ್ರಮವಾಗಿ ಯಾರನ್ನೂ ಬಂಧಿಸಿಲ್ಲ. ಆದರೆ ಪರಿಸ್ಥಿತಿ ಬಿಗಡಾಯಿಸಿದರೆ ಸೆಕ್ಷನ್ 144ನ್ನು ಜಾರಿಗೆ ತರುತ್ತೇವೆ ಎಂದು ಹೇಳಿದರು.
ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಎರಡು ವರ್ಷಗಳ ಹಿಂದೆ ಟಿಪ್ಪು ಜಯಂತಿಯನ್ನು ಜಾರಿಗೆ ತಂದಿತ್ತು.
ಬಿಜೆಪಿ ಸೇರಿದಂತೆ ಕೆಲ ಬಲ ಪಂಥೀಯ ಗುಂಪುಗಳು ಮತ್ತು ಕೊಡವ ಸಮುದಾಯದ ಸದಸ್ಯರು ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಟಿಪ್ಪು ಹಿಂದೂ ಧರ್ಮದ ಪರಮ ವೈರಿಯಾಗಿದ್ದು, ಹಲವು ಹಿಂದೂಗಳನ್ನು ಹತ್ಯೆಗೈದಿದ್ದು ಇನ್ನು ಹಲವರನ್ನು ಇಸ್ಲಾಂ ಧರ್ಮಕ್ಕೆ ಸೇರುವಂತೆ ಒತ್ತಾಯಿಸುತ್ತಿದ್ದನು ಎಂದು ಆರೋಪಿಸುತ್ತಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


